ಚೆಂಬು ಗ್ರಾಮಸಭೆ : ಸಭೆಗೆ ಬಾರದ ಇಂಜಿನಿಯರ್‌ಗಳು, ಗ್ರಾಮಸ್ಥರಿಂದ ಆಕ್ರೋಶ

0


ಕಳೆದ ಹಲವಾರು ಗ್ರಾಮಸಭೆಗಳಿಗೆ ನಿರಂತರವಾಗಿ ಗೈರುಹಾಜರಾಗುತ್ತಿರುವ ಪಂಚಾಯತರಾಜ್, ಲೋಕೋಪಯೋಗಿ, ಮತ್ತು ಗ್ರಾಮ ಸಡಕ್ ಇಂಜಿನಿಯರ್ ಗಳ ಬಗ್ಗೆ ಗ್ರಾಮಸ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಘಟನೆ ಚೆಂಬು ಗ್ರಾಮದ ಗ್ರಾಮಸಭೆಯಲ್ಲಿ ನಡೆಯಿತು.


ಫೆ.೨ ರಂದು ಚೆಂಬು ಗ್ರಾಮದ ಗ್ರಾಮಸಭೆಯು ಪಂಚಾಯತ್ ಸಭಾಭಾವನದಲ್ಲಿ ಅಧ್ಯಕ್ಷರಾದ ಕುಸುಮರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೀನುಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಶ್ರೀಮತಿ ಸ್ನೇಹ ನೋಡೆಲ್ ಅಧಿಕಾರಿಯಾಗಿದ್ದರು.ಗ್ರಾ. ಪ. ಸದಸ್ಯರಾದ ಗಿರೀಶ್ ಹೊಸೂರು ಸ್ವಾಗತಿಸಿದರು. ಗತಸಭೆಯ ವರದಿಯನ್ನು ಪಂಚಾಯತ್ ಸಿಬ್ಬಂದಿ ವಿಜಯ ಹೆಚ್ ಕೆ ಮಂಡಿಸಿದರು.ಚರ್ಚೆ ಇಲ್ಲದೆ ವರದಿ ಅಂಗೀಕಾರವಾಯಿತು.


ನಂತರ ವಿವಿಧ ಇಲಾಖೆಗಳು ಮಾಹಿತಿಗಳನ್ನು ನೀಡಿದರು. ಪಶುಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ನೀಡಿ ತಮ್ಮ ಇಲಾಖೆಯಿಂದ ಸಾರ್ವಜನಿಕರಿಗೆ ಸಿಗಬಹುದಾದ ಸೌಲಭ್ಯಗಳ ಬಗ್ಗೆ ತಿಳಿಸುತ್ತಿರುವಾಗ ಹುಚ್ಚು ನಾಯಿ ಹಾವಳಿ ಮತ್ತು ಇದಕ್ಕೆ ತೆಗೆದುಕೊಂಡ ಕ್ರಮಗಳನ್ನು ಗ್ರಾಮಸ್ಥರು ಪ್ರಶ್ನಿಸಿದಾಗ ತಮ್ಮ ವ್ಯಾಪ್ತಿಯಲ್ಲಿ ನೀಡಿದ ರಾಬಿಸ್ ಲಸಿಕೆಯ ಅಂಕಿ ಅಂಶಗಳನ್ನು ಅಧಿಕಾರಿ ನೀಡಿದರು. ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರು, ಚೆಂಬು ಗ್ರಾಮದಲ್ಲಿ ಸುಮಾರು ಮೂರು ಕೋಟಿಗಿಂತಲೂ ಹೆಚ್ಚು ಮೊತ್ತದಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಆರಂಭವಾಗಿದ್ದು, ಇನ್ನು ಕೆಲವೇ ಸಮಯದಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಈ ಬಗ್ಗೆ ಪ್ರಶ್ನಿಸಿದ ಗ್ರಾಮಸ್ಥರು ಬಿಡುಗಡೆಯಾದ ಹಣ, ಆಗಿರುವ ಖರ್ಚು. ಮತ್ತು ಕಾಮಗಾರಿಗಳ ವಿವರ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪಿ. ಡಿ. ಓ ಪ್ರಭು ರವರು ಮುಂದಿನ ದಿನಗಳಲ್ಲಿ ಕಾಮಗಾರಿ ಮುಗಿದ ತಕ್ಷಣ ನೀಡುವುದಾಗಿ ಭರವಸೆ ನೀಡಿದರು.

ಹೊಸ ನೀರಿನ ಸಂಪರ್ಕಕ್ಕೆ ರೂ ೨೦೦೦ ನಿಗದಿಪಡಿಸಿದ ಪಂಚಾಯತ್ ಕ್ರಮಕ್ಕೆ ಆಕ್ಷೇಪ ಬಂದಾಗ ಉತ್ತರಿಸಿದ ಪಿ.ಡಿ.ಓ. ಸರ್ಕಾರದ ಆದೇಶವಿದ್ದು ಆ ಪ್ರಕಾರ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ನಂತರ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ,ಚೆಸ್ಕಾಂ ಇಲಾಖೆ, ಆರೋಗ್ಯ ಇಲಾಖೆ, ಆರೋಗ್ಯ ಕಾರ್ಡ್ ವಿತರಣಾ ವಿಭಾಗ, ಮೀನುಗಾರಿಕೆ ಇಲಾಖೆ,ಮೊದಲಾದ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.ಕಂದಾಯ ಇಲಾಖೆಯ ಮಾಹಿತಿ ಸಂದರ್ಭ ವಿಶೇಷ ಚೇತನ ಬಾಲಕನಿಗೆ ಆಧಾರ್ ಕಾರ್ಡ್ ದೊರಕದ ಬಗ್ಗೆ ಪೋಷಕರು ಗಮನ ಸೆಳೆದಾಗ ಈ ಬಗ್ಗೆ ಕೂಡಲೇ ವ್ಯವಸ್ಥೆ ಮಾಡುವುದಾಗಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು.


ನಂತರ ಸಭೆಯಲ್ಲಿ ಗೈರುಹಾಜರಾದ ಪಂಚಾಯತ್ ರಾಜ್, ಲೋಕೋಪಯೋಗಿ, ಮತ್ತು ಗ್ರಾಮಸಡಕ್ ಇಂಜಿನಿಯರ್ ರವರುಗಳ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹದಗೆಟ್ಟಿರುವ ಬಾಲಂಬಿ – ಪೆತ್ತಾಜೆ ಗ್ರಾಮಸಡಕ್ ರಸ್ತೆಯ ಬಗ್ಗೆ ಮಾತನಾಡಿದ ಗ್ರಾಮಸ್ಥರು ಆದಷ್ಟು ಶೀಘ್ರವಾಗಿ ದುರಸ್ತಿ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು.ಮತ್ತು ದಬ್ಬಡ್ಕ ಲೋಕೋಪಯೋಗಿ ರಸ್ತೆಯ ಬಗ್ಗೆ ಮಾತನಾಡಿದ ಸಂದರ್ಭ ಸದಸ್ಯರೊಬ್ಬರು ನೀಡಿದ ಉತ್ತರಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ರಸ್ತೆ ದುರಸ್ತಿಗೆ ಅರಣ್ಯ ಇಲಾಖೆಯ ವಿರೋಧವಿದೆ ಎಂಬ ಮಾತನ್ನು ತಳ್ಳಿಹಾಕಿದರು. ಎಲ್ಲಾ ರಸ್ತೆಗಳ ದುರಸ್ತಿ ಬಗ್ಗೆ ಶೀಘ್ರವೇ ಸಂಬಂಧಪಟ್ಟವರನ್ನು ಸಂಪರ್ಕಿಸಿ ಸರಿಪಡಿಸಲಾಗುವುದು ಎಂದು ಸಭೆಗೆ ತಿಳಿಸಿದರು.


ಇಂಜಿನಿಯರ್ ಬದಲು ಡ್ರೈವರ್ :ಎರಡು ವರ್ಷಗಳಿಂದ ಗ್ರಾಮಸಭೆಗೆ ಹಾಜರಾಗದ ಪಂಚಾಯತ್ ರಾಜ್ ಇಂಜಿನಿಯರ್ ಬಗ್ಗೆ ಪ್ರಶ್ನಿಸಿದ ಗ್ರಾಮಸ್ತರಿಗೆ, ಇಂಜಿನಿಯರ್ ಪರವಾಗಿ ಅವರ ಸಹಾಯಕರು ಸಭೆಗೆ ಬಂದಿದ್ದಾರೆ ಎನ್ನುವ ಬಗ್ಗೆ ತಿಳಿಸಿದರು. ತದನಂತರ ವೇದಿಕೆಗೆ ಬಂದ ಅವರಲ್ಲಿ ಪ್ರಶ್ನೆಗಳನ್ನು ಕೇಳಲು ಗ್ರಾಮಸ್ಥರು ನಿರಾಕರಿಸಿದರು. ಇಂಜಿನಿಯರ್‌ರವರೇ ತಮಗೆ ಮಾಹಿತಿ ನೀಡಬೇಕೆಂದು ಪಟ್ಟು ಹಿಡಿದರು. ಸಭೆ ಮುಗಿದ ನಂತರ ತಿಳಿದುಬಂದ ಮಾಹಿತಿಯಂತೆ ಇವರು ಇಂಜಿನಿಯರಿಂಗ್ ವಿಭಾಗದಲ್ಲಿ ಡ್ರೈವರ್ ಆಗಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು, ಗ್ರಾಮಸ್ಥರನ್ನು ಮೂರ್ಖರನ್ನಾಗಿಸುವ ಅಧಿಕಾರಿಗಳ ಮತ್ತು ನಾಯಕರ ಮನಸ್ಥಿತಿಗೆ ಛಿ, ಥೂ ಎಂದು ಜನ ಆಡಿಕೊಳ್ಳುತ್ತಿದ್ದಾರೆ.


ನಂತರ ಚೆಂಬು ಗ್ರಾಮದಲ್ಲಿ ಸಾರ್ವಜನಿಕ ಆಟದ ಮೈದಾನ ಇಲ್ಲದ ಕಾರಣ ಪ್ರೌಢಶಾಲಾ ಮೈದಾನದಲ್ಲೇ ಕಳೆದ ೨೫ ವರ್ಷಗಳಿಂದ ಆಟವಾಡುತ್ತಿದ್ದು, ಇದೀಗ ಅದಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಪ್ರಸ್ತಾಪಿಸಿದಾಗ, ಶಾಲೆಯ ಜೊತೆ ಹೊಂದಾಣಿಕೆ ಮಾಡಿಕೊಂಡು ಆಟ ವಾಡುವಂತೆ ಪಿ. ಡಿ. ಓ. ರವರು ಸಲಹೆ ನೀಡಿದರು.


ವೇದಿಕೆಯಲ್ಲಿ ನೋಡೆಲ್ ಅಧಿಕಾರಿ ಶ್ರೀಮತಿ ಸ್ನೇಹ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿ.ಡಿ.ಓ. ಮಹಾದೇವ ಪ್ರಭು, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಸುಬ್ರಮಣ್ಯ ಉಪಾಧ್ಯಾಯ, ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು.ಗ್ರಾಮಪಂಚಾಯತ್ ಸದಸ್ಯರಾದ ಗಿರೀಶ್ ಹೊಸೂರು ವಂದನಾರ್ಪಣೆ ಸಲ್ಲಿಸಿದರು.