ಮೂಲಭೂತ ಸೌಕರ್ಯ ಒದಗಿಸಿ, ನಮಗೂ ಬದುಕು ಕಲ್ಪಿಸಿ

0

ಎಸ್ಸಿ/ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಮಾಣಿಮರ್ಧು ನಿವಾಸಿಗಳ ಅಳಲು

ಈ ದೇಶದ ಪ್ರತಿಯೊಬ್ಬನಿಗೂ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಸಂವಿಧಾನ ಹೇಳುತ್ತದೆ. ಆದರೆ ನಮಗಿನ್ನೂ ವಿದ್ಯುತ್ ರಸ್ತೆ, ದೂರವಾಣಿ, ಸೇತುವೆ ವ್ಯವಸ್ಥೆ ಆಗಿಲ್ಲ. ಎಷ್ಟು ಬಾರಿ ಮನವಿ ಕೊಟ್ಟರೂ ನಮ್ಮ ಅಹವಾಲು ಯಾರೂ ಕೇಳುತ್ತಿಲ್ಲ. ಇದು ಹೀಗೆ ಮುಂದುವರಿದರೆ ನಾವು ನಮ್ಮ ಗ್ರಾಮ ಪಂಚಾಯತ್ ಎದುರು ಧರಣಿ ಕುಳಿತುಕೊಳ್ಳುತ್ತೇವೆ ಎಂದು ಆಲೆಟ್ಟಿ ಗ್ರಾಮದ ಮಾಣಿಮರ್ಧು ಪ್ರದೇಶದ ಜನರ ಅಳಲು ತೋಡಿಕೊಂಡಿದ್ದಾರೆ.

ಸೆ.೭ರಂದು ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ನಡೆದ ಎಸ್ಸಿ/ಎಸ್ಟಿ ಕುಂದುಕೊರತೆ ಸಭೆಯು ತಹಶೀಲ್ದಾರ್ ಮಂಜುನಾಥ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾ.ಪಂ. ಮ್ಯಾನೇಜರ್ ಹರೀಶ್, ಶಿಕ್ಷಣಾಧಿಕಾರಿ ಬಿ.ಇ. ರಮೇಶ್ ಹಾಗೂ ಸಮಾಜ ಕಲ್ಯಾಣಾಧಿಕಾರಿ ಧನಂಜಯ ಹಾಗೂ ಎಲ್ಲ ಇಲಾಖಾಧಿಕಾರಿಗಳು ಸಭೆಯಲ್ಲಿದ್ದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶ್ರೀಧರ ಮಾಣಿಮರ್ಧು ಎಂಬವರು ನಾವು ಆಲೆಟ್ಟಿ ಗ್ರಾಮದ ಮಾಣಿಮರ್ಧು ಪ್ರದೇಶದವವರು. ನಮಗೆ ಇನ್ನೂ ವಿದ್ಯುತ್ ಸೌಲಭ್ಯ ಆಗಿಲ್ಲ. ರಸ್ತೆ ವ್ಯವಸ್ಥೆಯೂ ಇಲ್ಲ. ಟವರ್ ಇಲ್ಲದೆ ದೂರವಾಣಿಯೂ ಇಲ್ಲ. ಮುಂದುವರಿದ ದೇಶವಾದ ಭಾರತದಲ್ಲಿ ಈ ರೀತಿ ಇದೆ. ನಾವು ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಕೊಟ್ಟರೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಯಾಕೆ ಹೀಗೆ ಎಂದು ಕೇಳಿದರು.

ಸೇತುವೆ ಬದಲಾಯಿಸಿದ್ದು ಯಾಕೆ ?
ನಮ್ಮ ಮನವಿಯ ಪ್ರತಿಫಲವಾಗಿ ಸೇತುವೆಯೊಂದು ಮಂಜೂರಾಗಿತ್ತು. ಅದನ್ನೂ ಕೂಡಾ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಮಂಜೂರುಗೊಂಡ ಜಾಗದ ಹೆಸರಿನಲ್ಲೇ ಬಿಲ್ ಕೂಡಾ ಆಗಿದೆ. ಯಾಕೆ ಹೀಗೆಲ್ಲ ಮಾಡುತ್ತೀರಿ ಎಂದು ತಹಶೀಲ್ದಾರ್‌ರನ್ನು ಶ್ರೀಧರ್ ಮಾಣಿಮರ್ಧು ಪ್ರಶ್ನಿಸಿದರು. ಈ ವೇಳೆ ತಹಶೀಲ್ದಾರ್ ಮಂಜುನಾಥರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪರಮೇಶ್ವರರನ್ನು ವಿವರ ಕೇಳಿದಾಗ, ಮಾಣಿಮರ್ಧುಗೆ ಮಂಜೂರುಗೊಂಡಿತ್ತು. ಆದರೆ ಅಲ್ಲಿ ಕಾಮಗಾರಿಗೆ ಅರಣ್ಯದ ಆಕ್ಷೇಪ ಇದ್ದುದರಿಂದ ಆ ಅನುದಾನದ ಕೆಲಸ ಆಗಬೇಕಾಗಿದ್ದುದರಿಂದ ನಾವು ಮೇಲಧಿಕಾರಿಗಳಿಗೆ ತಿಳಿಸಿದೆವು. ಪಂಚಾಯತ್‌ನಿಂದ ಅನುಮತಿ ಕೇಳಿಕೊಂಡು ಅದೇ ಗ್ರಾಮ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುವಂತೆ ನಿರ್ದೇಶನ ಬಮದುದರಿಂದ ಕಾಮಗಾರಿ ಮಾಡಿzವೆ. ಈಗಲೂ ಮಾಣಿಮರ್ಧು ಆ ಪ್ರದೇಶದಲ್ಲಿ ಸೇತುವೆಗೆ ಅನುದಾನ ಇಡಬಹುದಾದರೂ ಅರಣ್ಯದ ಅನುಮತಿ ಮಾಡಿಸಿಕೊಡಬೇಕು ಎಂದು ಅವರು ಹೇಳಿದರು.
ಈಗ ಸೇತುವೆ ಬದಲಾಯಿಸಿ ಕೆಲಸ ಆಗಿದೆ. ಆದರೂ ಅದನ್ನು ಬದಲು ಮಾಡುವಾಗ ಸ್ಥಳೀಯರೊಂದಿಗೆ ಚರ್ಚಿಸಬೇಕಿತ್ತು ಎಂದು ಮಾಜಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು.

ಸೋಣಂಗೇರಿ ವೃತ್ತಕ್ಕೆ ಅಂಬೇಡ್ಕರ್ ಹೆಸರು
ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಹೆಸರು ಇಡಬೇಕೆಂದು ಆನಂದ ಬೆಳ್ಳಾರೆ ಒತ್ತಾಯ ಮಾಡಿದರು.
ಅಂಬೇಡ್ಕರ್ ಪ್ರತಿಮೆಗೆ ಅನುದಾನ

ತಾಲೂಕು ಕಚೇರಿ ಮುಂಭಾಗದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡುವಂತೆ ಕಳೆದ ಸಭೆಯ ಪಾಲನಾ ವರದಿಯ ಆಧಾರದಲ್ಲಿ ಚರ್ಚೆ ನಡೆದಾಗ ಅದಕ್ಕೆ ನ.ಪಂ. ನಿಂದ ೩ ಲಕ್ಷ ರೂ ಅನುದಾನ ಇಡಲು ಕ್ರಮವಹಿಸಲಾಗಿದೆ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಮಾಹಿತಿ ನೀಡಿದರು.
ಪೋಲೀಸರು ಹೆಸರಿಸುತ್ತಾರೆ.

ಅಜ್ಜಾವರ ಗ್ರಾಮದ ಮೇನಾಲದಲ್ಲಿ ನಮ್ಮ ಹುಡುಗರು ಅಟೋ ಇತ್ಯಾದಿಗಳಲ್ಲಿ ಹೋಗುವಾಗ ತಡೆದು ಪೋಲೀಸರು ಹೆಸರಿಸುತ್ತಾರೆ. ಯಾಕೆ ಹೀಗೆ ಮಾಡುತ್ತಾರೆ. ಈ ಕುರಿತು ಈ ಸಭೆಯಲ್ಲಿ ಪೋಲೀಸರು ಮಾಹಿತಿ ನೀಡಬೇಕು. ಅವರನ್ನು ಸಭೆಗೆ ಕರೆಸಿ ಎಂದು ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಲ್ಲತಡ್ಕ ಸಭೆಯಲ್ಲಿ ಪ್ರಸ್ತಾಪಿಸಿದರು. ತಾಲೂಕಿನಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಅದನೆನಲ್ಲ ನೋಡಿ ಸುಮ್ಮನೆ ಕುಳಿತುಕೊಳ್ಳುವ ಇವರು ಪಾಪದವರನ್ನು ನಿಲ್ಲಿಸಿ ಹೆಸರಿಸುವುದು ಎಷ್ಟು ಸರಿ ಎಂದು ಕೇಳಿದರು. ಅವರು ಚರ್ಚೆ ಮುಂದುವರಿಸುತ್ತಿದ್ದಂತೆ ಮಧ್ಯೆ ಪ್ರವೇಶ ಮಾಡಿದ ತಹಶೀಲ್ದಾರ್ ಮಂಜುನಾಥರು ಬೇರೆ ಕೆಲಸದಿಂದ ಪೋಲೀಸರು ಈ ಸಭೆಗೆ ಬಂದಿಲ್ಲ.

ಈ ಕುರಿತು ನಾನು ಪೋಲೀಸ್ ಇಲಾಖೆಯಿಂದ ವರದಿ ಪಡೆಯುತ್ತೇನೆ ಎಂದು ಹೇಳಿದರು.
ಗ್ಯಾಸ್ ಸಿಲಿಂಡರ್ ಅವೈಜ್ಞಾನಿಕ ಶೇಖರಣೆ
ಕಾಂತಮಂಗಲದ ಗ್ಯಾಸ್ ಸಿಲಿಂಡರ್ ಗೋಡಾನ್‌ನಲ್ಲಿ ಅವೈಜ್ಞಾನಿಕವಾಗಿ ಸಿಲಿಂಡಂರ್‌ಗಳನ್ನು ರಾಶಿ ಹಾಕಲಾಗಿದ್ದು ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸತೀಶ್ ಬೂಡುಮಕ್ಕಿಯವರು ಹೇಳಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಡಿ.ಸಿ. ಮನ್ನಾ ಜಾಗ ವಿಚಾರವಾಗಿ ಅಚ್ಚುತ ಮಲ್ಕಜೆ ಮಾತನಾಡಿದರು. ತಾಲೂಕು ಅಂಬೇಡ್ಕರ್ ಭವನ ಸಹಿತ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತು. ಕೆ.ಕೆ.ನಾಯ್ಕ್, ದಾಸಪ್ಪ ಕರಿಯಮೂಲೆ, ಮೋನಪ್ಪ ನಾಯ್ಕ್, ನಂದರಾಜ್ ಸಂಕೇಶ, ಸಂಜಯ್ ಪೈಚಾರ್, ಸರಸ್ವತಿ ಬೊಳಿಯಮಜಲು ಮೊದಲಾದ ವಿಚಾರದಲ್ಲಿ ಮಾತನಾಡಿದರು.