ಅಡಿಕೆ ಹಳದಿ ಎಲೆ ರೋಗ ಪೀಡಿತ ರೈತರ ಸಾಲ ಮನ್ನಾ ಹಾಗೂ ಪರ್ಯಾಯ ಕೃಷಿಗೆ 10 ಲಕ್ಷ ರೂ. ನಿಬಡ್ಡಿ ಸಾಲಕ್ಕೆ ರೈತ ಸಂಘ ಒತ್ತಾಯ

0


ಅಡಿಕೆ ಹಳದಿ ಎಲೆ ರೋಗ ಪೀಡಿತ ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಪರ್ಯಾಯ ಕೃಷಿ ಮಾಡಲು ಅವರಿಗೆ 10 ಲಕ್ಷ ರೂ. ನಿಬಡ್ಡಿ ಸಾಲನೀಡಬೇಕು ಎಂದು ರೈತ ಸಂಘ ಒತ್ತಾಯಿಸಿದೆ.


ಇಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲುರವರು ಈ ಒತ್ತಾಯ ಮಾಡಿದರು.


ರೈತ ಸಂಘವು ಅಡಿಕೆ ಹಳದಿ ಎಲೆ ರೋಗ ಹಾಗೂ ಎಲೆ ಚುಕ್ಕಿ ರೋಗದ ಕುರಿತು ಕರ್ನಾಟಕ ಬೆಳೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ ಕಮ್ಮರಡಿಯವರನ್ನು ಕರೆಸಿ ಅರಂತೋಡಿನಲ್ಲಿ ರೈತರ ಬೃಹತ್ ಸಮಾವೇಶ ಮಾಡಲಿದ್ದೇವೆ. ಈ ಸಮಾವೇಶದಲ್ಲಿ ಮೂಡಿ ಬರುವ ಅಭಿಪ್ರಾಯಗಳನ್ನು ರಾಜ್ಯ ಸರಕಾರಕ್ಕಡ ನೀಡಲಿದ್ದೇವೆ. ನಮ್ಮ ಹೋರಾಟದ ಅಂಗವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೂ ನಾವು ಮನವಿ ನೀಡಿದ್ದು, ಹೆಗ್ಗಡೆಯವರು ರಾಜ್ಯ ಸರಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದರು.


ತಾಲೂಕು ಗೌರವಾಧ್ಯಕ್ಷ ನೂಜಾಲು ಪದ್ಮನಾಭ ಗೌಡರು ಮಾತನಾಡಿ, ಪ್ರಸ್ತುತ ಸರಕಾರ ರೈತರ ಸಮಸ್ಯೆಗಳ ನಿವಾರಣೆಗೆ ಗಮನ ಹರಿಸದೆ ಚುನಾವಣೆ ಗೆಲ್ಲುವ ತಂತ್ರದ ಬಗ್ಗೆ ಮಾತ್ರ ಆಸಕ್ತಿ ತೋರಿಸುತ್ತಿದೆ. ನೆಹರೂ, ಶಾಸ್ತ್ರಿ, ಇಂದಿರಾಗಾಂಧಿ ಮತ್ತು ದೇವೇಗೌಡರವರೆಗೆ ಸರಕಾರಗಳು ರೈತರ ಪರವಾಗಿದ್ದವರು. ಆದರೆ ಮೋದಿ ಮಹಾತ್ಮರು ಪ್ರಧಾನಿಯಾದ ಬಳಿಕ ಕಾರ್ಪೋರೇಟ್ ಜಗತ್ತಿನ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ರೈತರ ಪರ ಕಾರ್ಯಕ್ರಮಗಳನ್ನು ಕೈಬಿಡತೊಡಗಿದ್ದಾರೆ ಎಂದು ಟೀಕಿಸಿದರಲ್ಲದೆ ಕೃಷಿಕರಿಗೆ ಸರಕಾರದ ಬೆಂಬಲ ಇದ್ದರೆ ಮಾತ್ರ ದೇಶ ಸ್ವಾವಲಂಬಿಯಾಗಿರುತ್ತದೆ ಎಂದರು. ಕಳೆದ ಕುಮಾರಸ್ವಾಮಿ ಸರಕಾರವಿರುವಾಗ ಮಾಡಿದ ಒಂದು ಲಕ್ಷ ರೂ. ಸಾಲ ಮನ್ನಾಕ್ಕೆ ಮುನೀಶ್ ಮೌದ್ಗಿಲ್ ಎಂಬ ಐಎಎಸ್ ಅಧಿಕಾರಿ ಹಲವು ಕಂಡೀಷನ್‌ಗಳನ್ನು ಹಾಕಿದ್ದುದರಿಂದ ಶೇ. ೪೦ರಷ್ಟು ಜನ ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಐವರ್ನಾಡು ಗ್ರಾಮವೊಂದರಲ್ಲೇ 87 ಮಂದಿಗೆ ಸಾಲ ಮನ್ನಾ ಆಗಿಲ್ಲ. ಅಲ್ಲದೆ
37 ಮಂದಿ ಗ್ರೀನ್ ಲೀಸ್ಟ್‌ನಲ್ಲಿದ್ದು, ಅವರಿಗೂ ಸಾಲ ಮನ್ನಾ ಆಗಿಲ್ಲ. ತಾಲೂಕಿನಾದ್ಯಂತ ೭೧೫ ಮಂದಿ ಇಂತಹ ಸಮಸ್ಯೆ ಇರುವವರು ಇದ್ದಾರೆ ಎಂದು ಹೇಳಿದರು.


ರೈತ ಸಂಘದ ತಾಲೂಕು ಉಪಾಧ್ಯಕ್ಷ ಉಳುವಾರು ತೀರ್ಥರಾಮರು ಮಾತನಾಡಿ, ಕೃಷಿಕರು ಬೆಳೆ ರಕ್ಷಣೆಗಾಗಿ ಪಡೆದಿರುವ ಕೋವಿಗಳನ್ನು ಚುನಾವಣೆ ಬರುವಾಗ ಡೆಪಾಸಿಟ್ ಇಡಬೇಕೆಂದು ಹೇಳುವುದು ಸರಿಯಲ್ಲ. ಅಪರಾಧ ಹಿನ್ನಲೆಯಿಂದ ಕೋವಿ ಡೆಪಾಸಿಟ್ ಮಾಡಿಸಲಿ ಆದರೆ ಕೃಷಿಕರಿಂದ ಕೋವಿ ಕಸಿದುಕೊಳ್ಳಬಾರದು. ಮಂಗ, ಕಾಡಾನೆ, ಕಾಟಿ, ಕಡವೆಗಳ ದಾಳಿ ತೋಟಗಳಿಗೆ ನಿರಂತರ ಆಗುತ್ತಿದೆ. ಅವುಗಳನ್ನು ಓಡಿಸಲು ಕೋವಿ ಬೇಕೇ ಬೇಕು ಎಂದು ಪ್ರತಿಪಾದಿಸಿದರು.
ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ ಹಾಗೂ ತಾಲೂಕು ಸಂಘಟನಾ ಸಂಚಾಲಕ ಸೆಬಾಸ್ಟಿನ್ ಮಡಪ್ಪಾಡಿ ಉಪಸ್ಥಿತರಿದ್ದರು.