ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ನೂತನ ರಥ

0

ಮುಂದಿನ ಜಾತ್ರೆಯೊಳಗೆ 60 ಲಕ್ಷ ವೆಚ್ಚದಲ್ಲಿ ರಥ-ಪಲ್ಲಕ್ಕಿ ನಿರ್ಮಾಣ

ರಥಕ್ಕೆ ಮರ ದಾನ ಮಾಡುವವರಿಗೆ ಮಾ.31 ರೊಳಗೆ ಅವಕಾಶ

ವಾರ್ಡ್ ಸಮಿತಿ ರಚನೆ : ಗ್ರಾಮ-ಗ್ರಾಮ ಭೇಟಿಗೆ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ 60 ಲಕ್ಷ ರೂ.ವೆಚ್ಚದಲ್ಲಿ ಪಂಚಮಿ ರಥ, ಪಲ್ಲಕ್ಕಿ ನಿರ್ಮಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಭಕ್ತಾಧಿಗಳ ಪೂರ್ವಭಾವಿ ಸಭೆಯು ಮಾ.5 ರಂದು ದೇವಾಲಯದ ವಠಾರದಲ್ಲಿ ನಡೆಯಿತು.

ಶತಮಾನಗಳ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಹಿಂದಿನ ಕಾಲದಲ್ಲಿ ಜಾತ್ರೆಯು ರಥೋತ್ಸವದೊಂದಿಗೆ ವೈಭವಪೂರ್ಣವಾಗಿ ನಡೆಯುತಿತ್ತು. ಕಾಲ ಕ್ರಮೇಣ ಅದು ನಿಂತಿತು. ಅದಕ್ಕೆ ಸಾಕ್ಷಿ ಎಂಬಂತೆ ರಥದ ಪಳೆಯುಳಿಕೆಗಳು ಇತ್ತಿಚ್ಚಿನ ದಿನಗಳ ತನಕವು ದೇವಾಲಯದಲ್ಲಿ ಇತ್ತು. ಕೆಲ ವರ್ಷಗಳ ಹಿಂದೆ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಕ್ಷೇತ್ರಕ್ಕೆ ಹೊಸ ರಥ, ಪಲ್ಲಕ್ಕಿ ನಿರ್ಮಾಣದ ಮಹತ್ವದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ, ಪ್ರಶ್ನಾ ಚಿಂತನೆಯ ಪ್ರಕಾರದಂತೆ ಭಕ್ತರ ಸಲಹೆ ಪಡೆದು ಶ್ರೀ ಜಲದುರ್ಗಾದೇವಿಗೆ ರಥ ನಿರ್ಮಾಣಕ್ಕೆ ಮುಂದಡಿ ಇಟ್ಟಿದ್ದೇವೆ. ಶಿಲ್ಪಿಗಳ, ತಂತ್ರಿಗಳ ಸಲಹೆಯಂತೆ ಪಂಚಮಿ ರಥ ಮಾದರಿಯಲ್ಲಿ ರಥ ನಿರ್ಮಾಣ ಮಾಡಲಾಗುತ್ತದೆ. ರಥವು 36 ಫೀಟ್ ಎತ್ತರ ಇರಲಿದೆ. ಇದಕ್ಕೆ 900 ಕ್ಕೂ ಅಧಿಕ ಸಿಎಫ್‍ಟಿ ಮರದ ಆವಶ್ಯಕತೆ ಇದೆ. ರಥಕ್ಕೆ 50 ಲಕ್ಷ ರೂ., ಪಲ್ಲಕ್ಕಿಗೆ 10 ಲಕ್ಷ ರೂ.ವೆಚ್ಚ ತಗಲಲಿದೆ ಎಂದು ಅವರು ಹೇಳಿದರು.

ಕ್ಷೇತ್ರದಲ್ಲಿಯೇ ರಥ ನಿರ್ಮಾಣ ಕೆಲಸ ಮಾಡುವ ಉದ್ದೇಶ ಹೊಂದಲಾಗಿದೆ. ಮುಂದಿನ ಜಾತ್ರೆಗೆ ರಥ ಸಮರ್ಪಣೆ ಆಗಬೇಕು ಅನ್ನುವ ಆಶಯವಿದೆ. ಹೀಗಾಗಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸುವ ಭಕ್ತಾಧಿಗಳು ಈ ಕಾರ್ಯಕ್ಕೂ ಸಹಭಾಗಿಗಳಾಬೇಕು ಅನ್ನುವುದು ನಮ್ಮ ಅಪೇಕ್ಷೆ ಎಂದು ಹೇಳಿದರು.

ಭಕ್ತಾಧಿಗಳ ಪರವಾಗಿ ಮಾತನಾಡಿದ ಪೆರುವಾಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ದಾನಿಗಳ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಬೇಕು. ವ್ಯವಸ್ಥೆಯು ಪಾರದರ್ಶಕ ರೀತಿಯಲ್ಲಿ ಇರುವ ನಿಟ್ಟಿನಲ್ಲಿ ಸಮರ್ಪಕ ಲೆಕ್ಕಪತ್ರಕ್ಕೆ ನಿರ್ವಹಣೆಗೆ ವ್ಯವಸ್ಥೆ ಮಾಡಬೇಕು. ಲೆಕ್ಕಪತ್ರ ನಿರ್ವಹಣೆಗೆ ಪ್ರದೀಪ್ ಕುಮಾರ್ ರೈ ಪನ್ನೆ ಹಾಗೂ ಪದ್ಮನಾಭ ನೆಟ್ಟಾರು ಅವರನ್ನು ನಿಯೋಜಿಸುವುದು ಸೂಕ್ತ ಎಂದರು.

ವ್ಯವಸ್ಥಾಪನಾ ಸಮಿತಿ
ಮೂಲಕವೇರಥ ನಿರ್ಮಾಣ

ರಥ ನಿರ್ಮಾಣಕ್ಕೆ ಸಂಬಂಧಿಸಿ ಪ್ರತ್ಯೇಕ ಸಮಿತಿಯ ಆವಶ್ಯಕತೆಯ ಬಗ್ಗೆ ಚರ್ಚೆ ನಡೆಯಿತು. ಪ್ರತಿಕ್ರಿಯಿಸಿದ ಸುನಿಲ್ ರೈ ಪೆರುವಾಜೆ, ಪ್ರತ್ಯೇಕ ಸಮಿತಿಯ ಅಗತ್ಯ ಇಲ್ಲ ಅನ್ನುವುದು ನನ್ನ ಭಾವನೆ. ವ್ಯವಸ್ಥಾಪನಾ ಸಮಿತಿಯ ಮೂಲಕವೇ ಅನುಷ್ಟಾನ ಆಗಲಿ. ಕ್ಷೇತ್ರದ ಪ್ರತಿ ಭಕ್ತರು ಸಮಿತಿಯ ಅಧ್ಯಕ್ಷರ ಹಾಗೆ ಕೆಲಸ ಮಾಡುವ ಮನಸ್ಸು ಮಾಡೋಣ ಎಂದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿ ಹಾಲಿ ವ್ಯವಸ್ಥಾಪನಾ ಸಮಿತಿಯ ಮೂಲಕವೇ ರಥ ನಿರ್ಮಾಣದ ಜವಾಬ್ದಾರಿ ನಿರ್ವಹಿಸುವ ನಿರ್ಧಾರ ಕೈಗೊಳ್ಳಲಾಯಿತು.

ಮರ ದಾನ ನೀಡುವಂತೆ ವಿನಂತಿ
ರಥ ನಿರ್ಮಾಣಕ್ಕೆ ಸಾಗುವಾನಿ, ಚಿರ್ಪು ಮರದ ಆವಶ್ಯಕತೆ ಇದೆ. ಭಕ್ತರು ದಾನ ರೂಪದಲ್ಲಿ ನೀಡಬಹುದು. ಮರ ದಾನಿಗಳು ಮಾ.31 ರೊಳಗೆ ಕ್ಷೇತ್ರವನ್ನು ಸಂಪರ್ಕಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.

ಸಭೆ ನಿರ್ವಹಣೆ ಮಾಡಿದ ಪ್ರದೀಪ್ ಕುಮಾರ್ ರೈ ಪನ್ನೆ ಮಾತನಾಡಿ, ಪೆರುವಾಜೆ ಗ್ರಾಮದಲ್ಲಿ ವಾರ್ಡ್‌ಗಳಲ್ಲಿ ಸಮಿತಿ ರಚಿಸಲಾಗುವುದು. ಅದಾದ ಬಳಿಕ ಬೇರೆ-ಬೇರೆ ಗ್ರಾಮಗಳಾಗಿ ತೆರಳಿ ದಾನಿಗಳನ್ನು ಸಂಪರ್ಕಿಸುವುದು, ಮನವಿ ಪತ್ರ ತಯಾರಿಸಿ ನೀಡುವುದು ಸೇರಿದಂತೆ ರಥ ನಿರ್ಮಾಣದ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸಭೆಗೆ ವಿವರ ನೀಡಿದರು.

ಧನ ಸಹಾಯ ಘೋಷಣೆ
ರಥ ನಿರ್ಮಾಣ ಕಾರ್ಯಕ್ಕೆ ಲೀಲಾವತಿ ಎಸ್ ರೈ ಸರ್ವೆ ಬೊಟ್ಯಾಡಿ ಮತ್ತು ಜಗದೀಶ್ ರೈ ಪೆರುವಾಜೆ 1 ಲಕ್ಷ ರೂ., ಪೂವಪ್ಪ ಪೂಜಾರಿ ಸಾರಕೆರೆ 51 ಸಾವಿರ ರೂ., ಜಯಲಕ್ಷ್ಮಿ ಮತ್ತು ಶಿವಪ್ರಕಾಶ್ 50 ಸಾವಿರ ರೂ., ವೆಂಕಟಕೃಷ್ಣ ರಾವ್ 50 ಸಾವಿರ ರೂ., ಅಜೇಯ್ ಶೆಟ್ಟಿ 50 ಸಾವಿರ ರೂ., ಐತ್ತಪ್ಪ ನಾಯ್ಕ ನಾಗನಮಜಲು 50 ಸಾವಿರ ರೂ., ರಾಮಚಂದ್ರ ರಾವ್ ಪೆರುವಾಜೆ 50 ಸಾವಿರ ರೂ., ವಿಶ್ವನಾಥ ಕೊಳಂಬಳ 25 ಸಾವಿರ ರೂ., ಸುಂದರಿ ಮತ್ತು ಮಕ್ಕಳು ಪೆಲತ್ತಡ್ಕ 15 ಸಾವಿರ ರೂ., ಶಶಿಕಾಂತ್ ರಾವ್ 10 ಸಾವಿರ ರೂ. ಸೇರಿದಂತೆ ಭಕ್ತರು ಸಹಾಯ ಘೋಷಿಸಿದರು.
ರಥ ನಿರ್ಮಾಣಕ್ಕೆ ಧನ‌ಸಹಾಯ ನೀಡುವ ದಾನಿಗಳು ದೇವಾಲಯದ ಕಚೇರಿ ಸಂಪರ್ಕಿಸುವಂತೆ ವಿನಂತಿಸಲಾಗಿದೆ.

ವೇದಿಕೆಯಲ್ಲಿ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಪನ್ನೆ, ಅಮರನಾಥ ಶೆಟ್ಟಿ ಪೆರುವಾಜೆಗುತ್ತು, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪನ್ನೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಭೋಜರಾಜ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ., ದಾಮೋದರ ನಾಯ್ಕ, ಪಿ.ಜಗನ್ನಾಥ ರೈ,ಯಶೋಧ ಎ.ಎಸ್., ಮಾಜಿ ಸದಸ್ಯರಾದ ಪಿ.ಮಂಜಪ್ಪ ರೈ ಬೆಳ್ಳಾರೆ, ಪದ್ಮನಾಭ ನೆಟ್ಟಾರು ಮೊದಲಾದವರು ಉಪಸ್ಥಿತರಿದ್ದರು.