ನಗರದಲ್ಲಿ ನೀರು ಮಿತವಾಗಿ‌ ಬಳಸಿ : ಹೀಗೆ ಮುಂದುವರಿದರೆ ಜಲಕ್ಷಾಮ ಬಂದೀತು

0

ನ.ಪಂ.‌ಸಭೆಯಲ್ಲಿ ನೀರಿನ ಅಭಾವದ ಚರ್ಚೆ

ಇನ್ನೂ 10 ದಿನದಲ್ಲಿ ಮಳೆ ಬಾರದಿದ್ದರೆ ನಗರದಲ್ಲಿ ಜಲಕ್ಷಾಮ ಎದುರಾದೀತು. ಆದ್ದರಿಂದ ನಗರ ವ್ಯಾಪ್ತಿಯಲ್ಲಿ ನೀರನ್ನು ಜಾಗರೂಕತೆಯಿಂದ ಮಿತವಾಗಿ ಬಳಸಬೇಕು. ಈ ಕುರಿತು ವಾರ್ಡ್ ವ್ಯಾಪ್ತಿಯಲ್ಲಿ ‌ಜಾಗೃತಿ ಮೂಡಿಸಿ ಎಂದು ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಹೇಳಿದರು.

ಸುಳ್ಯ ನ.ಪಂ. ಸಾಮಾನ್ಯ ಸಭೆಯಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಿರುವ ಕುರಿತು ಪ್ರಸ್ತಾಪವಾದಾಗ ನೀರಿನ ಮಿತ ಬಳಕೆಯ ಕುರಿತು ಅವರು ವಿವರ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ನ.ಪಂ. ಅಧ್ಯಕ್ಷ ವಿನಯ ಕಂದಡ್ಕ ವಹಿಸಿದ್ದರು. ‌ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ, ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರಾ ಕ್ರಾಸ್ತ, ಶಶಿಕಲಾ ನೀರಬಿದಿರೆ, ಶೀಲಾ ಕುರುಂಜಿ, ಸುಶೀಲ ಜಿನ್ನಪ್ಪ, ಶಿಲ್ಪಾ ಸುದೇವ್, ವಾಣಿಶ್ರೀ ಬೊಳಿಯಮಜಲು, ಪೂಜಿತಾ ಕೆ.ಯು. ಪ್ರವಿತಾ ಪ್ರಶಾಂತ್, ಉಮ್ಮರ್ ಕೆ.ಎಸ್., ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್, ನಾರಾಯಣ ಶಾಂತಿನಗರ, ಬಾಲಕೃಷ್ಣ ರೈ, ಬುದ್ಧ ನಾಯ್ಕ್, ನಾಮನಿರ್ದೇಶನ ಸದಸ್ಯರುಗಳಾದ ಬೂಡು ರಾಧಾಕೃಷ್ಣ ರೈ, ರೋಹಿತ್ ಕೊಯಿಂಗೋಡಿ ಇದ್ದರು.

ಬಾಲಕೃಷ್ಣ ರೈ ದುಗಲಡ್ಕ ದುಗಲಡ್ಕ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕುರಿತು ಪ್ರಸ್ತಾಪಿಸಿದರು. ಡೇವಿಡ್ ಧೀರಾ ಕ್ರಾಸ್ತ, ಶರೀಫ್ ಕಂಠಿ ಮೊದಲಾದವರು ವಿಷಯ ಪ್ರಸ್ತಾಪಿಸಿದರು.

ಪ್ರತಿಭಟನೆ ನಡೆಸಿದ ಉಮ್ಮರ್ : ಸಭೆಯ ಆರಂಭದಲ್ಲಿ ಸದಸ್ಯ ಕೆ.ಎಸ್. ಉಮ್ಮರ್ ಎಂದಿನಂತೆ ಈ ಬಾರಿಯ ಸಾಮಾನ್ಯ ಸಭೆಯಲ್ಲಿ ಕಪ್ಪು ಪಟ್ಟಿ ಧರಿಸಿಕೊಂಡು ಪ್ರತಿಭಟನೆ ನಡೆಸಿದರು. “ಕ್ಷೇತ್ರದ ಶಾಸಕರು ಸಭೆಗೆ ಬರಬೇಕೆಂದು ನಾವು 7-8 ತಿಂಗಳಿಂದ ಬೇಡಿಕೆ ಇಡುತ್ತಿದ್ದೇವೆ. ಆದರೆ ಅವರು‌ಬಂದಿಲ್ಲ. ಆಡಳಿತದವರು ಕರೆಸಲೂ ಇಲ್ಲ. ಆದ್ದರಿಂದ ಈ ಬಾರಿಯೂ ನಾನು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತೇನೆ ಎಂದರಲ್ಲದೆ, ಬಜೆಟ್ ಮೀಟಿಂಗ್ ನಲ್ಲಿ ಒಂದು ವಾರ್ಡ್ ಗೆ ರೂ.10 ಲಕ್ಷ ಅಭಿವೃದ್ಧಿ ಅನುದಾನ ಕೊಡಬೇಕೆಂದು ಕೇಳಿದ್ದೇವು. ಆದರೆ ಅದು ಆಗಿಲ್ಲ. ಇದು ನಿಮ್ಮ ಅಧ್ಯಕ್ಷತೆಯ ಕೊನೆಯ ಸಭೆಯಾಗಬಹುದು ಆದ್ದರಿಂದ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಕೇಳಿಕೊಂಡರು.

“ನಗರ ವ್ಯಾಪ್ತಿಯಲ್ಲಿ ಕೆಲಸಗಳು ಆಗಿದೆ.‌ ಶಾಸಕರ ಅನುದಾನ, ನಗರೋತ್ಥಾನ ಅನುದಾನ ಕೆಲಸಗಳು ಇತ್ಯಾದಿ ಅನುದಾನದಲ್ಲಿ ಆಗಿದೆ ಎಂದು ಆಗಿರುವ ಕೆಲಸಗಳ ವಿವರ ನೀಡಿದರಲ್ಲದೆ, ಬಸ್ ನಿಲ್ದಾಣದ ಪಕ್ಕದ ರಸ್ತೆ ಅಭಿವೃದ್ಧಿ ಗೆ ಅನುದಾನ ಇಡಲಾಗಿದೆ ಎಂದು ಅವರು ಹೇಳಿದರು.

ಕಾಂಕ್ರೀಟ್ ರಸ್ತೆ ಕಾಮಗಾರಿ ವೇಳೆ ಹೊಯಿಗೆಯಲ್ಲಿ ಮರದ ತುಂಡು, ಕಸಗಳು ಇರುತ್ತವೆ. ಇದನ್ನು ಸರಿ ಪಡಿಸುವ ಕೆಲಸ ಆಗಬೇಕು ಎಂದು ಶರೀಫ್ ಕಂಠಿ ಹೇಳಿದರು.

ಇಂದಿರಾ ಕ್ಯಾಂಟಿನ್, ಹೈಮಾಸ್ಟ್, ಚರಂಡಿ, ಇಂಗುಗುಂಡಿ ಇತ್ಯಾದಿ ವಿಚಾರಗಳ ಕುರಿತು ಚರ್ಚೆಗಳು ನಡೆಯಿತು.