ಅಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರ ವೇದಿಕೆಯ ತಾಲೂಕು ಮಟ್ಟದ ಸಭೆ- ಸಮಿತಿ ರಚನೆ

0


ಗೌರವಾಧ್ಯಕ್ಷ-ಡಾ.ರೇಣುಕಾ ಪ್ರಸಾದ್ ಕೆ.ವಿ, ಅಧ್ಯಕ್ಷ-ಎನ್.ಎ.ರಾಮಚಂದ್ರ

ಸುಳ್ಯದಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಬೃಹತ್ ಸಮಾವೇಶಕ್ಕೆ ನಿರ್ಧಾರ

ಅಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರ ವೇದಿಕೆಯ ತಾಲೂಕು ಮಟ್ಟದ ಸಭೆಯು ಮಾ.8 ರಂದು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ರವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನಾಧಿಕಾರಿ ಕಚೇರಿ ಸಭಾಭವನದಲ್ಲಿ ನಡೆಯಿತು.


ತಾಲೂಕು ಸಮಿತಿ ಗೌರವಾಧ್ಯಕ್ಷರನ್ನಾಗಿ ಡಾ.ರೇಣುಕಾಪ್ರಸಾದ್ ಕೆ.ವಿ, ಅಧ್ಯಕ್ಷ ಎನ್.ಎ.ರಾಮಚಂದ್ರ, ಉಪಾಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಜಾಕೆ ಮಾಧವ ಗೌಡ ,ಎಸ್.ಎನ್.ಮನ್ಮಥ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಭವಾನಿ ಶಂಕರ ಅಡ್ತಲೆ, ಖಜಾಂಜಿ ನಾಗೇಶ್ ಪಿ, ಸಂಚಾಲಕ ರಾಗಿ ಎಂ.ವೆಂಕಪ್ಪ ಗೌಡ, ಲೋಕನಾಥ್ ಅಮೆಚೂರ್, ದೀಪಕ್ ಕುತ್ತಮೊಟ್ಟೆ, ದಿನೇಶ್ ಮಡಪ್ಪಾಡಿ,ಸುರೇಶ್ ಕಣೆಮರಡ್ಕ ರವರನ್ನು ಆಯ್ಕೆ ಮಾಡಲಾಯಿತು.

ಮಾಜಿ ಅಧ್ಯಕ್ಷ ಭವಾನಿ ಶಂಕರ ಅಡ್ತಲೆ ಪ್ರಾಸ್ತಾವಿಕ ವಾಗಿ ಮಾತನಾಡಿ” ಅಡಿಕೆ ಕೃಷಿಗೆ ಹಳದಿ ರೋಗ ಎಂಬ ಮಾರಕ ರೋಗ ಬಾಧಿಸಿದ್ದು ಅದರ ನಿರ್ಮೂಲನೆ ಮಾಡುವ ರೋಗ ನಿರೋಧಕ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳಿಂದ ಸಾಧ್ಯವಾಗಲಿಲ್ಲ. ಸರಕಾರ ಈ ವಿಚಾರವಾಗಿ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ.
ತಾಲೂಕಿನ 23 ಗ್ರಾಮಗಳಲ್ಲಿ ಇರುವ ಅಡಿಕೆ ತೋಟಕ್ಕೆ ಹಳದಿ ರೋಗ ತಗುಲಿ ವಿನಾಶದಂಚಿನಲ್ಲಿದೆ. ಇದಕ್ಕೆ ಪರಿಹಾರವೆಂಬಂತೆ ನೊಂದ ಕೃಷಿಕರು ಈಗಾಗಲೇ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆ ಯಾಗಿರುವ ಕೃಷಿಕರ ಪಾಲಿನ ಆಶಾಕಿರಣವಾಗಿರುವ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರ ಮೂಲಕ ಕೃಷಿಕರ ಧ್ವನಿಯನ್ನು ಸರಕಾರಕ್ಕೆ ತಲುಪಿಸುವ ಸಲುವಾಗಿ ಕೃಷಿಕರು ಸಂಘಟಿತರಾಗಿ ಸಮಾಜದ ಗಣ್ಯರನ್ನು ಹಾಗೂ ಕೃಷಿಕ ಬಾಂಧವರನ್ನು ರಾಜಕೀಯ ರಹಿತವಾಗಿ ಒಟ್ಟು ಸೇರಿಸಿ ದೊಡ್ಡ ಮಟ್ಟದ ಸಮಾವೇಶ ನಡೆಸಿ ಹಳದಿ ರೋಗ ಪೀಡಿತ ಜಮೀನಿನಲ್ಲಿ ಪರ್ಯಾಯ ಕೃಷಿ ಬೆಳೆಯಲು 1 ಎಕ್ರೆಗೆ 5 ಲಕ್ಷ ಪರಿಹಾರ ಮತ್ತು ದೀರ್ಘಾವಧಿ ಸಾಲಗಳನ್ನು 10 ವರ್ಷಗಳ ಕಾಲ ಬಡ್ಡಿ ರಹಿತವಾಗಿ ಮುಂದೂಡುವಂತೆ ಬೇಡಿಕೆಯನ್ನು ಡಾ.ವೀರೇಂದ್ರ ಹೆಗ್ಗಡೆಯವರ ಮುಖೇನ ಸರಕಾರಕ್ಕೆ ಮುಟ್ಟುವಂತೆ ಮಾಡಬೇಕೆಂಬ ಉದ್ದೇಶ ಹೊಂದಿದ್ದೇವೆ. ಈಗಾಗಲೇ ಗ್ರಾಮದಾದ್ಯಂತ ತಾಲೂಕು ಸಮಿತಿಯವರು ಸಂಚರಿಸಿ ಅಲ್ಲಲ್ಲಿ ಸಭೆ ನಡೆಸಿ ಕೃಷಿಕರ ಅಭಿಪ್ರಾಯ ಸಂಗ್ರಹಿಸಿ ಗ್ರಾಮ ಸಮಿತಿ ರಚಿಸಲಾಗಿದೆ. ಮುಂದಿನ ಸಮಾವೇಶ ಸುಳ್ಯ ಕೇಂದ್ರದಲ್ಲಿ ಸುಮಾರು10 ರಿಂದ 15 ಸಾವಿರ ಕೃಷಿಕರನ್ನು ಒಟ್ಟು ಸೇರಿಸುವ ಚಿಂತನೆ ನಡೆಸಲಾಗಿದೆ. ಡಾ.ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡುವ ಉದ್ದೇಶಕ್ಕಾಗಿ ತಾಲೂಕು ಸಮಿತಿ ರಚಿಸಿಕೊಂಡು ಮುಂದುವರಿಯುವುದಾಗಿ ತಿಳಿಸಿದರು.

ವೇದಿಕೆಯ ಸಂಚಾಲಕ ಎಂ.ವೆಂಕಪ್ಪ ಗೌಡ ರವರು ಮಾತನಾಡಿ ಕೃಷಿಕರ ಪರವಾಗಿ ನಡೆಯಲಿರುವ ಸಮಾವೇಶಕ್ಕೆ ಡಾ.ವೀರೇಂದ್ರ ಹೆಗ್ಗಡೆ ಯವರನ್ನು ಸುಳ್ಯಕ್ಕೆ ಬರುವಂತೆ ಮಾಡುವ ಸಲುವಾಗಿ ಸಮಿತಿ ರಚಿಸಿ ನಿಯೋಗ ತೆರಳಿ ಭೇಟಿ ಮಾಡಲಾಗುವುದು.
ಮನವಿಯಲ್ಲಿ ಬಿಟ್ಟು ಹೋಗಿರುವ ಕೆಲವು ಅಂಶಗಳನ್ನು ಸೇರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಎನ್. ಎ. ರಾಮಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ ಅಡಿಕೆಗೆ ಪರ್ಯಾಯ ಬೆಳೆ ಸಾಟಿಯಾಗಲಾರದು. ಇಲ್ಲಿಯ ತನಕ ಅಡಿಕೆ ಬಾಧಿಸಿದ ಹಳದಿ ರೋಗಕ್ಕೆ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ವಲಯದ ಸಮಿತಿಯಿಂದ ಇಬ್ಬರು ಹಾಗೂ ತಾಲೂಕು ಸಮಿತಿ ಯವರು ಖಾವಂದರನ್ನು ಭೇಟಿ ನೀಡುವುದಕ್ಕೆ ತೆರಳುವವರಿದ್ದೇವೆ.ಸಮಾವೇಶಕ್ಕೆ ಖಂಡಿತವಾಗಿ ಅವರು ಭಾಗವಹಿಸುತ್ತಾರೆ ಎಂಬ ವಿಶ್ವಾಸವಿದೆ‌.ಮಾರ್ಚ್ ತಿಂಗಳ ಅಂತ್ಯಕ್ಕೆ ಸಮಾವೇಶ ನಡೆಯಲಿದ್ದು 15‌ ಸಾವಿರ ಮಂದಿ ಕೃಷಿಕ ಬಾಂಧವರು ಸೇರುವಂತೆ ಮಾಡಬೇಕೆಂಬ ಯೋಚನೆ ಮಾಡಲಾಗಿದೆ .ಸಹಕಾರಿ‌ ಸಂಘಗಳು ನಮ್ಮೊಂದಿಗೆ ಕೈಜೋಡಿಸಬೇಕಾಗಿದೆ. ಡಾ.ವೀರೇಂದ್ರ ಹೆಗ್ಗಡೆ ಯವರ ಮೂಲಕ ಕೃಷಿಕರ ಎಲ್ಲಾ ಸಮಸ್ಯೆಗಳನ್ನು ತಿಳಿಸಿ ಬೇಡಿಕೆಯನ್ನು ಸರಕಾರಕ್ಕೆ ತಲುಪಿಸುವ ವ್ಯವಸ್ಥೆ ಸಮಾವೇಶದಲ್ಲಿ ಮಾಡುತ್ತೇವೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂರ್, ಯೋಜನಾಧಿಕಾರಿ ನಾಗೇಶ್ ಪಿ, ಸಮಿತಿ ಕಾರ್ಯದರ್ಶಿ ಭವಾನಿ ಶಂಕರ ಅಡ್ತಲೆ, ಸಂಚಾಲಕ ದೀಪಕ್ ಕುತ್ತಮೊಟ್ಟೆ, ಸುರೇಶ್ ಕಣೆಮರಡ್ಕ,ಧರ್ಮಸ್ಥಳ ಯೋಜನೆಯ ಒಕ್ಕೂಟದ ಅಧ್ಯಕ್ಷ ನಿತ್ಯಾನಂದ ಕಲ್ಲೆಂಬಿ ಉಪಸ್ಥಿತರಿದ್ದರು.
ಗ್ರಾಮದ ಹಲವು ಭಾಗಗಳಿಂದ ಕೃಷಿಕರು ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.
ವಲಯ ಮೇಲ್ವಿಚಾರಕ ಬಾಲಕೃಷ್ಣ ಸ್ವಾಗತಿಸಿದರು. ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.