ಗಾಂಧಿ ಗ್ರಾಮ ಪುರಸ್ಕಾರ ವಿತರಣೆಯ ವೇಳೆ ನೂಕುನುಗ್ಗಲು

0

ಪುರಸ್ಕಾರ ಸಿಗದೇ ವಾಪಾಸ್ಸಾದ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಪಿಡಿಒಗಳು

ಗ್ರಾಮ ಪಂಚಾಯತ್‌ಗಳಿಗೆ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರ ಮತ್ತಿತರ ಹಲವು ರೀತಿಯ ಪುರಸ್ಕಾರಗಳ ವಿತರಣೆಯ ವೇಳೆ ನೂಕುನುಗ್ಗಲು ಸಂಭವಿಸಿ ನೂರಾರು ಗ್ರಾ.ಪಂ. ಅಧ್ಯಕ್ಷರುಗಳು, ಸದಸ್ಯರುಗಳು ಮತ್ತು ಪಿಡಿಒಗಳು ಪುರಸ್ಕಾರ ಸಿಗದೆ ಬರಿಗೈಯಲ್ಲಿ ವಾಪಾಸ್ಸಾಗಬೇಕಾಗಿ ಬಂದ ಘಟನೆ ಇಂದು ನಡೆದಿದೆ. ಪುರಸ್ಕಾರಗಳನ್ನು ಪಂಚಾಯತ್‌ಗಳಿಗೆ ಕಳುಹಿಸಿಕೊಡುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆಂದು ತಿಳಿದುಬಂದಿದೆ.

ಗಾಂಧಿ ಗ್ರಾಮ ಪುರಸ್ಕಾರ, ಜನಸ್ನೇಹಿ ಗ್ರಾಮ ಪಂಚಾಯತ್, ಜಲಸಂಜೀವಿನಿ ಪುರಸ್ಕಾರ ಮೊದಲಾದ ಪುರಸ್ಕಾರಗಳ ಪ್ರದಾನ ಕಾರ್ಯಕ್ರಮ ಇಂದು ಬೆಂಗಳೂರಿನಲ್ಲಿ ಆಯೋಜಿತವಾಗಿತ್ತು. ತಡವಾಗಿ ಕಾರ್ಯಕ್ರಮ ಆರಂಭವಾದುದಲ್ಲದೆ, ಕೆಲವು ವಿಭಾಗಗಳ ಪುರಸ್ಕಾರವನ್ನು ನೀಡಿದ ಬಳಿಕ ಮುಖ್ಯಮಂತ್ರಿಗಳು ಸಭೆಗೆ ಆಗಮಿಸಿ, ಭಾಷಣ ಮಾಡಿ ಸಾಂಕೇತಿಕವಾಗಿ ಕೆಲವು ಪಂಚಾಯತ್‌ಗಳಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ಪ್ರದಾನಿಸಿ ಹೋದರು. ಅವರು ಹೋದ ಬಳಿಕ ವೇದಿಕೆಯಲ್ಲಿ ನೂಕುನುಗ್ಗಲು ಉಂಟಾಯಿತು. ಮೂರು ವರ್ಷಗಳ ಪ್ರಶಸ್ತಿಗಳ ವಿತರಣೆ ಆಗಬೇಕಾಗಿದ್ದುದರಿಂದ ಭಾರೀ ಜನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಹಳ ತಡವಾಗಿದ್ದುದರಿಂದ ಜನ ಗುಂಪು ಗುಂಪಾಗಿ ವೇದಿಕೆ ಹತ್ತಿ ತಮ್ಮ ಪುರಸ್ಕಾರ ಕೊಡುವಂತೆ ಆಗ್ರಹಿಸತೊಡಗಿದರು. ಹೀಗೆ ಸುಮಾರು ೨೦ ಶೇಕಡಾದಷ್ಟು ಪುರಸ್ಕಾರಗಳನ್ನು ವಿತರಿಸುವಾಗ ಇನ್ನು ಜನರನ್ನು ನಿಯಂತ್ರಣ ಮಾಡುವುದು ಅಸಾಧ್ಯವೆನಿಸಿ ಪ್ರಶಸ್ತಿ ವಿತರಣೆಯನ್ನೇ ಸ್ಥಗಿತಗೊಳಿಸಲಾಯಿತೆಂದು ತಿಳಿದು ಬಂದಿದೆ.


ಸುಳ್ಯದಿಂದ ಸಂಪಾಜೆ ಗ್ರಾ.ಪಂ., ಅರಂತೋಡು ಗ್ರಾ.ಪಂ., ಕಳಂಜ ಗ್ರಾ.ಪಂ., ಮಡಿಕೇರಿ ತಾಲೂಕಿನ ಪೆರಾಜೆ ಗ್ರಾ.ಪಂ.ನವರಲ್ಲದೆ, ಜಲಸಂಜೀವಿನಿ ಪ್ರಶಸ್ತಿ ಬಂದಿದ್ದ ಸುಳ್ಯದ ಹರಿಹರ ಪಲ್ಲತ್ತಡ್ಕ ಗ್ರಾ.ಪಂ.ನವರು ಪ್ರಶಸ್ತಿ ಸ್ವೀಕಾರಕ್ಕೆ ಬೆಂಗಳೂರಿಗೆ ತೆರಳಿದ್ದರು. ಅವರಲ್ಲಿ ಹಲವರಿಗೆ ಪ್ರಶಸ್ತಿ ದೊರೆಯದೆ ನಿರಾಶರಾಗಿ ಹಿಂತಿರುಗಬೇಕಾಯಿತು. ಕೆಲವರು ಬೇರೆಯವರಿಗೆ ಸಿಕ್ಕ ಪ್ರಶಸ್ತಿ ಫಲಕವನ್ನು ತೆಗೆದುಕೊಂಡು ತಾವು ಹಿಡಿದುಕೊಂಡು ಫೊಟೋ ತೆಗೆಸಿಕೊಂಡು ಹಿಂತಿರುಗಿಸಿದರೆಂದು ಹೇಳಲಾಗಿದೆ. ಹರಿಹರಪಲ್ಲತ್ತಡ್ಕ ಗ್ರಾ.ಪಂ.ನವರಿಗೆ ಮುಖ್ಯಮಂತ್ರಿಗಳು ಬರುವುದಕ್ಕೆ ಮೊದಲೇ ಜಲಸಂಜೀವಿನಿ ಪ್ರಶಸ್ತಿ ಪ್ರದಾನವಾಗಿತ್ತು ಎಂದು ತಿಳಿದುಬಂದಿದೆ.

ಪ್ರಶಸ್ತಿ ಸ್ವೀಕಾರಕ್ಕೆಂದು ಬೆಂಗಳೂರಿಗೆ ಹೋಗಿದ್ದ ಸಂಪಾಜೆ ಗ್ರಾ.ಪಂ. ತಂಡ


ನೂಕುನುಗ್ಗಲಿನ ಕಾರಣದಿಂದ ಪ್ರಶಸ್ತಿ ಸಿಗದಾದಾಗ ಅಲ್ಲಿಗೆ ಬಂದಿದ್ದ ಬೇರೆ ಬೇರೆ ಜಿಲ್ಲೆಗಳ ನೂರಾರು ಮಂದಿ ಪಂಚಾಯತ್ ಪ್ರತಿನಿಧಿಗಳು ಪ್ರತಿಭಟನೆ, ಧಿಕ್ಕಾರ ಕೂಗುವ ಸಂದರ್ಭವೂ ಸೃಷ್ಟಿಯಾಯಿತು. ಆಗ ಅಧಿಕಾರಿಗಳು ಪ್ರಶಸ್ತಿ ಪಡೆಯಲಾಗದ ಗ್ರಾ.ಪಂ.ಗಳಿಗೆ ಪ್ರಶಸ್ತಿಗಳನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು.