ಹವಾಮಾನ ಆಧಾರಿತ ಬೆಳೆ ವಿಮೆ – ಆ.7 ರ ತನಕ‌ ಅವಧಿ ವಿಸ್ತರಣೆ

0

ಕೃಷಿಕರಿಗೆ ತೋಟಗಾರಿಕಾ ಇಲಾಖೆ ಮಾಹಿತಿ

ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಕಾರ್ಯಕ್ರಮವನ್ನು 2023ರ ಮುಂಗಾರು ಹಂಗಾಮಿಗೆ ಅನ್ವಯಿಸಿ ವಿಮೆ ಪಾವತಿಸಲು ಆ.7 ರ ವರೆಗೆ ಅವಕಾಶ ‌ನೀಡಲಾಗಿದೆ ಎಂದು ಸುಳ್ಯ ತೋಟಗಾರಿಕಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಯೋಜನೆಯು ಕೇಂದ್ರ ಸರಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ಅಧಿಸೂಚಿತ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಉಂಟಾದಲ್ಲಿ ವಿಮಾ ನಷ್ಟ ಪರಿಹಾರವನ್ನು ಪಡೆಯಲು ಅವಕಾಶವನ್ನು ಕಲ್ಪಿಸುತ್ತದೆ. ಈ ಯೋಜನೆಯನ್ನು ಮುಂಗಾರು ಹಂಗಾಮಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಗರ ಸ್ಥಳೀಯಾಡಳಿತ ಸಂಸ್ಥೆ ಹಾಗೂ ಎಲ್ಲಾ ೨೩೧ ಗ್ರಾಮ ಪಂಚಾಯತ್‌ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಅಧಿಸೂಚಿಸಿ ಆದೇಶ ಹೊರಡಿಸಲಾಗಿದ್ದು, ೨೦೨೩ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾ ಕಂತು ಪಾವತಿಸಲು ಜು.31 ಅಂತಿಮ ದಿನವಾಗಿತ್ತು. ಇದೀಗ ಆ.7 ರ ತನಕ‌ಅವಧಿ ವಿಸ್ತರಿಸಲಾಗಿದ್ದು ಕೃಷಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ.