ಬಳ್ಪದಲ್ಲಿ ಕಾರಿನ ಢಿಕ್ಕಿಗೊಳಗಾಗಿ ಬಂಪರ್ ಒಳಗೆ ಸೇರಿ 70 ಕಿ.ಮೀ. ಪ್ರಯಾಣಿಸಿದ ನಾಯಿ !

0

ಕಾರಿನ ಬಂಪರಿನೊಳಗೆ ಸಿಲುಕಿಕೊಂಡಿದ್ದ ನಾಯಿಯೊಂದು ಸುಮಾರು 70 ಕಿಲೋಮೀಟರ್ ಸಾಗಿ ಯಾವುದೇ ಗಾಯಗಳಾಗದೆ ಆರಾಮವಾಗಿ ಬಂಪರ್ ಒಳಗಿನಿಂದ ಇಳಿದು ಹೋದ ವಿಚಿತ್ರ ಘಟನೆಯೊಂದು ನಡೆದಿದೆ.

ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ತೂರಿಗೆ ವಾಪಾಸಾಗುತ್ತಿದ್ದ ದಾರಿ ಮಧ್ಯೆ ಬಳ್ಪದಲ್ಲಿ ನಾಯಿಯೊಂದು ಕಾರಿಗೆ ಡಿಕ್ಕಿ ಹೊಡೆಯಿತು.

ತಕ್ಷಣವೇ ಸುಬ್ರಹ್ಮಣ್ಯ ಅವರು ಕಾರನ್ನು ನಿಲ್ಲಿಸಿದ್ದು, ಕಾರಿನ ಸುತ್ತಮುತ್ತ ನಾಯಿಗಾಗಿ ಹುಡುಕಾಡಿದ್ದಾರೆ.
ಆದರೆ ನಾಯಿ ಅಲ್ಲಿಂದ ಎಲ್ಲಿ ಹೋಗಿದೆ ಎನ್ನುವುದನ್ನು ಊಹಿಸಲು ಸುಬ್ರಹ್ಮಣ್ಯ ಅವರಿಗೆ ಕಷ್ಟವಾಗಿತ್ತು.

ಅಲ್ಲಿಂದ ನೇರವಾಗಿ ಕಬಕದ ತನ್ನ ಮನೆಗೆ ಬಂದು ಕಾರನ್ನು ಪರಿಶೀಲಿಸಿದಾಗ ಬಂಪರ್ ನ ಗ್ರಿಲ್ ತುಂಡಾಗಿರುವುದು ಗಮನಕ್ಕೆ ಬಂದಿತ್ತು.

ತುಂಡಾದ ಗ್ರಿಲ್ ಮಧ್ಯೆ 70 ಕಿಲೋಮೀಟರ್ ಹಿಂದೆ ವಾಹನಕ್ಕೆ ಡಿಕ್ಕಿಯಾದ ನಾಯಿ ಪ್ರತ್ಯಕ್ಷವಾಯಿತು.

ನಾಯಿಯನ್ನು ಬಂಪರ್ ಒಳಗಿನಿಂದ ತೆಗೆಯಲಾಗದ ಸ್ಥಿತಿಯಲ್ಲಿದ್ದ ಕಾರಣ ಪಕ್ಕದ ಗ್ಯಾರೇಜ್ ಗೆ ತೆರಳಿ ನಾಯಿಯನ್ನು ಹೊರ ತೆಗೆಯಲು ವಿನಂತಿಸಿದರು.ಗ್ಯಾರೇಜ್ ಮಂದಿ ಬಂಪರ್ ಬಿಚ್ಚಿ ನಾಯಿಯನ್ನು ಸುರಕ್ಷಿತವಾಗಿ ಕಾರಿಂದ ಹೊರ ತೆಗೆದಿದ್ದಾರೆ.

ಸುಮಾರು 70 ಕಿಲೊಮೀಟರ್ ವರೆಗೆ ಕಾರಿನ ಬಂಪರ್ ಒಳಗೇ ಇದ್ದ ನಾಯಿ ಆರಾಮವಾಗಿ ಹೊರಗೆ ಬಂದು ಅಪರಿಚಿತ ಸ್ಥಳವಾದ ಕಾರಣ ಕೊಂಚ ಗಲಿಬಿಲಿಗೊಂಡಿತು.