ಇಂದು ವಿಶ್ವ ಪರಿಸರ ದಿನ

0

ಹಸಿರು ಸಂರಕ್ಷಣೆ ಎಲ್ಲರ ಹೊಣೆ

✍️ ಬೃಂದಾ ಪೂಜಾರಿ ಮುಕ್ಕೂರು

ಬನಸಿರಿ ಪ್ರಕೃತಿಯ ವರದಾನ ಸಂಪನ್ಮೂಲದ ಉಗ್ರಾಣ ಬನಸಿರಿ ಪ್ರಕೃತಿಯ ವರದಾನ ಸಂಪನ್ಮೂಲದ ಉಗ್ರಾಣ ವನ್ಯಜೀವಿಗಳಿಗೆ ಆಶ್ರಯಧಾಮ ಗಿಡಮೂಲಿಕೆಗಳ ರಸ ತಾಣ… ರಸ ತಾಣ ..ರಸ ತಾಣ….

ಈ ಗೀತೆ ಪ್ರತಿ ಬಾರಿ ಕೇಳಿದಾಗ, ಇಷ್ಟೊಂದು ಸುಂದರ ಪ್ರಕೃತಿಯನ್ನು ಹೊಂದಿದ ನಾವೇ ಧನ್ಯರು ಎನಿಸುತ್ತದೆ.

ಇಂದು ಜೂನ್ 5 . ವಿಶ್ವ ಪರಿಸರ ದಿನ, ಪ್ರಕೃತಿ ಮಾತೆಯ ದಿನ.

ಮೊದಲ ಬಾರಿಗೆ ವಿಶ್ವ ಪರಿಸರ ದಿನವನ್ನು 1972 ರಲ್ಲಿ ವಿಶ್ವಸಂಸ್ಥೆಯು ಮಾನವ ಪರಿಸರದ ಸ್ಟಾಕ್‌ಹೋಮ್ ಸಮ್ಮೇಳನದಲ್ಲಿ ನಡೆಸಿತು. ಇದು ಸಮುದ್ರ ಮಾಲಿನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಅಭಿವೃದ್ಧಿ ಮತ್ತು ವನ್ಯಜೀವಿ ಅಪರಾಧಗಳಂತಹ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿಮೂಡಿಸಲು ವೇದಿಕೆಯಾಗಿದೆ.

ವಿಶ್ವ ಪರಿಸರ ದಿನವು ಸಾರ್ವಜನಿಕ ಪ್ರಭಾವಕ್ಕಾಗಿ ಜಾಗತಿಕ ವೇದಿಕೆಯಾಗಿದೆ, ವಾರ್ಷಿಕವಾಗಿ 143 ದೇಶಗಳಿಂದ ಭಾಗವಹಿಸುತ್ತದೆ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಸಿರುಮನೆ ಪರಿಣಾಮದಿಂದಾಗಿ, ವಾತಾವರಣದ ತಾಪಮಾನದಲ್ಲಿ ಏರಿಕೆಯಾಗುತ್ತಿರುವುದು ಜಾಗತಿಕ ಕಳವಳಕ್ಕೆ ಕಾರಣವಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಜಗತ್ತಿನ ಅರ್ಧಕ್ಕಿಂತ ಹೆಚ್ಚು ಮಳೆಕಾಡುಗಳು ಈಗಾಗಲೇ ನಾಶವಾಗಿವೆ.

ಮರ-ಗಿಡ, ಪ್ರಾಣಿ-ಪಕ್ಷಿಗಳು ಅವನತಿಯತ್ತಾ ಸಾಗಿದ್ದು, ಅಂದಾಜು ಒಂದು ಮಿಲಿಯನ್ ಜಾತಿಗಳು ಅಳಿವಿನಂಚಿನಲ್ಲಿವೆ. ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಭೂಮಿಯ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾನೆ.

ಆಧುನಿಕತೆಯ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ಹೆಚ್ಚಾಗುತ್ತಿರುವ ವಾಣಿಜ್ಯ ಉದ್ಯಮಗಳು, ವಾಹನಗಳ ಸಂಖ್ಯೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆ ಮುಂತಾದ ಚಟುವಟಿಕೆಗಳಿಂದ ಪರಿಸರ ಮಾಲಿನ್ಯವಾಗಿ ಗಾಳಿ, ಭೂಮಿ ಮತ್ತು ನೀರು ವಿಷಪೂರಿತವಾಗುತ್ತಿರುವುದು ವಿಪರ್ಯಾಸವೇ ಸರಿ.

1972ರ ವಿಶ್ವ ಸಂಸ್ಥೆ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕೆಂದು ನಿರ್ಧರಿಸಲಾಗಿದ್ದು, 1974 ರಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. “ವೃಕ್ಷೋ ರಕ್ಷತಿ ರಕ್ಷಿತಃ” ಎಂಬಂತೆ ಪರಿಸರ ದಿನಾಚರಣೆಯ ಅಂಗವಾಗಿ ಪ್ರಪಂಚದಲ್ಲಿ ಹೆಚ್ಚಿನ ಜನರು ಗಿಡಗಳನ್ನು ನೆಡಲು ಪ್ರಾರಂಭಿಸಿರುತ್ತಾರೆ.

ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಉಳಿಯುವುದು ಬಹಳ ಮುಖ್ಯ. ನಾವು ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಳವರೆಗೂ ಹೀಗೆಯೇ ಉಳಿಯಬೇಕಿದೆ. ಬೇಸರವೆಂದರೆ ನಾವು ಮಾಡುತ್ತಿರುವ ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣ ಸೇರಿದಂತೆ ಹಲವಾರು ಮಾನವ ಚಟುವಟಿಕೆಗಳಿಂದ ಪರಿಸರವು ಇಂದು ಹಾನಿಗೊಳಗಾಗುತ್ತಿದೆ. ಪರಿಸರದೊಂದಿಗೆ ಮಾನವನ ಹಸ್ತಕ್ಷೇಪದಿಂದಾಗಿ ಈ ಹಾನಿಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವನ್ನು ಆಚರಿಸುವ ಯೋಚನೆಯನ್ನು ಮಾಡಿತು.

ಒಂದು ಮರ ಕಡಿದರೆ, 10 ಗಿಡ ನಡಬೇಕು. ಎಂಬ ಮಾತನ್ನು ಎಲ್ಲರೂ ಪಾಲಿಸಿದರೆ ಮುಂದೊಂದು ದಿನ ಪರಿಸರ ನಾಶ, ಎಂಬ ವಿಚಾರವೇ ಬರದಿರಬಹುದು. ಆದರೆ, ಒಂದು ದಿನ ಮಾತ್ರ ಪರಿಸರ ದಿನ ಆಚರಣೆ ಮಾಡಿದರೆ ಏನೂ ಪ್ರಯೋಜನ???… ಪ್ರತಿ ದಿನ ಪರಿಸರ ಕಾಳಜಿ ಮಾಡಿ, ಪ್ರತಿ ದಿನ ಪರಿಸರ ದಿನವಾಗಿ ಆಚರಿಸಿದರೆ, ಪರಿಸರ ಸಮೃದ್ಧಿಯಾಗಿ ಬೆಳೆದು ಪ್ರಕೃತಿ ವಿಕೋಪ ಎಂಬ ವಿಚಾರವನ್ನೇ ಜಗತ್ತೇ ಮರೆಯಬಹುದು.

ಪರಿಸರ ಮತ್ತು ಮಾನವನ ಸಂರಕ್ಷಣೆಗಾಗಿ ವಿಶ್ವ ಪರಿಸರ ದಿನವನ್ನು ಆಚರಿಸುವುದು, ನಮ್ಮ ಉದ್ದೇಶವಾಗಿದೆ ನಾವು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕು ಮತ್ತು ಅದರ ಬಗ್ಗೆ ಎಚ್ಚರಿಕೆಯಿಂದ ಬಳಸಬೇಕು. ನಾವು ಒಟ್ಟಿಗೆ ನಿಂತರೆ ಸುಂದರ ಮತ್ತು ಆರೋಗ್ಯಕರ ವಾತಾವರಣವನ್ನು ನಿರ್ಮಿಸಬಹುದು. ಸೌರಶಕ್ತಿಯಂತಹ ಪರಿಸರ ಸ್ನೇಹಿ ವಸ್ತುಗಳನ್ನು ಹೆಚ್ಚು ಬಳಸಬೇಕು. ಪರಿಸರವನ್ನು ರಕ್ಷಿಸಲು ನಾವು ನಮ್ಮ ದೇಶದ ಪರಿಸರ ಸ್ನೇಹಿ ಅಭಿವೃದ್ಧಿಯನ್ನು ಉತ್ತೇಜಿಸಬೇಕು.

ವಿಶ್ವ ಪರಿಸರ ದಿನವನ್ನು ಆಚರಿಸುವುದರಿಂದ ಹಲವಾರು ಮುಖ್ಯ ಉದ್ದೇಶಗಳಿವೆ. ಪರಿಸರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವುದು. ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಪರಿಸರ ಸ್ನೇಹಿ ಅಭಿವೃದ್ಧಿ ಪಡಿಸಲು ಅಭಿಯಾನ ಆರಂಭಿಸುವುದು. ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವುದು. ಪರಿಸರವನ್ನು ನಾಶ ಮಾಡದಂತ ಜಾಗೃತಿ ಮೂಡಿಸುವುದು. ಪರಿಸರ ಪ್ರತಿಯೊಂದು ಜೀವಿಗೆ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು ಈ ದಿನದ ಆಚರಣೆಯ ಹಿಂದಿರುವ ಮುಖ್ಯ ಉದ್ದೇಶವಾಗಿದೆ.

ಅದೇನೆ ಇರಲಿ; ಮಾನವನು ಇನ್ನಾದ್ರೂ ಎಚ್ಚೆತ್ತು ಹಸಿರನ್ನು ಉಳಿಸಿ, ಬೆಳೆಸದಿದದ್ದರೆ ಮನುಷ್ಯನ ಜೀವನ ಇನ್ನಷ್ಟು ಏರುಪೇರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.