ಸುಳ್ಯ- ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಹೋರಾಟ ಸಮಿತಿ ಸಭೆ

0

ಮತದಾನದಲ್ಲಿ ಭಾಗವಹಿಸಲು ನಿರ್ಧಾರ



ಸುಳ್ಯ- ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಹೋರಾಟ ಸಮಿತಿ ಸಭೆಯು ಇಂದು ಕಮಿಲಡ್ಕದಲ್ಲಿ ನಡೆದು ಈ ಹಿಂದೆ ಪ್ರಸ್ತಾಪಿಸಲ್ಪಟ್ಟ ಮತದಾನ ಬಹಿಷ್ಕಾರವನ್ನು ಕೈ ಬಿಟ್ಟು ಮತದಾನದಲ್ಲಿ ಭಾಗವಹಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ.
ಸುಳ್ಯ- ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಅಭಿವೃದ್ಧಿಯಾಗಬೇಕೆಂಬುದು ಹಲವು ವರುಷಗಳ ಬೇಡಿಕೆಯಾಗಿದ್ದು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಹಲವು ಬಾರಿ ಮನವಿ, ಪ್ರತಿಭಟನೆ ನಡೆಸಲಾಗಿತ್ತು.ಇತ್ತೀಚೆಗೆ ಸುಳ್ಯ ನಗರ ಪಂಚಾಯತ್ ಎದುರು ಬೃಹತ್ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗಿತ್ತು.ಮತದಾನ ಬಹಿಷ್ಕಾರ ಮಾಡುವುದೇ ಸೂಕ್ತ ಎಂಬ ನಿರ್ಧಾರರವನ್ನು ಹಿಂದಿನ ಸಭೆಯಲ್ಲಿ ನಿರ್ಧರಿಸಿ ಅಲ್ಲಲ್ಲಿ ಬ್ಯಾನರ್ ಕೂಡ ಅಳವಡಿಸಲಾಗಿತ್ತು.


ಆ ಬಳಿಕ ಮತದಾನ ಬಹಿಷ್ಕಾರ ಮಾಡಲು ಊರವರಿಂದ ಪೂರ್ಣಪ್ರಮಾಣದ ಸಹಕಾರ ದೊರೆಯಲಿಲ್ಲವೆಂದೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಜನರ ಹಕ್ಕು ಅದನ್ನು ಚಲಾಯಿಸದೇ ಇರುವುದು ಸರಿಯಲ್ಲ .ಮತದಾನ ಮಾಡಲಿಲ್ಲ ಎಂಬ ಕಾರಣಕ್ಕೆ ಅಭಿವೃದ್ಧಿ ಗೆ ಹಿನ್ನಡೆಯಾದಿತು ಎಂಬ ಕಾರಣಕ್ಕೆ ಮತದಾನ ಬಹಿಷ್ಕಾರ ಮಾಡಲು ಹಲವರು ಒಲವು ತೋರಲಿಲ್ಲವೆಂದು ತಿಳಿದುಬಂದಿದೆ.


ಎ.29ರಂದು ಕಮಿಲಡ್ಕಕ್ಕೆ ಆಗಮಿಸಿ ಸಭೆ ನಡೆಸಿದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮತ್ತು ಬಿಜೆಪಿ ಮುಖಂಡರು ರಸ್ತೆ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ್ದು,ಶಾಸಕರಾಗಿ ಪ್ರಪ್ರಥಮವಾಗಿ ಈ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ,ಅಭಿವೃದ್ಧಿ ಪಡಿಸಿಕೊಡುವುದಾಗಿ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ. ಜತೆಯಲ್ಲಿದ್ದ ಬಿಜೆಪಿ ನಾಯಕ ಹರೀಶ್ ಉಬರಡ್ಕ ಕೂಡ ಪ್ರಥಮವಾಗಿ ಈ ರಸ್ತೆಯನ್ನು ಸಮಗ್ರ ಅಭಿವೃದ್ಧಿ ಮಾಡಿ ಕೊಡುವುದಾಗಿ ಹೇಳಿದರೆಂದೂ ತಿಳಿದುಬಂದಿದೆ. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ,ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಸದಸ್ಯೆ ಶಶಿಕಲಾ ನೀರಬಿದಿರೆ, ವಿನಯಕುಮಾರ್ ಮುಳುಗಾಡು ಮೊದಲಾದವರು ಉಪಸ್ಥಿತರಿದ್ದರು.
ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇಂದು ಸಭೆ ಸೇರಿದ ನಾಗರಿಕರು ಮತದಾನ ಬಹಿಷ್ಕಾರವನ್ನು ಹಿಂಪಡೆದು ಮತದಾನದಲ್ಲಿ ಭಾಗವಹಿಸಲು ನಿರ್ಧರಿಸಿದರು.


ಸಭೆಯಲ್ಲಿ ಸಿ.ಎ.ಗಣೇಶ ಭಟ್,ಸುರೇಶ್ಚಂದ್ರ ಕಮಿಲ, ಬಾಲಕೃಷ್ಣ ನಾಯರ್ ನೀರಬಿದಿರೆ, ಚಂದ್ರಶೇಖರ ಗೌಡ ಮದಕ,ಮನೋಜ್ ಪಾನತ್ತಿಲ,ಡಾ.ಅಶೋಕ್ ಕೆ.,ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.