ಅಡ್ಕಾರು: ರಸ್ತೆಗೆ ಅಡ್ಡಬಂದ ದನ ಕಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ಬೈಕ್ ಸವಾರ ಜಖಂ

0

ಸಾಕುಪ್ರಾಣಿಗಳನ್ನು ರಸ್ತೆಯಲ್ಲಿ ಬಿಡದಂತೆ ಕ್ರಮವಹಿಸಲು ಸ್ಥಳೀಯರ ಸೂಚನೆ

ರಸ್ತೆಗೆ ದನವೊಂದು ಅಡ್ಡಬಂದ ಹಿನ್ನೆಲೆಯಲ್ಲಿ ಕಾರು ಚಾಲಕ ಬ್ರೇಕ್ ಹಾಕಿದ ವೇಳೆಗೆ ಕಾರಿನ ಹಿಂಬದಿಯಿದ್ದ ಬೈಕ್ ಸವಾರ ಕಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ಗಾಯಗೊಂಡ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಸೆ.4ರಂದು ರಾತ್ರಿ ಸಂಭವಿಸಿದೆ.

ಪುತ್ತೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ಕಾರು ಚಾಲಕ ಅಡ್ಕಾರಿನಲ್ಲಿ ಮುಖ್ಯರಸ್ತೆಗೆ ದನವೊಂದು ಸಡನ್ನಾಗಿ ಅಡ್ಡಲಾಗಿ ಬಂದ ಹಿನ್ನೆಲೆಯಲ್ಲಿ ಬ್ರೇಕ್ ಹಾಕಿದರೆನ್ನಲಾಗಿದೆ. ಈ ವೇಳೆ ಕಾರಿನ ಹಿಂಬದಿಯಲ್ಲಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರ ಯುವಕನ ಮೊಣಕಾಲಿಗೆ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಘಟನೆಯಲ್ಲಿ ಬೈಕ್ ಹಾಗೂ ಕಾರಿನ ಹಿಂಭಾಗ ಜಖಂಗೊಂಡಿದೆ.

ಸಾಕು ಪ್ರಾಣಿಗಳನ್ನು ರಾತ್ರಿ ಸಮಯದಲ್ಲಿ ಬೀದಿಯಲ್ಲಿ ಬಿಡುವುದರಿಂದ ಅಪಘಾತ ಸಂಭವಿಸುವ ಕುರಿತಂತೆ ಇತ್ತೀಚೆಗೆ ನಡೆದ ಜಾಲ್ಸೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪ್ರಸ್ತಾಪಿಸಿದ್ದರು.ಸಭೆಯಲ್ಲಿ ಸಾಕುಪ್ರಾಣಿಗಳನ್ನು ರಸ್ತೆಯಲ್ಲಿ ಬಿಡದಂತೆ ಕ್ರಮ ವಹಿಸುವ ಕುರಿತಂತೆ ಚರ್ಚೆಗಳು ನಡೆದಿದ್ದವು. ಇದೀಗ ಮತ್ತೆ ಅಪಘಾತ ಸಂಭವಿಸಿದ್ದು, ಸಾಕುಪ್ರಾಣಿಗಳನ್ನು ರಸ್ತೆಯಲ್ಲಿ ಬಿಡದಂತೆ ಕ್ರಮವಹಿಸಲು ಸ್ಥಳೀಯರು ವಿನಂತಿಸಿಕೊಂಡಿದ್ದಾರೆ.