“ಗುರುದೇವೋ ಭವ”

0

ಶಿಕ್ಷಕರ ದಿನಾಚರಣೆ- ಸೆಪ್ಟೆಂಬರ್ 5

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕರು

MDS,DNB,MOSRCSEd(U.K), FPFA, M.B.A

ನಮ್ಮ ಭಾರತೀಯ ಸಂಸ್ಕೃತಿ ಯಲ್ಲಿ ಗುರು ಪರಂಪರೆಗೆ ಅತಿ ವಿಶಿಷ್ಟವಾದ ಸ್ಥಾನವಿದೆ. ಗುರು ಎಂದರೆ ಇಂದಿನ ‘ಶಿಕ್ಷಕ’ ಮಾತ್ರವಲ್ಲ. ಶಿಕ್ಷಕ ಎಂದರೆ ಅವರು ಮಾತೃ, ಪಿತೃಗಳಿಗೆ ಸಮಾನ. ಈ ಕಾರಣದಿಂದಲೇ ಗುರುದೇವೋಭವ ಎಂದು ಗುರುಗಳನ್ನು ಸ್ಮರಿಸಿ ಪೂಜಿಸುವ ಪರಂಪರೆ ಹುಟ್ಟಿಕೊಂಡಿತ್ತು. ನಮ್ಮ ಸನಾತನ ಸಂಸ್ಕೃತಿ ಯಲ್ಲಿ ಗುರು ಶಿಷ್ಯರ ಸಂಬಂಧ ಅತ್ಯಂತ ಮಹತ್ವವಾದದ್ದು ಹಾಗೂ ಅದರ ಪ್ರಭಾವ ಪ್ರಶ್ನಾತೀತವಾದದ್ದು. ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸ, ಚಾಣಕ್ಯ-ಚಂದ್ರಗುಪ್ತ, ರಾಮ-ಹನುಮಂತ, ಏಕಲವ್ಯ-ದ್ರೋಣಾಚಾರ್ಯ ಹೀಗೆ ನೂರಾರು ಉದಾಹರಣೆ ನಮ್ಮ ಮುಂದಿದೆ.

ಗುರು ಶಿಷ್ಯರ ಸಾಧನೆಯ ಉತ್ತುಂಗತೆಯನ್ನು, ಪ್ರೀತಿಯ ಔನ್ನತ್ಯವನ್ನು, ಹಾಗೂ ಸಾರ್ಥಕತೆಯ ಬೆಳಕನ್ನು ಸಮಾಜಕ್ಕೆ ಚೆಲ್ಲಿ ಹೋಗಿರುವ ಉದಾಹರಣೆ ನಮ್ಮ ಭಾರತೀಯ ಸನಾತನ ಸಂಸ್ಕೃತಿ ಯ ಪರಂಪರೆಯ ಪ್ರತಿ ಕಣಕಣದಲ್ಲೂ ಇದೆ. ಮುಂದೆ ಗುರಿ, ಹಿಂದೆ ಗುರು ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಈ ಕಾರಣದಿಂದಲೇ ಹಿರಿಯರು ಹೇಳುತ್ತಾರೆ. ಅದಕ್ಕಾಗಿಯೇ ಪಿತೃ ದೇವೋಭವ, ಮಾತೃದೇವೋಭವ, ಗುರುದೇವೋಭವ, ಆಚಾರ್ಯದೇವೋಭವ ಎಂಬ ಮಾತು ಚಾಲ್ತಿಯಲ್ಲಿದೆ. ಈ ಕಾರಣದಿಂದಲೇ ಗುರು ಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ಎಂದು ಪ್ರಾರ್ಥಿಸುವ ಪರಂಪರೆ ನಮ್ಮದು. ವೇದ ಉಪನಿಷತ್ ಕಾಲದಿಂದಲೂ ಗುರುವಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಸಂಸ್ಕೃತದಲ್ಲಿ ಗು ಅಂದರೆ ಅಂಧಕಾರ, ರು ಎಂದರೆ ಬೆಳಕು. ಅಂದರೆ ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದುಕೊಂಡು ಹೋಗಿ ದಾರಿ ತೋರಿಸುವುವನೇ ನಿಜವಾದ ಗುರು ಎಂದು ಸಾರಿ ಹೇಳಲಾಗಿದೆ.

ಹಿನ್ನಲೆ ಏನು?

ನಮ್ಮ ದೇಶ ಕಂಡ ಅಗ್ರಗಣ್ಯ ಶಿಕ್ಷಕ, ಸಜ್ಜನ, ಸಂಭಾವಿತ ಮತ್ತು ಮಾನವೀಯ ಕಳಕಳಿಯ ಮಹಾನುಭಾವ ಶ್ರೀ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಲ್ಲಿ ಭಾರತದಾದ್ಯಂತ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನ ಎಂದು ಆಚರಿಸಲಾಗುತ್ತದೆ. ಈ ಆಚರಣೆ 1962 ರಿಂದ ಆರಂಭವಾಯಿತು. ಸಾಂಪ್ರದಾಯಿಕವಾಗಿ ಆಷಾಡ ಮಾಸದ ಮೊದಲ ಹುಣ್ಣಿಮೆಯಂದು ಗುರುಪೂರ್ಣಿಮೆ ಎಂದು ಆಚರಿಸಿ ಗುರು ಪರಂಪರೆಗೆ ನಮಿಸಿ ಪೂಜಿಸಲಾಗುತ್ತದೆ. 1962 ರಲ್ಲಿ ಶ್ರೀ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾದಾಗ ಅವರ ಸ್ನೇಹಿತರು ಮತ್ತು ಶಿಷ್ಯರು ಸೆಪ್ಟೆಂಬರ್ 5 ರಂದು ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ವಿನಂತಿಸಿದಾಗ ಬಹಳ ವಿನಮ್ರವಾಗಿ ನಿರಾಕರಿಸಿ, ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನ ಎಂದು ಆಚರಿಸಿ ಎಂದು ಸಲಹೆ ನೀಡಿದರು. ಇದು ಅವರಿಗೆ ಶಿಕ್ಷಕರ ಮೇಲೆ ಇದ್ದ ಅಪಾರವಾದ ಗೌರವದ ಪ್ರತೀಕ. ಒಬ್ಬ ಶಿಕ್ಷಕನೇ ಸಮಾಜದ ಸತ್ಪ್ರಜೆಯನ್ನು ಸೃಷ್ಟಿಸುವ ಮಹತ್ವರ ಜವಾಬ್ದಾರಿ ಇರುವವನು ಎಂದು ಅವರು ಬಲವಾಗಿ ನಂಬಿದ್ದರು ಮತ್ತು ಅದೇ ರೀತಿ ಬಾಳಿ ಬದುಕಿದ್ದರು.

1888 ರಂದು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ 5 ರಂದು ಸರ್ವಪಲ್ಲಿ ವೀರಸ್ವಾಮಿ ಅವರ ಮಗನಾಗಿ ಜನಿಸಿದರು. ಸರ್ವಪಲ್ಲಿ ಎನ್ನುವುದು ಅವರ ಮನೆತನದ ಹೆಸರಾಗಿದೆ. ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ತತ್ವಜ್ಞಾನ ವಿಷಯದಲ್ಲಿ ಬಿ.ಎ ಮತ್ತು ಎಂ. ಎ ಪದವಿಗಳಿಸಿದರು. ಆ ಬಳಿಕ 1909 ರಲ್ಲಿ ಮದ್ರಾಸ್ ಪ್ರೆಸಿಡೆಸ್ಸಿ ಕಾಲೇಜಿನಲ್ಲಿ ಅದ್ಯಾಪಕ ವೃತ್ತಿಯನ್ನು ಆರಂಭಿಸಿ 1931 ರಲ್ಲಿ ಆಂಧ್ರ ವಿಶ್ವ ವಿದ್ಯಾಲಯದ ಉಪ ಕುಲಪತಿಯಾಗಿ ಕ್ರಾಂತಿಕಾರಿ ಸುಧಾರಣೆ ತಂದರು. 1939 ರಲ್ಲಿ ಬನಾರಸ್ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾಗಿ ಆಯ್ಕೆಯಾದರು. 1949ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಬಾರಿಯಾಗಿ ನೇಮಕಗೊಂಡರು. 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾದರು

ಎತ್ತ ಸಾಗುತ್ತಿದೆ ಶಿಕ್ಷಣ ವ್ಯವಸ್ಥೆ?

ಶಿಕ್ಷಣ ಕ್ಷೇತ್ರ ಈಗ ಬಹಳಷ್ಟು ವ್ಯಾಪಾರೀಕರಣಗೊಂಡು ಅದೊಂದು ದೊಡ್ಡ ಉದ್ಯಮವಾಗಿ ಬೆಳೆದುನಿಂತು, ಆತಂಕಕಾರಿಯಾಗಿ ಬೆಳೆಯುತ್ತಲೇ ಇದೆ. ದಕ್ಷಿಣ ಆಫ್ರಿಕಾದ ಖ್ಯಾತ ಹೋರಾಟಗಾರ ನೆಲ್ಸನ್ ಮಂಡೇಲಾ ಶಿಕ್ಷಣದ ಬಗ್ಗೆ ಮಾತನಾಡುತ್ತ “ಶಿಕ್ಷಣ ಎನ್ನುವುದು ಬಹಳ ಶಕ್ತಿಶಾಲಿ ಆಯುಧ. ಇಡೀ ಜಗತ್ತನ್ನು ಬದಲಾಯಿಸುವ ಶಕ್ತಿ ಅದಕ್ಕಿದೆ. ಈ ಶಕ್ತಿಯನ್ನು ನಿಸ್ವಾರ್ಥದಿಂದ ವಿದ್ಯಾರ್ಥಿಗಳಿಗೆ ದಾರೆ ಎರೆಯುವವನೇ ನಿಜವಾದ ಶಿಕ್ಷಕ ಎಂದು ಹೇಳಿದ್ದಾರೆ.
ಎರಡು ದಶಕಗಳ ಹಿಂದೆ ಇದ್ದ ಶಿಕ್ಷಣದ ವಾತಾವರಣ ಈಗ ಇಲ್ಲ. ಮಗು ಹುಟ್ಟುವ ಮೊದಲೇ ಮಗುವಿಗೆ ಶಾಲೆಗಳಲ್ಲಿ ಸೀಟು ಕಾದಿರಿಸುವ ಕಾಲಘಟ್ಟಕ್ಕೆ ನಾವು ಬಂದು ನಿಂತಿದ್ದೇವೆ. ಶಾಲೆಗಳಲ್ಲಿ ಶಿಕ್ಷಣ ಒಂದು ಬಿಟ್ಟು, ಬೇರೆ ಎಲ್ಲವೂ ಸಿಗುತ್ತದೆ. ಅದು ಬೇಕಿದ್ದಲ್ಲಿ ಟ್ಯೂಷನ್‍ಗೆ ಸೇರಬೇಕು, ಶೂ , ಕಾಲು ಚೀಲಗಳಿಂದ ಹಿಡಿದು ಊಟ ಕಾಫಿ ತಿಂಡಿ ಎಲ್ಲವೂ ಸಿಗುತ್ತದೆ. ಆದರೆ ಸಂಸ್ಕಾರ ಮಾತ್ರ ಸಿಗುತ್ತಿಲ್ಲ ಎನ್ನುವುದು ಬೇಸರದ ವಿಚಾರ. ದುಬಾರಿ ಶುಲ್ಕ ತೆತ್ತು ಪ್ರತಿಷ್ಠಿತ ಶಾಲೆ ಸೇರಿಸುವುದು ಹೆತ್ತವರಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಶಾಲೆಯಲ್ಲಿ ಮಕ್ಕಳು ಕಲಿತದಕ್ಕಿಂತ ಕಳೆದು ಕೊಂಡದ್ದೇ ಜಾಸ್ತಿ ಎಂಬ ಹಂತಕ್ಕೆ ಬಂದು ತಲುಪಿದೆ. “ಗುರುವಿನ ಗುಲಾಮ ನಾಗುವ ತನಕ ದೊರಯದಣ್ಣ ಮುಕುತಿ” ಎಂಬುದು ಈಗ “ಗುರುವೇ ಗುಲಾಮನಾಗುವ ತನಕ ದೊರಕದಣ್ಣ ಮುಕುತಿ” ಎಂದು ಬದಲಾಗಿದೆ. ಶಾಲೆಗಳಲ್ಲಿ ಕೇವಲ ಪುಸ್ತಕದ ಶಿಕ್ಷಣಕ್ಕೆ ಮಾತ್ರ ಒತ್ತು ನೀಡಲಾಗುತ್ತದೆ. ಜೀವನ ಶಿಕ್ಷಣಕ್ಕೆ ಯಾವುದೇ ಪ್ರಾಮುಖ್ಯತೆ ನೀಡುತ್ತಿಲ್ಲ. ಒಟ್ಟಿನಲ್ಲಿ ಶಾಲೆ ಎನ್ನುವುದು ಕೇವಲ ಡಾಕ್ಟರ್, ವಕೀಲರು, ಇಂಜಿನಿಯರ್‍ಗಳನ್ನು ಸೃಷ್ಟಿ ಮಾಡುವ ಕಾರ್ಖಾನೆಯಾಗಿ ಬದಲಾಗುತ್ತಿದೆ. ಯಾವ ಶಾಲೆಗೆ ಎಷ್ಟ್ಚು ರ್ಯಾಂಕ್ ಬಂದಿದೆ ಎನ್ನುವುದರ ಮೇಲೆ ಶಾಲೆಯ ಗುಣಮಟ್ಟವನ್ನು ಅಳೆಯಲಾಗುತ್ತಿದೆ. ಶಾಲೆಯಿಂದ ಎಷ್ಟು ಪ್ರಜ್ಞಾವಂತ ಸತ್ಪ್ರಜೆ ಹುಟ್ಟಿಕೊಂಡಿದ್ದಾರೆ ಎನ್ನುವುದು ಗೌಣವಾಗುತ್ತಿದೆ.

ಇಂದು ಕಂಪ್ಯೂಟರ್, ಮೊಬೈಲ್, ಇಂಟರ್‍ನೆಟ್ ಹಾವಳಿಯಿಂದಾಗಿ ಎಲ್ಲ ವಿಚಾರಗಳು (ಬೇಕಾದದ್ದು ಮತ್ತು ಬೇಡವಾದದ್ದು) ವಿದ್ಯಾರ್ಥಿಗಳಿಗೆ ಬೆರಳ ತುದಿಯಲ್ಲಿ ಲಭ್ಯವಾಗುತ್ತಿದೆ. ಶಿಕ್ಷಕ ಕೇವಲ ನೆಪ ಮಾತ್ರಕ್ಕೆ . ಶಿಕ್ಷಕ ಈಗ ಸುಗಮಕಾರರು (Facilitator) ಎಂದು ಬದಲಾಗಿದ್ದಾರೆ. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಮಕ್ಕಳಿಗೆ ಬಯ್ಯುವಂತಿಲ್ಲ, ಬಡಿಯುವಂತಿಲ್ಲ, ಬೋಧಿಸುವ ಮತ್ತು ಕಲಿಸುವ ಅಗತ್ಯವೂ ಇಲ್ಲ. ಮಕ್ಕಳ ಎಲ್ಲವನ್ನೂ ತಾವಾಗಿಯೇ ಕಲಿಯುವ ಸಾಮಥ್ರ್ಯ ಹೊಂದಿದ್ದಾರೆ. ಅದಕ್ಕೆ ಪೂರಕವಾದ ವ್ಯವಸ್ಥೆ ಮಾಡಿಕೊಟ್ಟು, ಅನುಕೂಲಕರ ವಾತಾವರಣ ಕಲ್ಪಿಸಿಕೊಟ್ಟು, ಕಲಿಕೆಯನ್ನು ಸುಗಮಗೊಳಿಸುವ ಹೊಣೆಗಾರಿಕೆ ಮಾತ್ರ ಶಿಕ್ಷಕರದ್ದು. ಅಂದರೆ ಕಲಿಕೆಗೆ ಪೂರಕ ಸನ್ನಿವೇಶ ಸೃಷ್ಟಿಮಾಡಿ, ಭೌತಿಕ ಸಂಪನ್ಮೂಲ ಒದಗಿಸಿಕೊಟ್ಟು, ಅಗತ್ಯವಿದ್ದಲ್ಲಿ ಅಲ್ಲಲ್ಲಿ ಅಲ್ಪ ಸ್ವಲ್ಪ ಮಾರ್ಗದರ್ಶನ ಮಗುವಿಗೆ ನೀಡುವುದು ಅಷ್ಟು ಬಿಟ್ಟರೆ ಶಿಕ್ಷಕರು ನಿಷ್ಕ್ರಿಯರೇ. ಶಿಕ್ಷಕರು ಈಗ ಪಾಠ ಮಾಡುವ ಪ್ರಮೇಯವೇ ಬರುವುದಿಲ್ಲ. ಅಗತ್ಯವೇ ಇಲ್ಲ. ಯಾಕೆಂದರೆ ಆತ ಶಿಕ್ಷಕ ಅಲ್ಲ, ಸುಗಮಕಾರ. ಇದು ನಮ್ಮ ಶಿಕ್ಷಣ ವ್ಯವಸ್ಥೆ ಬಹುದೊಡ್ಡ ದುರಂತ.

ಕೊನೆಮಾತು:

ಶಿಕ್ಷಕರ ದಿನದಂದು, ಗುರು ಶಿಷ್ಯರ ಸಂಬಂಧಗಳ ಬಗ್ಗೆ ಎಲ್ಲರೂ ಒಮ್ಮೇ ಸಿಂಹಾವಲೋಕನ ಮಾಡಿಕೊಂಡು ನಮಗೆ ಶಿಕ್ಷಣ ಮತ್ತು ಸಂಸ್ಕಾರ ನೀಡಿದ ಶಿಕ್ಷಕ ಬಂದುಗಳನ್ನು ಸ್ಮರಿಸೋಣ. ನಮ್ಮ ಅಜ್ಞಾನದ ಕತ್ತಲೆಯನ್ನು ಕಳೆದು, ಸುಜ್ಞಾನದ ಬೆಳಕಿನಡೆಗೆ ಕರೆದೊಯ್ದ ಶಿಕ್ಷಕ ಪರಂಪರೆಗೆ ನಮಿಸೋಣ. ಜಾತಿ, ಧರ್ಮ, ಮತ, ಪಂಥ, ಕುಲಗೋತ್ರ, ಮೇಲು ಕೀಳು, ಬಡವ ಬಲ್ಲಿದ, ದಲಿತ ಬ್ರಾಹ್ಮಣ, ಹೆಣ್ಣು ಗಂಡು ಎಂದು ತಾರತಮ್ಯ ಮಾಡದೇ ನಮ್ಮನ್ನು ತಿದ್ದಿ ತೀಡಿ ಮನುಷ್ಯರನ್ನಾಗಿ ಮಾಡಿದ ಎಲ್ಲಾ ಗುರು ಪಂಥ ಅಥವಾ ಗುರು ಪರಂಪರೆಗೆ ಸೇರಿದ ಗುರುವರೇಣ್ಯರಿಗೆ ಸಾಷ್ಟಾಂಗ ಪ್ರಣಾಮಗಳು. ಎಲ್ಲ ಶಿಕ್ಷಕ ಬಂಧುಗಳಿಗೆ ಶುಭ ಹಾರೈಕೆಯನ್ನು ಸಲ್ಲಿಸೋಣ.