ಕೊಡಗು ಸಂಪಾಜೆ : ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಬಿರುಸಿನ ಪ್ರಚಾರ

0

ನರೇಂದ್ರ ಮೋದಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರದ ಸಾಧನೆಗಳೇ ಬಿಜೆಪಿಗೆ ಶ್ರೀರಕ್ಷೆ: ಕೆ.ಜಿ. ಬೋಪಯ್ಯ

ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿಗಳನ್ನು ಕ್ಷೇತ್ರದ ಮತದಾರರು ಧಿಕ್ಕರಿಸುತ್ತಾರೆ: ಕುಂದಲ್ಪಾಡಿ

ವಿರಾಜಪೇಟೆ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಕೆ.ಜಿ. ಭೋಪಯ್ಯ ಅವರು ಮೇ.7ರಂದು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಡಗು ಸಂಪಾಜೆ ಹಾಗೂ ಚೆಂಬು ಗ್ರಾಮದಲ್ಲಿ ಬಿರುಸಿನ ಮತಪ್ರಚಾರ ನಡೆಸಿದರು.

ಕೊಡಗು ಸಂಪಾಜೆಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭೋಪಯ್ಯನವರು ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಬಿಜೆಪಿ ಸರಕಾರ ಬಂದಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಭೀಕರ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ಬಂದಿತ್ತು. ಆದರೆ ಮಂತ್ರಿ ಮಂಡಲವೂ ಇಲ್ಲದೆ ಯಡಿಯೂರಪ್ಪನವರು ಇಡೀ ರಾಜ್ಯದಾದ್ಯಂತ ಸುತ್ತಾಡಿ ಜನರಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ.

ಬಳಿಕ ಕೋವಿಡ್ ನಂತಹ ಕಠಿಣ ಸಂದರ್ಭದಲ್ಲಿಯೂ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಜನರಿಗೆ ಸ್ಪಂದಿಸಿ ಕೆಲಸ ಮಾಡಿದೆ. ಕೋವಿಡ್ ವ್ಯಾಕ್ಸಿನ್ ಕಂಡು ಹಿಡಿದ ಸಂದರ್ಭದಲ್ಲಿಯೂ ಕಾಂಗ್ರೆಸ್ ಅಪಪ್ರಚಾರ ಮಾಡುವ ಕೆಲಸ ಮಾಡಿತ್ತು. ಅಂತಹ ಕಾಂಗ್ರೆಸ್ ಪಕ್ಷ ವನ್ನು ಜನತೆ ಖಂಡಿತವಾಗಿಯೂ ಈ ಬಾರಿಯ ಚುನಾವಣೆಯಲ್ಲಿ ಧಿಕ್ಕರಿಸಬೇಕು ಎಂದು ಹೇಳಿದರು.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸಿ ಪಿ.ಎಫ್.ಐ. ನಂತಹ ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಿದ್ದು, ಜನ ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಿದೆ. ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದಲ್ಲಿ 20ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಕೊಲೆ ಆಗಿದೆ. ಆದರೆ ಆ ಬಳಿಕ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಜನರು ಭಯಮುಕ್ತ ಜೀವನ ನಡೆಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇಲೆ ಜನ ಇಟ್ಟ ನಂಬಿಕೆ ಎಂದಿಗೂ ಹುಸಿಯಾಗುವುದಿಲ್ಲ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸಾಧನೆಯೇ ನಮಗೆ ಶ್ರೀರಕ್ಷೆ ಎಂದು ಕೆ.ಜಿ. ಭೋಪಯ್ಯನವರು ಹೇಳಿದರು.

ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ ರೈತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿದೆ.

80ರ ದಶಕದ ಬಳಿಕ ಬಿಜೆಪಿ ಜನತೆಗೆ ತಾನು ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸಿದೆ.

ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿ ಹಾಗೂ ಅಪಪ್ರಚಾರಕ್ಕೆ ಜನತೆ ಕಿವಿಗೊಡಬಾರದು. ಸಂಪಾಜೆ , ಚೆಂಬು ಭಾಗದಲ್ಲಿ ಕಾಂಗ್ರೆಸ್ಸಿಗೆ ಕಾರ್ಯಕರ್ತರೇ ಇಲ್ಲ. ಆದರೆ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ರಾಜ್ಯದ ಜನರ ಅಭಿವೃದ್ಧಿ ಹಾಗೂ ಹಿಂದೂ ಸಮಾಜದ ರಕ್ಷಣೆಯೇ ನಮ್ಮ ಉದ್ಧೇಶವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ , ತಳೂರು ಕಿಶೋರ್ ಕುಮಾರ್, ಕೊಡಗು ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಿರ್ಮಲ ಭರತ್ ಸೇರಿದಂತೆ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.