ಮಾನವೀಯ ಮೌಲ್ಯಗಳ ಗಣಿ ರೆಡ್ ಕ್ರಾಸ್ ಸಂಸ್ಥೆ : ಮೇ 8 ವಿಶ್ವ ರೆಡ್ ಕ್ರಾಸ್ ದಿನ

0
      *ಜನತೆಯಿಂದ ಜನತೆಗೆ ನೆರವು* ಎಂಬ ಕಲ್ಪನೆಯೊಂದಿಗೆ ಹುಟ್ಟಿಕೊಂಡ ರೆಡ್ ಕ್ರಾಸ್ ಸಂಸ್ಥೆಯ ಹುಟ್ಟು ಮಾನವನ ಇತಿಹಾಸದಲ್ಲಿಯೇ ಒಂದು ಕುತೂಹಲಕಾರಿ ವಿಚಾರ.

ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಹೆಜ್ಜೆ ಇಡುತ್ತಿರುವ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟುಹಾಕಿದ ಮಹಾನ್ ಚೇತನ ಶ್ರೀ ಹೆನ್ರಿ ಡ್ಯೂನಾಂಟ್. ಈ ಮಹಾನ್ ಚಿಂತಕ ಜನಿಸಿದ್ದು, ಮೇ 8, 1828 ರಂದು. ಇಂತಹ ಮಹಾತ್ಮನನ್ನು ಸ್ಮರಿಸುವ ಸಲುವಾಗಿ ಇವರು ಹುಟ್ಟಿದ ದಿನ ಮೇ 8ನ್ನು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ದಿನವನ್ನಾಗಿ ಇಂದು ಜಗತ್ತಿನಾದ್ಯಂತ ಆಚರಿಸುತ್ತಿದ್ದಾರೆ.

ರೆಡ್ ಕ್ರಾಸ್ ಸ್ಥಾಪನೆಯ ಹಿಂದಿದೆ ಮನಕಲಕುವ ದೃಶ್ಯ:
1859 ಜೂನ್ 24ರಂದು ಇಟಲಿ, ಫ್ರಾನ್ಸ್ ಹಾಗೂ ಆಸ್ಟ್ರಿಯ ದೇಶಗಳ ನಡುವೆ ಸಲ್ಫೆರಿನೋ ಎಂಬ ಪ್ರದೇಶದಲ್ಲಿ 15 ಗಂಟೆಗಳ ಕಾಲ ಯುದ್ಧ ನಡೆದು ಸುಮಾರು 3 ಲಕ್ಷಕ್ಕೂ ಹೆಚ್ಚು ಸೈನಿಕರು ಕಾದಾಡುತ್ತಾರೆ. ಯುದ್ಧ ಮುಗಿದ ನಂತರ ರಣರಂಗದಲ್ಲಿ ಸತ್ತ ಮತ್ತು ಗಾಯಗೊಂಡ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ, ನೋವಿನಿಂದ ಚೀರಾಡುತ್ತಿದ್ದರೂ ಸಹಾಯ ಹಸ್ತ ಚಾಚಲು ಕೈಗಳಿರಲಿಲ್ಲ. ಮೃತ ದೇಹ ಸಾಗಿಸುವವರಿರಲಿಲ್ಲ. ಬದುಕುಳಿದ ಗಾಯಾಳು ಸೈನಿಕರಿಗೆ ಔಷಧೋಪಚಾರ ನೀಡಲು ಆಸ್ಪತ್ರೆಗಳು ಹಾಗೂ ವೈದ್ಯರ ಸಂಖ್ಯೆ ತೀರಾ ಕಡಿಮೆ ಪ್ರಮಾಣದಲ್ಲಿತ್ತು,. ಈ ಸಂದರ್ಭದಲ್ಲಿ ಸ್ವಿಟ್ಜರ್ ಲ್ಯಾಂಡಿನ ಒಬ್ಬ ವ್ಯಾಪಾರಿ ಸರ್ ಹೆನ್ರಿ ಡ್ಯೂನಾಂಟ್ ಎಂಬಾತ ಯುದ್ಧ ರಂಗದ ಬಳಿ ಹಾದು ಹೋಗುತ್ತಿದ್ದಾಗ ಈ ಭಯಾನಕ ರಣರಂಗದ ರಕ್ತದೋಕುಳಿ, ನೋವು, ಕಿರುಚಾಟ, ಮೃತ ದೇಹಗಳನ್ನು ಕಂಡು ಮಮ್ಮಲ ಮರುಗುತ್ತಾನೆ. ಹೆನ್ರಿ ಢ್ಯೂನಾಂಟ್ ಒಬ್ಬ ಪಕ್ಕ ವ್ಯಾಪಾರಿಯಾಗಿದ್ದ. ಅವನು ಅಲ್ಜೀರಿಯದಲ್ಲಿ ಕಾರ್ನ್ ಮಿಲ್ಲುಗಳನ್ನು ಪ್ರಾರಂಭಿಸಲು ನೆಪೋಲಿಯನ್ ದೊರೆಯ ಹತ್ತಿರ ಅನುಮತಿ ಪಡೆಯಲು ಆ ದಾರಿಯಲ್ಲಿ ಹೋಗುತ್ತಿದ್ದ. ಆದರೆ ಮಾನವೀಯತೆಯ ಮುಂದೆ ಅವನ ವ್ಯಾಪಾರ ಬುದ್ಧಿ ಮಂಕಾಗುತ್ತದೆ. ಸೂರ್ಯ ಮುಳುಗುವ ಹೊತ್ತಿಗೆ ಆ ಯುದ್ಧಭೂಮಿಯ ಹತ್ತಿರ ಆಗಮಿಸಿದ್ದ ಹೆನ್ರಿ ಮರುದಿನ ಸೂರ್ಯ ಉದಯಿಸುವವರೆಗೂ ಸ್ಥಳೀಯ ಜನರ ಸಹಕಾರ ಪಡೆದು ಗಾಯಗೊಂಡ ಸೈನಿಕರನ್ನು ಎತ್ತಿನ ಗಾಡಿಗಳಲ್ಲಿ ಹಾಕಿಕೊಂಡು ಅಲ್ಲಿಂದ ಅನತಿ ದೂರದಲ್ಲಿರುವ ಕ್ರಾಸ್ಟೆಗ್ಲಿಯನ್ ಪ್ರದೇಶಕ್ಕೆ ಕೊಂಡು ಹೋಗಿ ಗಾಯಾಳುಗಳನ್ನು ಖಾಸಗಿ ಮನೆ, ಚರ್ಚ್, ಆಶ್ರಮ, ಮಸೀದಿಗಳಲ್ಲಿ ಇರಿಸಿ ಉಪಚರಿಸುತ್ತಾನೆ. ಯಾವುದೇ ದೇಶ, ಧರ್ಮ, ಮತ, ಜಾತಿ, ಕುಲ, ಗೋತ್ರ, ಬಣ್ಣಗಳ ಭೇದವಿಲ್ಲದೆ ಎಲ್ಲಾ ದೇಶದ ಗಾಯಾಳುಗಳನ್ನು ಉಪಚರಿಸಿ ಮಾನವೀಯತೆ ಮೆರೆಯುತ್ತಾನೆ.

          ಕಾಲಚಕ್ರ ಉರುಳುತ್ತಿತ್ತು. ಜನ ಎಲ್ಲವನ್ನೂ ಮರೆತರು. ಆದರೆ ಅದನ್ನು ಕಣ್ಣಾರೆ ನೋಡಿದ ಹೆನ್ರಿಗೆ ಮಾತ್ರ ಅದರಿಂದ ಹೊರಬರಲಾಗಲಿಲ್ಲ. ಯುದ್ಧದ ಭೀಕರ ದೃಶ್ಯಗಳು ಹೆನ್ರಿಯ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಇದು ಮನುಷ್ಯ ಜೀವನದ ಸಹಜ ಪ್ರಕ್ರಿಯೆ. ಯಾರ ಜೀವನದಲ್ಲಿ ಮರೆಯಲಾಗದ ಘಟನೆಗಳು ನಡೆದಿರುತ್ತವೆಯೋ ಅವರು ಅದರಿಂದ ಹೊರಬರಲು ಬಹಳ ಕಷ್ಟ ಪಡುತ್ತಾರೆ. ಅದೇ ರೀತಿ ಹೆನ್ರಿಯವರು ಯುದ್ಧದ ಭೀಕರತೆಯನ್ನು ನೇರವಾಗಿ ನೋಡಿದ್ದರಿಂದ ಅದಕ್ಕೊಂದು ಶಾಶ್ವತ ಪರಿಹಾರ ಪಡೆಯಬೇಕೆಂದು ಆಲೋಚಿಸಿ, ಯುದ್ಧದ ಕುರಿತಾಗಿ *"ದಿ ಮೆಮೋರಿ ಆಫ್ ಸೆಲ್ಫೆರಿನೋ'* ಎಂಬ ಕೃತಿಯನ್ನು ಪ್ರಕಟಿಸಿ ಅದನ್ನು ವಿಶ್ವದಾದ್ಯಂತ ಹಂಚುತ್ತಾರೆ. ಆ ಪುಸ್ತಕದಲ್ಲಿ ಯುದ್ಧಕಾಲದಲ್ಲಿ ಮಾನವೀಯತೆಯನ್ನು ಮೆರೆಯಲು ಎರಡು ಕಾರ್ಯಸೂಚಿಯನ್ನು ಜಾರಿಗೆ ತರಬೇಕೆಂದು ಉಲ್ಲೇಖಿಸಿ ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡುತ್ತಾರೆ.
  1. ಅಂತಾರಾಷ್ಟ್ರೀಯ ಸ್ವಯಂಸೇವಕರ ಸಂಘಟನೆಯನ್ನು ಶಾಂತಿಕಾಲದಲ್ಲಿ ಪ್ರತಿಷ್ಠಾಪಿಸಿ, ಆ ತಂಡ ಯುದ್ಧ ಮುಕ್ತಾಯವಾದ ಮೇಲೆ ಅಲ್ಲಿನ ಗಾಯಳುಗಳನ್ನು ಜಾತಿ, ಮತ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಗಮನಿಸದೇ ಉಪಚರಿಸಬೇಕು.
  2. ಗಾಯಾಳು ಸೈನಿಕರನ್ನು ಉಪಚರಿಸುವ ವೈದ್ಯರು, ಇತರ ಸಹಾಯಕರನ್ನು ತಟಸ್ಥರು (ಯಾವ ಪಕ್ಷಕ್ಕೂ ಸೇರದವರು) ಎಂದು ಘೋಷಿಸಿ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಬೇಕು. ಈ ಎರಡು ಕಾರ್ಯಸೂಚಿಗಳನ್ನು ಆ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾರೆ. ಇದನ್ನು ಓದಿದ ಜಿನೇವಾದ ಸಮಾಜ ಕಲ್ಯಾಣ ಸಂಸ್ಥೆಯೊಂದು ಹೆನ್ರಿಯ ಸಂಕಲ್ಪಗಳನ್ನು ಸಾಕಾರಗೊಳಿಸಲು ಮುಂದೆ ಬಂದು, ಐದು ಮಂದಿಯ ಒಂದು ಸಮಿತಿಯನ್ನು ಸ್ಥಾಪಿಸಿ, 1863 ಅಕ್ಟೋಬರ್ 26ರಂದು ಜನೇವಾದಲ್ಲಿ ಒಂದು ಸಮ್ಮೇಳನವನ್ನು ನಡೆಸಿ ಅಲ್ಲಿ, *'ಗಾಯಗೊಂಡ ಸೈನಿಕರ ಸಹಕಾರ ಸಂಸ್ಥೆ'* ಎಂಬ ಹೆಸರಿನಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯೊಂದನ್ನು ಸ್ಥಾಪಿಸಲು ತೀರ್ಮಾನಿಸುತ್ತಾರೆ. ಮುಂದೆ ಇದೆ ಸಂಸ್ಥೆ *"ರೆಡ್ ಕ್ರಾಸ್"* ಎಂಬ ಹೆಸರನ್ನು ಪಡೆದುಕೊಳ್ಳುತ್ತದೆ. ಹೀಗೆ ಮಾನವೀಯ ಅಂತಃಕರಣದ ಒಬ್ಬ ವ್ಯಾಪಾರಿಯ ಪ್ರಯತ್ನದಿಂದ ರೆಡ್ ಕ್ರಾಸ್ ಸಂಸ್ಥೆ 1863 ರಲ್ಲಿ ಉಗಮವಾಯಿತು. ಭಾರತದಲ್ಲಿ 1920 ರಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಯಾರಂಭ ಮಾಡುತ್ತದೆ. ಕರ್ನಾಟಕದಲ್ಲಿ 1921 ರಿಂದ ಕಾರ್ಯಾಚರಿಸುತ್ತಿದೆ.

‘ರೆಡ್ ಕ್ರಾಸ್ ನ ಮೂಲ ತತ್ವಗಳು ಯುವ ಜನಾಂಗಕ್ಕೆ ದಾರಿದೀಪ’:

   ರೆಡ್ ಕ್ರಾಸ್ ಸಂಸ್ಥೆ ತನ್ನ ಸೇವಾ ಕೈಂಕರ್ಯದಿಂದ ಜಾಗತಿಕ ಆಶಾಕಿರಣವಾಗಿ ಹೊರಹೊಮ್ಮಿ ಇಂದು ಸರ್ವಕಾಲಿಕ ಸೇವಾ ಸಂಸ್ಥೆಯಾಗಿ ಆಕಸ್ಮಿಕ ಅವಘಡ ಸಂದರ್ಭದಲ್ಲಿ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮಾನವೀಯ ನೆರವು ನೀಡುವುದರೊಂದಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಜನರಲ್ಲಿ ಮಾನವೀಯ ತತ್ವ ಮತ್ತು ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳ ಆಯೋಜನೆ, ರಕ್ತದಾನದ ಮೂಲಕ ಜೀವ ಉಳಿಸುವ ಕಾರ್ಯಗಳಿಗೆ ಮುಂದಡಿಯಿಡುತ್ತಿದೆ. ಇಂಥ ಕಾರ್ಯದಲ್ಲಿ ತೊಡಗಿಕೊಳ್ಳಲು ಕಾರಣವೇ ರೆಡ್ ಕ್ರಾಸ್ ನ  ತತ್ವಗಳು-----
  1. ಮಾನವೀಯತೆ (ಪರಸ್ಪರ ತಿಳುವಳಿಕೆ, ಸ್ನೇಹ, ಸಹಕಾರ, ಶಾಂತಿ, ಜನರ ಮನಸ್ಸನ್ನು ಅರಿತು ಕಷ್ಟಕ್ಕೆ ಸ್ಪಂದಿಸು)
  2. ನಿಷ್ಪಕ್ಷಪಾತ (ಜಾತಿ, ಮತ, ಧರ್ಮ, ರಾಷ್ಟ್ರೀಯತೆ, ವರ್ಗ, ರಾಜಕೀಯ ಅಭಿಪ್ರಾಯಗಳಲ್ಲಿ ಯಾವುದೇ ಪಕ್ಷಪಾತ ಇಲ್ಲ)
  3. ತಟಸ್ಥತೆ (ರಾಜಕೀಯ, ಜನಾಂಗೀಯ, ಧಾರ್ಮಿಕ, ಆದರ್ಶವಾದಗಳ ವಿಚಾರದಲ್ಲಿ ಭಾಗಿಯಾಗುವಂತಿಲ್ಲ)
  4. ಸ್ವಾತಂತ್ರ್ಯ (ತನ್ನದೇ ಆದ ನೀತಿ ನಿಯಮಗಳಿಗೆ ಒಳಪಟ್ಟು ಮೂಲ ತತ್ವಗಳಿಗೆ ಧಕ್ಕೆ ಆಗದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸು)
  5. ಸ್ವಯಂ ಸೇವೆ (ಯಾವುದೇ ಲಾಭ ಗಳಿಕೆಯ ಉದ್ದೇಶ ಇರಬಾರದು)
  6. ಏಕತೆ (ದೇಶದ ಹಿತಕ್ಕಾಗಿ ಜೊತೆಯಾಗಿ ಸೇವೆ)
  7. ವಿಶ್ವ ವ್ಯಾಪಕತೆ (ವಿಶ್ವ ವ್ಯಾಪಿ ಸಂಘಟನೆಯಾದ್ದರಿಂದ ಸೇವೆ ಮಾಡಲು ಯಾವುದೇ ಗಡಿ ರೇಖೆಗಳ ನಿರ್ಬಂಧವಿಲ್ಲ)
    ಈ ಎಲ್ಲ ಕಾರಣಗಳಿಗಾಗಿ ಇದನ್ನು Serve Humanity- – ಮಾನವೀಯತೆಯ ಸೇವೆ ಎಂದು ಕರೆಯುತ್ತಾರೆ.

“ಯುವ ರೆಡ್ ಕ್ರಾಸ್ ಯುವಕರ ನಾಡಿಮಿಡಿತ”
“ಇಂದಿನ ಯುವಕರು ನಾಳಿನ ಪ್ರೇರಕ ಶಕ್ತಿ” ಎಂದು
ಭಾರತದ ಮಾಜಿ ಪ್ರಧಾನಿ ನೆಹರೂ ಅವರ ಉಲ್ಲೇಖವನ್ನು ನಾವು ದಿನನಿತ್ಯ ಮೆಲುಕು ಹಾಕುತ್ತೇವೆ. ಯುವಕರನ್ನು ದೇಶದ ಸಮಾಜಮುಖಿ ಪ್ರಜೆಗಳಾಗಿ ರೂಪಿಸಬೇಕಾದ ಅಗತ್ಯ ಇದೆ. ಮಾನವೀಯ ಮೌಲ್ಯಗಳು, ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನದಲ್ಲಿ ಮಕ್ಕಳ ನಾಳಿನ ಭವಿಷ್ಯವನ್ನು ರೂಪಿಸುವುದು ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಮಾನವೀಯ ಅಂತಃಕರಣದಿಂದಲೇ ಹುಟ್ಟಿಕೊಂಡ ರೆಡ್ ಕ್ರಾಸ್ ಸಂಸ್ಥೆಯ ಅಂಗಸಂಸ್ಥೆಯಾದ ಯುವ ರೆಡ್ ಕ್ರಾಸ್ ಘಟಕಗಳನ್ನು ಎಲ್ಲಾ ಕಾಲೇಜುಗಳಲ್ಲಿ ತೆರೆದು 18 ರಿಂದ 30 ವರ್ಷದ ಒಳಗಿನ ಯುವಕರಿಗೆ ಇದರಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿತು. ಇಂದು ದೇಶದಾದ್ಯಂತ ಕಾಲೇಜುಗಳಲ್ಲಿ ರೆಡ್ ಕ್ರಾಸ್ ಘಟಕಗಳನ್ನು ಆರಂಭಿಸಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುವುದರೊಂದಿಗೆ ಆರೋಗ್ಯದ ಅರಿವು, ಮಾದಕ ವ್ಯಸನಗಳ ಜಾಗೃತಿ, ಪ್ರಥಮ ಚಿಕಿತ್ಸೆ, ಪ್ರವಾಹ ಮತ್ತು ಇತರ ತುರ್ತು ಸಂದರ್ಭದಲ್ಲಿ ಪರಿಹಾರ ಕಾರ್ಯ, ಜೀವಗಳನ್ನು ಉಳಿಸಬಲ್ಲ ರಕ್ತದಾನ ಶಿಬಿರ, ಪರಿಸರ ಸ್ನೇಹಿ ಕಾರ್ಯಕ್ರಮಗಳು, ವಿಪತ್ತು ನಿರ್ವಹಣಾ ಶಿಬಿರಗಳು, ಚಾರಣಗಳು ಮೊದಲಾದ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಯುವಕರಲ್ಲಿ
ಸೇವೆಯ ಮಹತ್ವವನ್ನು ಸಾರಿ ಹೇಳುವ ಕೆಲಸವನ್ನು ಮಾಡುತ್ತಿದೆ. ನೂರಕ್ಕೆ ನೂರು ವಿದ್ಯಾರ್ಥಿಗಳ ಮನ ಪರಿವರ್ತನೆ ಆಗದಿದ್ದರೂ ಒಬ್ಬ ವಿದ್ಯಾರ್ಥಿ ಬದಲಾದರೂ ಇಂತಹ ಯುವ ರೆಡ್ ಕ್ರಾಸ್ ಘಟಕಗಳು ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸಾರ್ಥಕವಾಗುತ್ತದೆ.

“ಜೀವದ ಬೆಲೆ ಎಳೆಯ ಮನಸ್ಸಿಗೂ ತಿಳಿಯಬೇಕು”
ರೆಡ್ ಕ್ರಾಸ್ ಜನರಿಂದ ಜನರ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆ. ಜೀವ ಉಳಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಜೀವದ ಬೆಲೆ ಏನೆಂಬುದು ಎಳೆಯ ವಯಸ್ಸಿನಲ್ಲಿ ತಿಳಿಯಬೇಕು, ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಎಳೆ ಮನಸ್ಸಿಗೆ ಬರಬೇಕು ಎನ್ನುವ ದೃಷ್ಟಿಕೋನದಿಂದ 2020ರಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲೂ, 2022 ರಿಂದ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲೂ ಜೂನಿಯರ್ ರೆಡ್ ಕ್ರಾಸ್ ಘಟಕ (ಕಿರಿಯ ರೆಡ್ ಕ್ರಾಸ್ ಘಟಕ)ವನ್ನು ಆರಂಭಿಸಿ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಸೃಜಿಸುವ ಕೆಲಸವನ್ನು ಮಾಡುತ್ತಿದೆ. ಎಳೆಯ ಮನಸ್ಸಿಗೆ ಇಂತಹ ಮಾನವೀಯ ಮೌಲ್ಯಗಳ ಸಂಸ್ಥೆಯಲ್ಲಿ ಒಳ್ಳೆಯ ವಿಚಾರಗಳು ಸಿಕ್ಕಾಗ ಅದು ಅವರ ಜೀವನದುದ್ದಕ್ಕೂ ದಾರಿದೀಪವಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಚನಾತ್ಮಕ ತರಬೇತಿ ಮತ್ತು ಪರಿಣಾಮಕಾರಿ ನಾಯಕತ್ವ ಹಾಗೂ ಸರಿಯಾದ ಮಾರ್ಗದರ್ಶನ ಸಿಕ್ಕಾಗ ವಿದ್ಯಾರ್ಥಿಗಳು ಇಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಾಗ ಮನಸ್ಸು ನಿರ್ಲಿಪ್ತವಾಗುವುದರೊಂದಿಗೆ ವಿದ್ಯಾಭ್ಯಾಸದಲ್ಲಿ ಸರಿಯಾಗಿ ತೊಡಗಿಸಿಕೊಳ್ಳಲು ನೆರವಾಗುತ್ತದೆ.

ಯುವ ರೆಡ್ ಕ್ರಾಸ್/ ಜೂನಿಯರ್ ರೆಡ್ ಕ್ರಾಸ್ ಯಾಕೆ ಬೇಕು?
ಮಕ್ಕಳ ಮನಸ್ಸು ಹಸಿ ಮಣ್ಣಿನಂತೆ. ಹಸಿ ಮಣ್ಣಿನ ಗೋಡೆಗೆ ಕಲ್ಲು ಹೊಡೆದರೆ ಆ ಕಲ್ಲು ಮಣ್ಣಿನಲ್ಲಿ ಅಂಟಿಕೊಳ್ಳುತ್ತದೆ. ಅದೇ ರೀತಿ ಮಕ್ಕಳ ಮನಸ್ಸು. ಎಳೆಯ ವಯಸ್ಸಿನಲ್ಲಿ ಆ ಮನಸ್ಸುಗಳಿಗೆ ಒಳ್ಳೆಯ ವಿಚಾರಗಳು ಸಿಕ್ಕಾಗ ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡಲು ಸಾಧ್ಯ. ಇಂದಿನ ಮಕ್ಕಳು ಕೇಳಿ ಕಲಿಯುವುದಕ್ಕಿಂತ ಹೆಚ್ಚು ನೋಡಿ ಕಲಿಯುತ್ತಿದ್ದಾರೆ. ಹಾಗಾಗಿ ಮಕ್ಕಳಿಗೆ ಮನೆ, ಶಾಲಾ – ಕಾಲೇಜುಗಳಲ್ಲಿ ಒಳ್ಳೆಯ ವಿಚಾರಗಳನ್ನು ಕೊಟ್ಟಾಗ ಅದನ್ನು ನೋಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಮುಖ್ಯವಾಗಿ ಇಂತಹ ಘಟಕಗಳಲ್ಲಿ ತೊಡಗಿಸಿಕೊಳ್ಳುವುದರಿಂದ
ಮಕ್ಕಳು ತಮ್ಮ ಜೀವನದ ಕೆಲವು ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಾಧ್ಯ—-

  1. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವುದು.
  2. ಆರೋಗ್ಯಕರ ಜೀವನಶೈಲಿಯ ಅಭ್ಯಾಸವನ್ನು ಹುಟ್ಟುಹಾಕುವುದು.
  3. ಸೇವಾ ವಿತರಣೆಯ ಮೂಲಕ ಯುವ ನಾಯಕತ್ವ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು.
  4. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ನೇಹವನ್ನು ಪ್ರತಿಪಾದಿಸುವುದು,
  5. ಜನತೆಯಿಂದ ಜನತೆಗೆ ನೆರವು ಎನ್ನುವ ಅರಿವು ಮೂಡಿಸುವುದು.
  6. ಜನರ ಜೀವದ ಬೆಲೆ ತಿಳಿಯುವುದರೊಂದಿಗೆ ಜನರ ಕಷ್ಟಗಳಿಗೆ ಸ್ಪಂದಿಸುವುದು
  7. ಕೆಟ್ಟ ಚಟಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಅದರಿಂದ ದೂರ ಇರಲು ಅನುವು ಮಾಡಿಕೊಡುವುದು.
  8. ಗುರುಹಿರಿಯರಿಗೆ ಗೌರವ ಕೊಡುವುದನ್ನು ತಿಳಿ ಹೇಳುವ ಅದ್ಭುತ ಸಂಸ್ಥೆ. ಒಟ್ಟಿನಲ್ಲಿ ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧ್ಯೇಯ ವಾಕ್ಯದಿಂದ ಜಗತ್ತಿನಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆ ಶಾಲಾ- ಕಾಲೇಜುಗಳಲ್ಲಿ ವಿವಿಧ ಘಟಕಗಳನ್ನು ಹುಟ್ಟುಹಾಕಿ ಯುವ ಮನಸ್ಸುಗಳು ಮಾನವೀಯ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಹೆನ್ರಿ ಡ್ಯೂನಾಂಟ್
    ಅವರ ಕನಸನ್ನು ನನಸು ಮಾಡಿಸುವತ್ತ ಹೆಜ್ಜೆ ಇಡುತ್ತಿದೆ. ಜೊತೆಗೆ ಇಂತಹ ಸಂಸ್ಥೆಗಳಲ್ಲಿ ತೊಡಗಿಕೊಳ್ಳುವಾಗ ದೇಶ, ಜಾತಿ, ಮತ, ಜನಾಂಗ, ಕುಲ, ಗೋತ್ರ, ವರ್ಣ, ಭೇದ, ವರ್ಗಗಳನ್ನು ಮೆಟ್ಟಿನಿಂತು ವಿಶ್ವ ಭ್ರಾತೃತ್ವದ ಮತ್ತು ವಿಶ್ವಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರುವ ಪ್ರಯತ್ನ ಮಾಡಿದಾಗ ಮಾತ್ರ ರೆಡ್ ಕ್ರಾಸ್ ದಿನಾಚರಣೆಗೆ ಮಹತ್ವ ಬರುತ್ತದೆ. ಮತ್ತು ಅದುವೇ ಆ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಕೊಡುಗೆ ಮತ್ತು ಗೌರವ ಎಂದರು ಅತಿಶಯೋಕ್ತಿಯಲ್ಲ. ಹಾಗೂ ದಿನಾಚರಣೆಯೂ ಅರ್ಥವನ್ನು ಪಡೆದುಕೊಳ್ಳುತ್ತದೆ.

ಲೇಖಕರು: ಡಾ. ಅನುರಾಧಾ ಕುರುಂಜಿ
ವ್ಯಕ್ತಿತ್ವ ವಿಕಸನ ತರಬೇತುದಾರರು