ಸೋಣಂಗೇರಿ ನೂತನ ವೃತ್ತಕ್ಕೆ ಕಲಾವಿದ ಮೋಹನ ಸೋನ ಹೆಸರಿಡುವಂತೆ ಅಭಿಮಾನಿಗಳಿಂದ ಪತ್ರಿಕಾಗೋಷ್ಠಿ

0

ಸೋನ ಅವರ ಬಯಲು ಚಿತ್ರಾಲಯವನ್ನು ಮುಂದುವರೆಸಿಕೊಂಡು ಹೋಗುತ್ತೇವೆ: ಕಲಾವಿದ ಸುದೇಶ್ ಮಹಾನ್, ಮೃಣಾಲಿನಿ ಸೋನ

ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವೃತ್ತಕ್ಕೆ ಹೆಸರಾಂತ ಚಿತ್ರಕಲಾವಿದ ಮೋಹನ ಸೋನ ಅವರ ಹೆಸರು ಇಡಬೇಕು ಎಂದು ಸೋನ ಅವರ ಶಿಷ್ಯವೃಂದ ಹಾಗೂ ಅಭಿಮಾನಿಗಳು ಅ.೧೪ರಂದು ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ.

ಮೋಹನ ಸೋನ ಅವರ ಶಿಷ್ಯರಾಗಿರುವ ಕಲಾವಿದ ಮಂಗಳೂರಿನ ಸುದೇಶ್ ಮಹಾನ್ ಅವರು ಮಾತನಾಡಿ ” ಸೋಣಂಗೇರಿಯನ್ನು ಮೋಹನ್ ಸೋನರವರು ಕಲಾಗ್ರಾಮವಾಗಿ ರೂಪಿಸಿದ್ದಾರೆ. ೧೯೯೩ ರಲ್ಲಿ ಸೋಣಂಗೇರಿಯಲ್ಲಿ ದೇಶದ ಕಲಾವಿದರನ್ನೆಲ್ಲ ಸೇರಿಸಿ ಬಯಲು ಚಿತ್ರಾಲಯ ಮಾಡುವುದರ ಮೂಲಕ ಸೋಣಂಗೇರಿಯ ಹೆಸರನ್ನು ಕಲಾ ಪ್ರಪಂಚದಲ್ಲಿ ಶಾಶ್ವತವಾಗಿ ಇರುವಂತೆ ಮಾಡಿದ್ದಾರೆ. ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿರುವ ಸೋಣಂಗೇರಿಯಲ್ಲಿ ಮೋಹನ ಸೋನ ಅವರ ಕಲಾಸಾಧನೆ ಎದ್ದುಕಣುವಂತೆ ಸೋಣಂಗೇರಿ ವೃತ್ತಕ್ಕೆ ಮೋಹನ್ ಸೋನ ಅವರ ಹೆಸರಿಡಬೇಕೆಂದು ಕಲಾವಿದರೆಲ್ಲ ಬಯಸುತ್ತೇವೆ. ಅಂದರೆ ಅವರ ಪ್ರತಿಮೆ ಅಲ್ಲಿ ಇಡಬೇಕೆಂದಲ್ಲ. ಆ ವೃತ್ತವನ್ನು ಕಲಾಕೃತಿಗಳ ಮೂಲಕ ವಿನ್ಯಾಸಗೊಳಿಸಿ, ಬಯಲು ಚಿತ್ರಾಲಯ ಹಾಗೂ ಮೋಹನ ಸೋನರವರು ಸದಾ ನಮ್ಮ ಸ್ಮೃತಿಯಲ್ಲಿ ಇರುವಂತೆ ಮಾಡಬೇಕು. ಆ ವಿನ್ಯಾಸಗಳನ್ನೆಲ್ಲ ನಾವು ಕಲಾವಿದರು ಮಾಡಿಕೊಡಲು ಸಿದ್ಧರಿದ್ದೇವೆ ” ಎಂದು ಹೇಳಿದರು.

” ಸೋನರವರ ಮನೆಯಲ್ಲಿರುವಂತಹ ಅತ್ಯಂತ ಸುಂದರ ಆರ್ಟ್ ಗ್ಯಾಲರಿ ಮಂಗಳೂರಿನಲ್ಲಿಯೂ ಇಲ್ಲ. ನಾವು ಸೋಣಂಗೇರಿ ವೃತ್ತಕ್ಕೆ ಮೋಹನ ಸೋನರ ಹೆಸರಿಡಿ ಎಂದು ಹೇಳುವ ಪರಿಸ್ಥಿತಿ ಬರಬಾರದು. ಜನರೇ ಸರ್ವಾನುಮತದಿಂದ ಮುಂದೆಬರಬೇಕು. ಯಾಕೆಂದರೆ ಸೋಣಂಗೇರಿಯಲ್ಲಿ ರಾಷ್ಟ್ರಮಟ್ಟದ ಚಿತ್ರ ಬಯಲು ಚಿತ್ರಾಲಯ ನಿರ್ಮಿಸುವಾಗ ಅಲ್ಲಿಯ ಎಲ್ಲ ೪೦ ಮನೆಯವರೂ ಪೂರ್ಣ ತೊಡಗಿಸಿಕೊಂಡು ಇಡೀ ಊರಲ್ಲಿ ಕಲೆಯ ಉತ್ಸವ ನಡೆದಿತ್ತು” ಎಂದು ಸುದೇಶ್ ಮಹಾನ್ ನೆನಪಿಸಿಕೊಂಡರು.

ಸತ್ಯಶಾಂತಿ ತ್ಯಾಗಮೂರ್ತಿ ಅವರು ಮಾತನಾಡಿ “ಗ್ರಾಮ ಪಂಚಾಯತಿ ಮಟ್ಟದಿಂದ ಸಚಿವಾಲಯದವರೆಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಸೋಣಂಗೇರಿ ಪುಣ್ಯಕ್ಷೇತ್ರಕ್ಕೆ ಪ್ರವೇಶದ್ವಾರ. ಆದರೆ ಅಲ್ಲಿ ಸೋನ ಅವರ ಪ್ರತಿಮೆ ಬೇಡ. ಬದಲಾಗಿ ಸೋಣಂಗೇರಿ ಕಲೆಗೆ ಹೆಸರಿನ ಊರಾದ ಕಾರಣ ಸೋನ ಅವರ ಚಿತ್ರಕಲಾಕೃತಿಗಳು ವೃತ್ತದ ಸುತ್ತ ಇರಬೇಕು. ಸೋನ ಅವರ ಚಿತ್ರಾಲಯವನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು. ಊರಿನ ಅಭಿವೃದ್ಧಿಗೆ ಯಾವುದೇ ಒಂದು ಕೆಲಸ ಆಗಬೇಕಾದರೆ ಜನಾಭಿಪ್ರಾಯ ಮುಖ್ಯ. ಜನಾಭಿಪ್ರಾಯ ಸಂಗ್ರಹದ ಮೂಲಕ ವೃತ್ತಕ್ಕೆ ಹೆಸರು ಬರಲಿ ಎಂದು ಹೇಳಿದರು.

ಮೋಹನ ಸೋನ ಪುತ್ರಿ ಮೃಣಾಲಿನಿ ಸೋನ ಮಾತನಾಡಿ ಸೋಣಂಗೇರಿಯಲ್ಲಿ ತಂದೆಯವರು ಸ್ಥಾಪಿಸಿದ ಚಿತ್ರಾಲಯವನ್ನು ನಿಲ್ಲಿಸಬಾರದು. ಮುಂದುವರೆಸಿಕೊಂಡು ಹೋಗಬೇಕು ಎಂಬುದು ನಮ್ಮ ಆಸೆ. ಹಾಗಾಗಿ ಸೋಣಂಗೇರಿಯಲ್ಲಿ ಒಂದಷ್ಟು ಚಿತ್ರಗಳು, ಒಂದಷ್ಟು ಚಿತ್ರಕಲಾವಿದರನ್ನು ಕರೆದು ಮುಂದೆಯೂ ಚಿತ್ರಾಲಯವನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಸೋಣಂಗೇರಿಯ ವೃತ್ತದಲ್ಲಿ ಸೋನ ಅವರ ಕಲಾತ್ಮಕ ಶಿಲ್ಪಕಲೆ ಇದ್ದರೆ ಸೋಣಂಗೇರಿಗೆ ಅಂದ ಎಂದರಲ್ಲದೇ, ತಂದೆ ಮೋಹನ ಸೋನ ಅವರು ನಮ್ಮನ್ನು ಅಗಲಿ ಮೂರು ವರ್ಷಗಳಾಗಿವೆ. ಪ್ರತೀ ವರ್ಷ ಅವರ ನೆನಪಿಗಾಗಿ ಒಂದೊಂದು ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಮೊದಲನೇ ವರ್ಷ ಮೋಹನ ಸೋನ ಆರ್ಟ್ ಗ್ಯಾಲರಿ ನಿರ್ಮಾಣ ಮಾಡಿ, ಸೋಣಂಗೇರಿ ಶಾಲಾ ಮಕ್ಕಳನ್ನು ಕರೆದು ಮಕ್ಕಳಿಗೆ ಚಿತ್ರಕಲೆ ಶಿಬಿರ ಮಾಡಿದೆವು. ಎರಡನೇ ವರ್ಷ ನಾಟಕ ಪ್ರದರ್ಶನ ಮಾಡಿದೆವು. ಇದೀಗ ಮೂರನೇ ವರ್ಷದ ನೆನಪಿಗಾಗಿ ಅವರ ಶಿಷ್ಯರಾದ ಸುದೇಶ್ ಮಹಾನ್ ಹಾಗೂ ಆದ್ಯಾ ರಾಜೇಶ್ ಮಹಾನ್ ಅವರಿಂದ ಕಲಾಪ್ರದರ್ಶನ ನಡೆಯಲಿದೆ ಎಂದು ಮೃಣಾಲಿನಿ ಸೋನ ಅವರು ಹೇಳಿದರು.

ಮಂಗಳೂರಿನ ವಿಜಿತ್ ಶೆಟ್ಟಿ ಅವರು ಮಾತನಾಡಿ ಇಂದಿನ ಇಂಟರ್ ನೆಟ್ ಯುಗದಲ್ಲಿ ಚಿತ್ರಕಲೆಗೆ ಮಹತ್ವ ಸಿಗುತ್ತಿಲ್ಲ. ಆದರೆ ೧೯೯೩ರಲ್ಲಿ ಚಿತ್ರಕಲಾಕೃತಿ ರಚಿಸುವ ಮೂಲಕ ಮೋಹನ ಸೋನ ಅವರು ಕಲೆಗೆ ಮಹತ್ವ ನೀಡಿದ್ದಾರೆ. ಸೋನ ಅವರು ತಮಗಾಗಿ ಏನೂ ಮಾಡಿಲ್ಲ. ಬದಲಾಗಿ ಕಲೆಗಾಗಿಯೇ ದುಡಿದವರು. ಸೋಣಂಗೇರಿ ವೃತ್ತದಲ್ಲಿ ಮೋಹನ ಸೋನರ ಪ್ರತಿಮೆ ಬದಲು ಅವರ ಚಿತ್ರಕಲಾಕೃತಿಗಳೇ ಇರಲಿದೆ. ಜೊತೆಗೆ ಅವರ ಹೆಸರು ವೃತ್ತಕ್ಕೆ ಬಂದರೆ ಒಳ್ಳೆಯದು ಎಂದು ಹೇಳಿದರು.

ಮೋಹನ ಸೋನ ಪುತ್ರ ಗಗನ್ ಸೋನ ಮಾತನಾಡಿ “ತಂದೆಯವರ ನೆನಪು ಸಾರುವ ಸೋನ ಆರ್ಟ್ ಗ್ಯಾಲರಿ ನಮ್ಮ ಮನೆಯಲ್ಲಿ ಇದ್ದು, ಸಾರ್ವಜನಿಕರು ಯಾವಾಗ ಬೇಕಾದರೂ ಬಂದು ಚಿತ್ರಕಲಾಕೃತಿಗಳನ್ನು ಆರ್ಟ್ ಗ್ಯಾಲರಿಯಲ್ಲಿ ವೀಕ್ಷಿಸಬಹುದಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಾವಿದ ಸುದೇಶ್ ಮಹಾನ್, ಮೃಣಾಲಿನಿ ಸೋನ, ಗಗನ್ ಸೋನ, ನಂದನ್ ಸೋನ, ಸತ್ಯಶಾಂತಿ ತ್ಯಾಗಮೂರ್ತಿ, ವಿಜಿತ್ ಶೆಟ್ಟಿ ಮಂಗಳೂರು ಉಪಸ್ಥಿತರಿದ್ದರು.