ಎರಡೇ ತಿಂಗಳಲ್ಲಿ ನಾವೂರು ಕಾಂಕ್ರೀಟ್ ರಸ್ತೆ ಬಿರುಕು

0

ಸ್ಥಳೀಯ ಸದಸ್ಯ ಶರೀಫ್‌ ಕಂಠಿಯವರಿಂದ ನ. ಪಂ.ಗೆ ದೂರು

ಸ್ಥಳಕ್ಕೆ ಬಂದ ಅಧಿಕಾರಿಗಳಿಂದ ಪರಿಶೀಲನೆ

ಕಳೆದ ಎರಡು ತಿಂಗಳ ಹಿಂದೆ ಕಾಂಕ್ರೀಟೀಕರಣಗೊಂಡ ಸುಳ್ಯ ನಗರದ ನಾವೂರು ರಸ್ತೆ ಬಿರುಕು ಬಿಟ್ಟ ಘಟನೆ ವರದಿಯಾಗಿದೆ.

ಈ ಕುರಿತು ಸ್ಥಳೀಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ನಗರ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್‌ಗಳಿಗೆ ದೂರು ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಇಂಜಿನಿಯರ್‌ ಅರುಣ್ ಕುಮಾರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಸರಿಪಡಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.


ಈ ರಸ್ತೆಯನ್ನು ನಗರೋತ್ಥಾನ ಯೋಜನೆಯಡಿಯಲ್ಲಿ ಅಂದಾಜು 180 ಮೀಟರ್ ಕಾಂಕ್ರೀಟೀಕರಣ ನಡೆಸಿ ಅಭಿವೃದ್ಧಿಪಡಿಸಲಾಗಿರುತ್ತದೆ. ರಸ್ತೆ ಪೂರ್ಣಗೊಂಡು ಕೇವಲ 2 ತಿಂಗಳಲ್ಲಿಯೇ ರಸ್ತೆಯು ಅಲ್ಲಲ್ಲಿ ಹಾಳಾಗಿದ್ದು ಇದರಲ್ಲಿ ಕಾಮಗಾರಿಯ ಗುಣಮಟ್ಟದ ಕುರಿತು ಸಾರ್ವಜನಿಕರಲ್ಲಿ ಅನುಮಾನ ಉಂಟಾಗಿ, ಈ ಬಗ್ಗೆ ಕಾಮಗಾರಿಯು ಲೋಪಗೊಂಡಿದ್ದಲ್ಲಿ ಕೂಡಲೇ ಸರಿಪಡಿಸಬೇಕಾಗಿ ನಾವೂರು ವಾರ್ಡ್ ಸದಸ್ಯ ಶರೀಫ್‌‌ ಕಂಠಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಇಂಜಿನಿಯರ್‌ಗಳು ಘಟನಾಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಹಾಳಾದ‌ ರಸ್ತೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ರೀತಿಯ ಸಮಸ್ಯೆಗಳು ಉಂಟಾಗಲು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದಾರೆ.