ನನ್ನ ವೃತ್ತಿ… ನನ್ನ ಹೆಮ್ಮೆ…

0

ನನಗೂ ಪಾಠ ಕಲಿಸಿದ ವೃತ್ತಿ…

ರಮ್ಯಾ ಅಡ್ಕಾರ್

ಚಿತ್ತದಿಂದ ಮಾಡುವ ವೃತ್ತಿ ಶಿಕ್ಷಕ ವೃತ್ತಿ.ಶಿಕ್ಷಕ ವೃತ್ತಿ ಎಂದರೆ ಅದು ಕೇವಲ ವೃತ್ತಿಯಾಗದೆ ನನ್ನ ಬದುಕಿಗೆ ಪೂರಕವಾದ ಪಾಠಗಳನ್ನು ಕಲಿಸಿದ ವೃತ್ತಿಯಾಗಿದೆ.ವಿದ್ಯಾಥಿ೯ಗಳಿಗೆ ಬೋಧಿಸುವುದರ ಜೊತೆ ಜೊತೆಗೆ ನನ್ನನ್ನು ನಿರಂತರ ಕಲಿಕೆಯಲ್ಲಿ ತೊಡಗಿಸುವಂತೆ ಮಾಡಿದ ವೃತ್ತಿ.ನಾನು ನನ್ನ ೧೨ ವರುಷಗಳ ಶಿಕ್ಷಕ ವೃತ್ತಿಯನ್ನು ೫ ಶಾಲೆಗಳಲ್ಲಿ ಮಾಡಿದ ಸಾಥ೯ಕ ಭಾವನೆ ನನಗಿದೆ.

ನಾನು ಹೊರಜಿಲ್ಲೆಯಲ್ಲಿ ಶಿಕ್ಷಕಿಯಾಗಿ ಒಂದು ಶಾಲೆಯಲ್ಲಿ ವೃತ್ತಿಯನ್ನು ಮಾಡುತ್ತಿದ್ದೆ.ಒಂದು ದಿನ ಗೃಹಪ್ರವೇಶಕ್ಕೆ ಆಮಂತ್ರಿಸಲು ಆ ಊರಿನ ಪ್ರತಿಷ್ಠಿತ ವ್ಯಕ್ತಿಯ ಮನೆಗೆ ನನ್ನ ಚಿಕ್ಕಮ್ಮನ ಜೊತೆಗೆ ನಾನು ಸಹ ಹೋಗಿದ್ದೆನು. ಚಿಕ್ಕಮ್ಮ ಆ ವ್ಯಕ್ತಿಯ ಪಾದಸ್ಪರ್ಶ ಮಾಡಿ ಗೃಹಪ್ರವೇಶಕ್ಕೆ ಆಮಂತ್ರಿಸಲು ,ನಾನು ಸಹ ಅವರ ಪಾದಸ್ಪರ್ಶ ಮಾಡಲು ಅವರ ಬಳಿಗೆ ಬಂದಾಗ ತಕ್ಷಣ ನನ್ನನ್ನು ತಡೆದರು..ನೀವು ಶಿಕ್ಷಕಿ ನೀವು ನನ್ನ ಪಾದವನ್ನು ಸ್ಪಶಿ೯ಸಬಾರದು ಎಂದು.ಆ ಕ್ಷಣ ನನಗೆ ತಿಳಿಯಿತು ಇವರು ಕೇವಲ ದೊಡ್ಡವ್ಯಕ್ತಿಯಲ್ಲ ಶಿಕ್ಷಕರನ್ನು ಗೌರವಿಸುವ ಶ್ರೇಷ್ಠ ವ್ಯಕ್ತಿ ಎಂದು.ನನ್ನ ವೃತ್ತಿಯನ್ನು ಇನ್ನಷ್ಟು ಪ್ರೀತಿಸುವಂತೆ ಪ್ರೇರೆಪಿಸಿದರು ಆ ಶ್ರೇಷ್ಠ ವ್ಯಕ್ತಿ.

ನಾನು ತಿಳಿದಂತೆ ಶಿಕ್ಷಕ ವೃತ್ತಿ ಎಂದರೆ ಅಷ್ಟು ಸುಲಭವಲ್ಲ.ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಹಲವು ತೆರನಾದ ವಿದ್ಯಾಥಿ೯ಗಳು,ಪೋಷಕರನ್ನು ನಾವು ಎದುರಿಸಬೇಕಾಗುತ್ತದೆ.ಹೀಗೆ ನನಗೂ ಸಹ ನನ್ನ ಶಿಕ್ಷಕ ವೃತ್ತಿಯಲ್ಲಿ ಒಂದು ಅನಿರೀಕ್ಷಿತ ಸವಾಲು ಎದುರಾಗಿತ್ತು.ಅದು ಶಿಕ್ಷಕ ದಿನಾಚರಣೆಯ ಮುನ್ನಾ ದಿನ ಯಾಕಾದರೂ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆ ಅನ್ನುವಷ್ಟರ ಮಟ್ಟಿಗೆ ಆ ಸವಾಲು ಕಠಿಣವಾಗಿತ್ತು. ಆದರೆ ಮರುದಿನ ಶಿಕ್ಷಕ ದಿನಾಚರಣೆಯಂದು ಸವಾಲಿನ ಜೊತೆಗೆ ಒಂದು ಸಾಥ೯ಕ ಭಾವನೆ ಮೂಡಿತು.ಸವಾಲು ಸಾಲು ಸಾಲಾಗಿ ಬಂದರೂ ವಾಲದಿರು .ಸಕಾರಾತ್ಮಕವಾಗಿ ಸ್ವೀಕರಿಸಿ ಸ್ಥಿರವಾಗಿ ನಿಲ್ಲು ಎಂಬ ಪಾಠವನ್ನು ಅದು ತಿಳಿಸಿತು.ಶಿಕ್ಷಕ ವೃತ್ತಿ ಅಂದರೆ ಏನು?ನಾನು ಸಮಯಕ್ಕೆ ತಕ್ಕಂತೆ, ವಿವಿಧ ವತ೯ನೆಯ ವ್ಯಕ್ತಿಗಳೊಂದಿಗೆ ಹೇಗೆ ವತಿ೯ಸಬೇಕು ?ನನ್ನವರಾರು?ನನ್ನ ವಿರೋಧಿಗಳು ಯಾರು ? ಎಂಬುದನ್ನು ತಿಳಿಸಿಕೊಟ್ಟಿತು ಆ ದಿನ.

ಹೀಗೆ ಕೆಲವು ದಿನಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟನ್ನು ನೋಡಿದೆ.The best teacher you ever got ….Who is the best teacher in your life? ಎಂದು ಬರೆದಿತ್ತು. ಅದರ ಕೆಳಗಡೆ ಒಂದು ಕಮೆಂಟ್ ನ್ನು ನೋಡಿದೆ ರಮ್ಯಾ ಅಡ್ಕಾರ್ you are my best teacher ma’am ಎಂದು ಇತ್ತು.ಈ ಕಮೆಂಟ್ ಹಾಕಿದ ವಿದ್ಯಾಥಿ೯ ಮೊನ್ನೆ ತಾನೆ ಬೆಂಗಳೂರಲ್ಲಿ ಉದ್ಯೋಗಕ್ಕೆ ಆಯ್ಕೆ ಆದ ತಕ್ಷಣ ಕರೆ ಮಾಡಿ ಎಲ್ಲಾ ನಿಮ್ಮ ಆಶೀವಾ೯ದ ಮ್ಯಾಮ್ ನನಗೆ ಜಾಬ್ ಆಯ್ತು.ಅಂದಾಗ ಶಿಕ್ಷಕಿ ಆಗಿದ್ದಕ್ಕೆ ಸಾಥ೯ಕತೆಯ
ಭಾವನೆ ಮನದ ಮೂಲೆಯಲ್ಲಿ ಮೂಡಿದ್ದಂತೂ ನಿಜ.

ರಮ್ಯಾ ಅಡ್ಕಾರ್
ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯ