ಎ.11: ಸುಳ್ಯ ರಂಗಮಯೂರಿಯಲ್ಲಿ ಮಕ್ಕಳ ಹಬ್ಬ “ಬಣ್ಣ”

0

ರಾಜ್ಯ ಮಟ್ಟದ ತರಬೇತುದಾರರಿಂದ ತರಬೇತಿ ಶಿಬಿರ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲೆ, ಸಾಹಿತ್ಯದಲ್ಲಿ ಬಹಳಷ್ಟು ಆಸಕ್ತಿಯ ಜೊತೆಗೆ ಪ್ರತಿಭಾವಂತರಾಗಿರುತ್ತಾರೆ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿಯೇ ರೂಪುಗೊಂಡ ಶೈಕ್ಷಣಿಕ ಸಂಸ್ಥೆ ರಂಗ ಮಯೂರಿ ಕಲಾಶಾಲೆಯು ವಿದ್ಯಾರ್ಥಿಗಳಿಗೆ ತರಬೇತಿಯ ಜೊತೆಗೆ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಸಂಸ್ಥೆಯಾಗಿದೆ.

ಪ್ರಾರಂಭದಲ್ಲಿ ಹಂತ ಹಂತವಾಗಿ ಸಾಕಷ್ಟು ಆಸಕ್ತ ವಿದ್ಯಾರ್ಥಿಗಳು ತಮ್ಮ ಕ್ಷೇತ್ರವನ್ನು ಆರಿಸಿಕೊಂಡು ರಂಗಮಯೂರಿ ಕಲಾಶಾಲೆಯನ್ನು ಸೇರುವುದರ ಜೊತೆಗೆ, ವೇದಿಕೆಯ ಮೇಲೆ ಅಭಿನಯ, ನಾಟಕ,ನೃತ್ಯ, ಸಂಗೀತ ಯೋಗ, ಭಜನೆ, ಯಕ್ಷಗಾನ ಕಲಾ ಪ್ರಕಾರಗಳಲ್ಲಿ ಹಲವಾರು ಪ್ರದೇಶಗಳಲ್ಲಿ ಕಾರ್ಯಕ್ರಮ ನೀಡಿ ರಾಷ್ಟ್ರ ಮಟ್ಟಕ್ಕೂ ತಲುಪಿರುವುದು ಸುಳ್ಯಕ್ಕೆ ಹೆಮ್ಮೆ. ಸಾಮಾಜಿಕ ಹಾಗೂ ಸಾಂಸ್ಕ್ರತಿಕವಾಗಿ ಎಲ್ಲರನ್ನೂ ಬೆಳೆಸುವ ಉದ್ದೇಶದಿಂದ ಪ್ರತೀ ದಿನ ಹೊಸತನವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿಭಿನ್ನ ಶೈಲಿಯಲ್ಲಿ ವಿದ್ಯಾರ್ಥಿಗಳಿಗಾಗಿಯೇ ಹಲವಾರು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಒದಗಿಸಿಕೊಡುವುದರೊಂದಿಗೆ ಮಕ್ಕಳು ಸ್ವತಂತ್ರವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿಕೊಳ್ಳುವಲ್ಲಿ ರಂಗ ಮಯೂರಿ ಕಲಾಶಾಲೆಯು ಮಾದರಿಯಾಗಿದೆ.

ರಂಗಮಯೂರಿ ಕಲಾಶಾಲೆಯಲ್ಲಿ ಯೋಗ, ಕರಾಟೆ, ಭಜನೆ, ಯಕ್ಷಗಾನ, ಡ್ರಾಯಿಂಗ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ,‌‌ ನೃತ್ಯ, ಅಭಿನಯ ಇತ್ಯಾದಿ ತರಗತಿಗಳನ್ನು ನುರಿತ ಶಿಕ್ಷಕರ ಮಾರ್ಗದರ್ಶನದಲ್ಲಿ ವಾರದ ಪ್ರತಿ ದಿನಗಳಲ್ಲಿ ನಡೆಸಲಾಗುತ್ತಿದೆ. ಅಲ್ಲದೇ ಪ್ರಸ್ತುತ ಕಲಾಶಾಲೆಯು ವಿದ್ಯಾರ್ಥಿಗಳನ್ನು ಸ್ಥಳೀಯ ವೇದಿಕೆಯ ಜೊತೆಗೆ ಹೊರಗಿನ ರಾಜ್ಯ, ರಾಷ್ಟ್ರಮಟ್ಟದ ವೇದಿಕೆಗಳಲ್ಲೂ ಕಾರ್ಯಕ್ರಮ, ಸ್ಪರ್ಧೆಗಳೊಂದಿಗೆ ವಿಜೇತರಾಗಿಸಿರುವುದನ್ನು ಕಾಣಬಹುದಾಗಿದೆ.

ಇವೆಲ್ಲದರ ಜೊತೆಗೆ, ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳನ್ನು ಮತ್ತಷ್ಟು ಕ್ರಿಯಾತ್ಮಕವಾಗಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಬೇಸಿಗೆ‌ ಶಿಬಿರವನ್ನು ಆಯೋಜಿಸುತ್ತಾ ಬಂದಿರುತ್ತದೆ. ಸುಳ್ಯದಲ್ಲಿ ಮತ್ತು ಮಡಿಕೇರಿಯಲ್ಲಿ ಪ್ರತ್ಯೇಕವಾಗಿ ನಡೆಯುವ ಈ ಶಿಬಿರದಲ್ಲಿ‌ ರಾಜ್ಯ ಮಟ್ಟದ ತರಬೇತುದಾರರೊಂದಿಗೆ ಮಕ್ಕಳು ತರಬೇತಿಯನ್ನು ಪಡೆಯುವುದರ ಜೊತೆಗೆ, ಅಪರಿಚಿತ ಮಕ್ಕಳನ್ನು‌ ಒಂದೇ ಕಡೆ ಒಂದೇ ವೇದಿಕೆಯಲ್ಲಿ ಪರಿಚಯಸ್ಥರನ್ನಾಗಿಸಿ ಮನೊಲ್ಲಾಸದಿಂದ ಮನರಂಜಿಸುವಂತೆ ಮಾಡುತ್ತದೆ. ಸಿಗುವ ಕಡಿಮೆ ಕಾಲಾವಕಾಶದಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡಿ ಕೊನೆಯ ದಿನ ಪ್ರತೀ ಮಗುವೂ ವೇದಿಕೆಯಲ್ಲಿ ಸಾಂಸ್ಕ್ರತಿಕ ಪ್ರದರ್ಶನಕ್ಕೆ ತಯಾರಾಗುವಂತೆ ಮಾಡುವುದು ಬಣ್ಣ ಶಿಬಿರದ ವಿಶೇಷವಾಗಿರುತ್ತದೆ.

ಈ ಬಾರಿಯೂ‌‌ ಬೇಸಿಗೆ ಶಿಬಿರ‌ ‘ಬಣ್ಣ – 2023’ ಎ.11ರಿಂದ ನಡೆಯಲಿದ್ದು ರಾಜ್ಯದ ವಿವಿಧ ಕ್ಷೇತ್ರದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ತರಬೇತಿಗಾಗಿ ಭಾಗವಹಿಸುತ್ತಿದ್ದು 17 (6-7) ವರ್ಷ ವಯೋಮಿತಿಯ ವಿದ್ಯಾರ್ಥಿಗಳು ಬಾಗವಹಿಸಬಹುದಾಗಿದೆ.

ಏಪ್ರಿಲ್ 11 ರಿಂದ 18 ರವರೆಗೆ ಸುಳ್ಯದ ಕಾಯರ್ತೋಡಿ‌ ಶ್ರೀ ಮಹಾವಿಷ್ಣು ದೇವಾಲಯದ ಆವರಣದಲ್ಲಿ ಹಾಗೂ ಏಪ್ರಿಲ್ 22 ರಿಂದ 30 ರ ವರೆಗೆ ಮಡಿಕೇರಿಯ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ನಡೆಯುತ್ತದೆ. ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬಹುದಾಗಿ ತಿಳಿಸಲಾಗಿದೆ.


ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ 9611355496 , 6363783983 ಸಂಪರ್ಕಿಸಿ, ನೋಂದಾವಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.