ಸೋಣಂಗೇರಿ : ಜಿಬ್ಬಡ್ಕ – ಕೊಯಿಂಗೋಡಿಮೂಲೆ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟಿಕರಣಗೊಳಿಸುವಂತೆ ನಾಗರಿಕರ ಮನವಿ

0

ಜಾಲ್ಸೂರು ಗ್ರಾಮದ ಸೋಣಂಗೇರಿಯ ಜಿಬ್ಬಡ್ಕ – ಕೊಯಿಂಗೋಡಿಮೂಲೆ ರಸ್ತೆ ಅಗಲೀಕರಣ, ತಡೆಗೋಡೆ ನಿರ್ಮಾಣ ಹಾಗೂ ಕಾಂಕ್ರೀಟೀಕರಣ ಗೊಳಿಸಿಕೊಡುವಂತೆ ಈ ಭಾಗದ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.
ಪೈಚಾರು – ಸೋಣಂಗೇರಿ ರಸ್ತೆಯ ಅಭಿವೃದ್ಧಿ ಕಾರ್ಯ ಜರುಗುತ್ತಿದ್ದು, ಜಿಬ್ಬಡ್ಕದಿಂದ ಸೋಣಂಗೇರಿ ಮುಖ್ಯ ರಸ್ತೆಗೆ ರಸ್ತೆ ಎತ್ತರಿಸಲ್ಪಡುವ ಕಾಮಗಾರಿ ಜರುಗುತ್ತಿದೆ.
ರಸ್ತೆಯನ್ನು ಮಣ್ಣು ಹಾಕಿ ಎತ್ತರ ಮಾಡಲಾಗುತ್ತಿದ್ದು ಇದರಿಂದಾಗಿ ಜಿಬ್ಬಡ್ಕದಿಂದ ಕೊಯಿಂಗೋಡಿಮೂಲೆ ಹೊಸಗದ್ದೆ ಸಂಪರ್ಕ ರಸ್ತೆಯು ತೀರಾ ಕೆಳಭಾಗಕ್ಕೆ ಬರಲಿದ್ದು, ಮಳೆಗಾಲದಲ್ಲಿ ವಾಹನ ಸಂಚಾರ ಸೇರಿದಂತೆ ಸಾರ್ವಜನಿಕರಿಗೆ ನಡೆದಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಈ ರಸ್ತೆಯನ್ನು ಅಗಲೀಕರಣಗೊಳಿಸಿ, ತಡೆಗೋಡೆ ನಿರ್ಮಾಣ ಮಾಡಿ ರಸ್ತೆ ಕಾಂಕ್ರಿಟೀಕರಣ ಮಾಡಿಕೊಡುವಂತೆ ಈ ಭಾಗದ ನಾಗರಿಕರು ಸಮಾಜ ಕಲ್ಯಾಣ ಇಲಾಖೆ ಹಾಗೂ ಶಾಸಕರಿಗೆ ಮನವಿ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ರಸ್ತೆ ಅಗಲೀಕರಣಗೊಳಿಸಿ, ಪಕ್ಕದ ತೋಟದ ಬದಿ ತಡೆಗೋಡೆ ನಿರ್ಮಾಣ ಮಾಡಿದರೆ ಕೊಯಿಂಗೋಡಿಮೂಲೆ, ಹೊಸಗದ್ದೆ ಭಾಗದಲ್ಲಿ ಸುಮಾರು 40ಕ್ಕೂ ಅಧಿಕ ಮನೆಗಳಿದ್ದು , ಇದರಿಂದ ಈ ಭಾಗದ ಜನರಿಗೆ ಸಂಚರಿಸಲು ಅನುಕೂಲವಾಗಲಿದೆ ಎಂದು ನಾಗರಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಾಲ್ಸೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಈ ರಸ್ತೆಯು ಕೂಡ ಅಲ್ಲಲ್ಲಿ ಹೊಂಡ -ಗುಂಡಿಗಳಿಂದ ಕೂಡಿದ್ದು, ರಸ್ತೆಗೆ ಸಮರ್ಪಕ ಚರಂಡಿಯೂ ಇಲ್ಲದೆ ಮಳೆಗಾಲದಲ್ಲಿ ರಸ್ತೆಯಲ್ಲಿಯೇ ಮಳೆನೀರು ಹರಿಯುತ್ತದೆ‌. ಆದ್ದರಿಂದ ಈ ರಸ್ತೆಯೂ ಅಭಿವೃದ್ಧಿಯಾಗಬೇಕಾಗಿದೆ. ಜಿಬ್ಬಡ್ಕದ ಸೇತುವೆ ಪರಿಸರದಲ್ಲಿ ಕಿಡಿಗೇಡಿಗಳು ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದು, ಪ್ರತೀ ವರ್ಷ ರಸ್ತೆ ಬದಿ ಕಾಡು ಕಡಿಯುವ ಕೆಲಸವೂ ಸಮರ್ಪಕವಾದ ರೀತಿಯಲ್ಲಿ ಆಗುತ್ತಿಲ್ಲ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.