ಬೆಳ್ಳಾರೆಯಲ್ಲಿ ಬ್ಯಾಂಕ್ ಉದ್ಯೋಗಿ ಎಂದು ಹೇಳಿ ವಂಚನೆ – ಪ್ರಕರಣ ದಾಖಲು

0

ಅಪರಿಚಿತ ವ್ಯಕ್ತಿಯೋರ್ವರು ಬೆಳ್ಳಾರೆ ಪೇಟೆಯಲ್ಲಿ ತಾನು ಬ್ಯಾಂಕ್ ಉದ್ಯೋಗಿ ಎಂದು ಕೊಡಿಯಾಲದ ವ್ಯಕ್ತಿಯೋರ್ವರಿಗೆ ವಂಚನೆ ಮಾಡಿದ ಘಟನೆ ಇತ್ತೀಚೆಗೆ ನಡೆದಿದೆ.


ಕೊಡಿಯಾಲದ ರಾಧಾಕೃಷ್ಣ ಗೌಡ ಎಂಬವರು ಬೆಳ್ಳಾರೆ ಕೆಳಗಿನ ಪೇಟೆಯಲ್ಲಿರುವ ಬಸ್ಸು ತಂಗುದಾಣದಲ್ಲಿ ಇರುವಾಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೋರ್ವರು ಬ್ಯಾಂಕ್ ಉದ್ಯೋಗಿ ಎಂಬುದಾಗಿ ಪರಿಚಯ ಮಾಡಿಕೊಂಡರೆನ್ನಲಾಗಿದೆ.


ಕೋವಿಡ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಯಿಂದ ಕೆಲವು ಆಯ್ದ ವ್ಯಕ್ತಿಗಳಿಗೆ 1ಲಕ್ಷದ 7 ಸಾವಿರ ರೂಪಾಯಿ ಬ್ಯಾಂಕಿಗೆ ಬಂದಿದೆ.
ನೀವು ಈಗ ನನಗೆ 7,000 ಕೊಡಬೇಕು ಎಂದು ಕೇಳಿದನೆನ್ನಲಾಗಿದೆ.ಆಗ ಅವರಲ್ಲಿ ಹಣವಿಲ್ಲದಿರುವಾಗ ಕೈಯಲ್ಲಿದ್ದ ಐದೂವರೆ ಗ್ರಾಂ ಚಿನ್ನದ ಉಂಗುರವನ್ನು ತೆಗೆದು ಕೊಟ್ಟಿದ್ದು ಉಂಗುರ ವನ್ನು ಪಡೆದ ಅಪರಿಚಿತ ವಂಚಿಸಿ ಪರಾರಿಯಾಗಿರುತ್ತಾನೆ ಎಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಇದೇ ರೀತಿ ಕುದ್ಮಾರು ಗ್ರಾಮದ ನಿವಾಸಿಯಾಗಿರುವ ಲೀಲಾವತಿ ಎಂಬವರಿಗೂ ಪ್ರಧಾನ ಮಂತ್ರಿ ಗಳ ಯೋಜನೆಯಿಂದ ಹಣ ಬಂದಿರುವುದಾಗಿ ಹೇಳಿ ಅವರಿಂದ ರೂ.31,000 ಹಣ ಪಡೆದು ವಂಚಿಸಿರುವುದಾಗಿ ಬೆಳ್ಳಾರೆ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಹಲವು ಕಡೆಗಳಲ್ಲಿ ಇದೇ ರೀತಿಯಾಗಿ ವಂಚನೆ ಮಾಡಿದ ಆರೋಪಿ ಉಪ್ಪಿನಂಗಡಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.