ಅರಂತೋಡು : ಅಪಘಾತದಲ್ಲಿ ಪಾದಾಚಾರಿ ಮೃತ್ಯು : ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

0

ಅರಂತೋಡು ಆ 7 ರಂದು ಸಂಜೆ ಓಮಿನಿ ಕಾರು ಡಿಕ್ಕಿಯಾಗಿ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸುಳ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಘಟನೆಗೆ ಸಂಬಂಧಿಸಿ ಮೃತ ವ್ಯಕ್ತಿ ಉಳುವಾರು ನಿವಾಸಿ ತೀರ್ಥರಾಮ (58 ವರ್ಷ) ರವರ ಪುತ್ರ ಲೋಚನ ಯು ಟಿ ಎಂಬುವರು ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ಮೇಲೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿರುವ ಸುಳ್ಯ ಪೊಲೀಸರು ಕಾರು ಚಾಲಕ ದೇವರಾಜ್ ಎಂಬುವವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಲೋಚನ ರವರು ನೀಡಿದ ದೂರಿನಲ್ಲಿ ನಾನು ಆಗಸ್ಟ್ 7 ರಂದು ಸಂಜೆ 7 ಗಂಟೆಗೆ ನನ್ನ ದ್ವಿಚಕ್ರ ವಾಹನದಲ್ಲಿ ಅರಂತೋಡು ಪೇಟೆಗೆ ಬರುತ್ತಿದ್ದ ಸಂದರ್ಭ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಎದುರುಗಡೆ ಓರ್ವ ವ್ಯಕ್ತಿಗೆ ಕಾರು ಡಿಕ್ಕಿಯಾಗಿದ್ದು ಜನರು ಜಮಾಯಿಸಿರುವುದು ಕಂಡುಬಂದಿತ್ತು.ಈ ವೇಳೆ ನಾನು ಕೂಡ ಅಲ್ಲಿಗೆ ಹೋಗಿ ನೋಡಿದಾಗ ಅಪಘಾತವಾಗಿ ರಸ್ತೆಯಲ್ಲಿ ಬಿದ್ದವರು ನನ್ನ ತಂದೆಯೇ ಆಗಿದ್ದರು.ಕಾರು ಡಿಕ್ಕಿಯಾದ ರಭಸಕ್ಕೆ ಅವರ ಕೈ ಮತ್ತು ಕಾಲುಗಳಿಗೆ,ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ರಕ್ತಸಿಕ್ತವಾಗಿ ಬಿದ್ದಿದ್ದರು.

ಈ ಸಂದರ್ಭ ನಾನು ನನ್ನ ಸ್ನೇಹಿತರ ಸಹಾಯ ಪಡೆದು ಅವರನ್ನು ಆಂಬುಲೆನ್ಸ್ ವಾಹನದ ಮೂಲಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತಂದಿದ್ದೆವು.ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಅವರನ್ನು ಕೊಂಡೊಯ್ಯಲಾಗಿದ್ದು ಅಲ್ಲಿ ವೈದ್ಯರು ನೋಡಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ನಮ್ಮ ತಂದೆಯವರು ಬ್ಯಾಂಕ್ ಬಳಿಯಿಂದ ರಸ್ತೆ ದಾಟಲು ನಿಂತಿದ್ದ ಸಂದರ್ಭ ಕೆ ಎ 13 ಎಂ 1659 ನಂಬರಿನ ಓಮಿನಿ ಕಾರು ಚಾಲಕ ದೇವರಾಜ್ (ದೇವಪ್ಪ) ಎಂಬುವವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಕಾರು ಚಲಾಯಿಸಿಕೊಂಡು ಬಂದು ಡಿಕ್ಕಿ ಸಂಭವಿಸಿದ್ದು ಆದ್ದರಿಂದ ದೇವಪ್ಪ ರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಿಂದ ಕಾರು ಚಾಲಕ ದೇವಪ್ಪರವರಿಗೂ ಕೂಡ ಕೈ ಮತ್ತು ಕಣ್ಣು ಮೂಗಿಗೆ ಗಾಯವಾಗಿದ್ದು ಅವರು ಕೆ ವಿ ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ತೀರ್ಥರಾಮರು ಪತ್ನಿ ಹಾಗೂ ಓರ್ವ ಪುತ್ರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.