ಈಡೇರದ ಸೇತುವೆ ಭರವಸೆ, ಮತದಾನ ಬಹಿಷ್ಕರಿಸಿದ ಮತದಾರ

0

ಶ್ರಮಸೇವೆಯಲ್ಲಿ ತಾತ್ಕಾಲಿಕ ಸೇತುವೆ ರಚನೆಗೆ ಮುಂದಾದ ಕುಜುಂಬಾರು, ಇಜಿನಡ್ಕ ನಾಗರಿಕರು

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಕುಜುಂಬಾರು ಎಂಬಲ್ಲಿ ಸೇತುವೆ ನಿರ್ಮಿಸುವಂತೆ ಬೇಡಿಕೆ  ಈಡೇರಿಸದ ಹಿನ್ನಲೆಯಲ್ಲಿ ಆ ಭಾಗದ ಫಲಾನುಭವಿಗಳಾದ  ಇಜಿನಡ್ಕ ಮತ್ತು ಕುಜುಂಬಾರು ಭಾಗದ ನಾಗರಿಕರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೇ, ಹೊಳೆಗೆ ಮರದ ಸಂಕ ನಿರ್ಮಿಸಲು  ಶ್ರಮಸೇವೆ ನಡೆಸಿದೆ  ಘಟನೆ ವರದಿಯಾಗಿದೆ.

ಕುಜುಂಬಾರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಹಲವಾರು ವರ್ಷಗಳಿಂದ ಬೇಡಿಕೆ, ಮನವಿ ಸಲ್ಲಿಸಿದ್ದರೂ ಸಂಬಂಧಿಸಿದವರು ನಿರ್ಲಕ್ಷ ವಹಿಸಿದ್ದರು ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ಇಲ್ಲಿನ ಜನ ಸೇತುವೆ ನಿರ್ಮಿಸದ ಹಿನ್ನಲೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರದೊಂದಿಗೆ ಬ್ಯಾನರ್ ಅಳವಡಿಸಿದ್ದರು. ಈ ವೇಳೆ ಸ್ಥಳೀಯ ಅಧಿಕಾರಿಗಳು ಆಗಮಿಸಿ ಜನರ ಮನವೊಲಿಸಿದ್ದರು. ಸೇತುವೆ ನಿರ್ಮಿಸದಿದ್ದಲ್ಲಿ ಮತದಾನ ಬಹಿಷ್ಕಾರ ಎಂಬ ನಿರ್ಧಾರಕ್ಕೂ ಅಂದೇ ಬಂದಿದ್ದರು.

ಆದರೂ ಸೇತುವೆ ನಿರ್ಮಿಸುವ ಬಗ್ಗೆ ಯಾವುದೇ ಭರವಸೆ ನೀಡದ ಹಿನ್ನಲೆಯಲ್ಲಿ ಕುಜುಂಬಾರು ಮತ್ತು ಇಜಿನಡ್ಕ ಪರಿಸರದ ಸುಮಾರು ೩೦ ಮನೆಗಳ ೮೦ ಕ್ಕೂ ಅಧಿಕ ಜನರು ಮತ ಚಲಾಯಿಸಿಲ್ಲ. ಬದಲಿಗೆ, ಹೊಳೆಗೆ ಸಂಪರ್ಕ ಕಲ್ಪಿಸುವ ಪಾಲ ನಿರ್ಮಾಣದಲ್ಲಿ ಶ್ರಮಸೇವೆ ನಡೆಸಿ ಸಂಬಂಧಿಸಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹಲವು ವರ್ಷಗಳಿಂದ ಬೇಡಿಕೆ ಇರಿಸಿದ್ದೇವೆ. ಆದರೂ ಸ್ಪಂಧಿಸುತ್ತಿಲ್ಲ, ಭರವಸೆ ನಿಡಿ ಕೈತೊಳೆದುಕೊಳ್ಳುತ್ತಾರೆ ಎಂದು ಆರೋಪಿಸಲಾಗಿದೆ. ಇಂದು ವಿಧಾನ ಸಭಾ ಚುನಾವಣೆ ಬಹಿಷ್ಕರಿಸಿದ್ದೇವೆ. ಮುಂದೆಯೂ ಸೇತುವೆ ಆಗದಿದ್ದರೆ, ಎಂಪಿ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.