ಸುಳ್ಯ ಪೊಲೀಸ್‌ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ

0

ಶಾಲಾ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯನ್ನು ಪರಿಚಯಿಸಿ ಜಾಗೃತಿ ಮೂಡಿಸಿದ ಎಸ್ ಐ

ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರಿಗೆ ವಿದ್ಯಾರ್ಥಿಗಳಿಂದ ಹೂ ನೀಡಿ ಜಾಗೃತಿ ಮೂಡಿಸಿದ ಪೊಲೀಸರು

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ,ಸುಳ್ಯ ಪೊಲೀಸ್ ಠಾಣೆ, ಸುಳ್ಯ ವರ್ತಕರ ಸಂಘ,ರೋಟರಿ ಸುಳ್ಯ, ರೋಟರಿ ಸಿಟಿ, ಆಟೋ ಚಾಲಕರ ಸಂಘ, ಇದರ ಸಂಯುಕ್ತಾಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಜಾಗೃತಿ ಜಾಥಾ ಡಿ.29ರಂದು ಸುಳ್ಯದಲ್ಲಿ ನಡೆಯಿತು.

ಸುಳ್ಯ ಜ್ಯೋತಿ ವೃತ್ತದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಠಾರಿರವರು ಜಾಗೃತಿ ಜಾಥಾವನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ಜಾಥಾಕ್ಕೆ ಚಾಲನೆ ನೀಡಿದರು. ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು, ಶ್ರೀ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ರೋಟರಿ ಸುಳ್ಯ, ರೋಟರಿ ಸುಳ್ಯ ಸಿಟಿ, ವರ್ತಕರ ಸಂಘ,ಆಟೋ ಚಾಲಕರ ಸಂಘ, ಪಯಶ್ವಿನಿ ಟ್ಯಾಕ್ಸಿ ಚಾಲಕರ ಸಂಘದ ಪದಾಧಿಕಾರಿಗಳು ಸದಸ್ಯರು ಜಾಥಾದಲ್ಲಿ ಪಾಲ್ಗೊಂಡು ಗಾಂಧಿನಗರ ತನಕ ಕಾಲ್ನಡಿಗೆ ಮೂಲಕ ನಡೆದು ಅಪರಾಧ ತಡೆಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಅಪರಾಧ ತಡೆ ಮಾಸಾಚರಣೆಯ ಕರಪತ್ರವನ್ನು ಸಾರ್ವಜನಿಕರಿಗೆ ಮತ್ತು ಸ್ಥಳೀಯ ವ್ಯಾಪಾರಸ್ಥರಿಗೆ, ಪ್ರಯಾಣಿಕರಿಗೆ ವಿತರಿಸಿ ಅಪರಾಧ ತಡೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಿತು.

ಹೆಲ್ಮೆಟ್ ಧರಿಸದ ವಾಹನ ಸವಾರಿಗೆ ಹೂ ನೀಡಿ ಎಚ್ಚರಿಕೆ :

ಈ ಸಂದರ್ಭದಲ್ಲಿ ಜಾಥಾ ಸಾಗುವ ರಸ್ತೆಯಲ್ಲಿ ರಸ್ತೆ ನಿಯಮವನ್ನು ಪಾಲಿಸದ ಕೆಲವು ವಾಹನ ಸವಾರರಿಗೆ ಹೆಲ್ಮೆಟ್ ಧರಿಸದ, ಸೀಟ್ ಬೆಲ್ಟ್ ಧರಿಸಿಕೊಳ್ಳದ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ ಕೆಲವು ವಾಹನ ಸವಾರರಿಗೆ ಸುಳ್ಯ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರುರವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಗುಲಾಬಿ ಹೂವು ನೀಡುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ಸುಳ್ಯ ಠಾಣಾ ತನಿಖಾ ವಿಭಾಗದ ಎಸ್ಐ ಶ್ರೀಮತಿ ಸರಸ್ವತಿ ಜಾಗೃತಿ ಕರಪತ್ರವನ್ನು ವಾಚಿಸಿದರು.

ಜ. 1 ರಿಂದ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಕ್ರಮ :

ಸುಳ್ಯ ಪೊಲೀಸ್ ಠಾಣಾ ಪರಿಸರದಲ್ಲಿ ಜಾಥಾ ಸಮಾರೋಪಗೊಂಡು ಸಾರ್ವಜನಿಕರಿಗೆ ಜಾಗೃತಿ ಕುರಿತ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಈರಯ್ಯರವರು ‘ ಸುಳ್ಯದ ಜನತೆ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ನೀಡಿದ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿ ಎಲ್ಲಾ ಸಂದರ್ಭದಲ್ಲಿಯೂ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡುವಂತೆ ಕೇಳಿಕೊಂಡರು.ಸುಳ್ಯ ನಗರದಲ್ಲಿ ಆಟೋ ಚಾಲಕರು ತಮ್ಮ ವಾಹನಗಳನ್ನು ತಮಗಾಗಿ ನಿಗದಿಪಡಿಸಿರುವ ಸ್ಥಳದಲ್ಲಿಯೇ ನಿಲ್ಲಿಸಿ ಟ್ರಾಫಿಕ್ ಜಾಮ್ ಉಂಟಾಗದಂತೆ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಾಡಬೇಡಿ ಎಂದು ಕೇಳಿಕೊಂಡರು.


ಅಲ್ಲದೆ ಸುಳ್ಯ ಮುಖ್ಯಪೇಟೆಯ ವರ್ತಕರು ಎಲ್ಲಾ ದಿನಗಳಲ್ಲಿಯೂ ತಮ್ಮ ತಮ್ಮ ಅಂಗಡಿಗಳನ್ನು ಮುಂದೆ ದಿನ ಬಿಟ್ಟು ದಿನ ನೋ ಪಾರ್ಕಿಂಗ್ ಫಲಕ ಅಳವಡಿಸಿ ಮುಖ್ಯರಸ್ತೆಯಲ್ಲಿ ಸಂಚಾರದಟ್ಟನೆ ಉಂಟಾಗದಂತೆ ಪೊಲೀಸರೊಂದಿಗೆ ಸಹಕರಿಸುವಂತೆ ಕೇಳಿಕೊಂಡರು.
ವಾಹನ ನಿಲ್ಲಿಸುವವರು ನಿಯಮವನ್ನು ಪಾಲಿಸದಿದ್ದಲ್ಲಿ ಜನವರಿ 1 ರಿಂದ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸುಳ್ಯ ರೋಟರಿ ಅಧ್ಯಕ್ಷ ರೋ.ಆನಂದ ಖಂಡಿಗ ,ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ಮಾತನಾಡಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಈ ಕಾರ್ಯಕ್ರಮ ಬಹಳ ಉತ್ತಮ ರೀತಿಯಲ್ಲಿ ಜನಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸುಳ್ಯ ಕೈಗಾರಿಕೆ ಮತ್ತು ವಾಣೀಜ್ಯೋದ್ಯಮಿಗಳ ಸಂಘದ ಕಾರ್ಯದರ್ಶಿ ಡಿ.ಎಸ್.ಗಿರೀಶ್, ದ.ಕ.ಜಿಲ್ಲಾ ಮೀಫ್ ಉಪಾಧ್ಯಕ್ಷ ಕೆ.ಎಂ. ಮುಸ್ತಫ, ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ಗಿರೀಶ್ ನಾರ್ಕೋಡು,ಪ್ರಮುಖರಾದ ಸಿಎ ಗಣೇಶ್ ಭಟ್ ಪಿ, ಅಬ್ದುಲ್ ಹಮೀದ್‌ ಜನತಾ, ಗಿರಿಜಾ ಶಂಕರ ತುದಿಯಡ್ಕ ಮುಕುಂದ ನಾರ್ಕೋಡು, ಶಿವಪ್ರಕಾಶ್, ಬಿ ಎಂ ಎಸ್ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತ್ತಡ್ಕ, ಮತ್ತು ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೇಕರ್, ವಿಜಯಕುಮಾ‌ರ್ ಉಬರಡ್ಕ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣಾ ಪರಿಚಯ:


ಕಾರ್ಯಕ್ರಮದ ಬಳಿಕ ಜಾಥಾ ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸುಳ್ಯ ಪೊಲೀಸ್ ಠಾಣೆಯ ಒಳಭಾಗಕ್ಕೆ ಕರೆದೋಯ್ದು ಪೊಲೀಸ್ ಠಾಣಾ ಪರಿಚಯವನ್ನು ನೀಡಿ ಠಾಣೆಯಲ್ಲಿ ನಡೆಯುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕುತೂಹಲ ಭರಿತರಾಗಿ ಠಾಣಾ ಪರಿಸರ ಮತ್ತು ಅಲ್ಲಿಯ ಕೆಲಸ ಕಾರ್ಯಗಳ ಬಗ್ಗೆ ತಿಳಿದುಕೊಂಡರು. ಎಸ್ ಐ ಈರಯ್ಯ ದೂಂತೂರ್
ಪೊಲೀಸ್ ಸಿಬ್ಬಂದಿಗಳ ಮತ್ತು ಅಧಿಕಾರಿಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ್ದರು. ಅವರವರ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿಗಳು ಸಿಬ್ಬಂದಿ ವರ್ಗದವರು, ಗೃಹರಕ್ಷಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.