ಪುತ್ತೂರು, ಮಂಗಳೂರು ಸೇರಿ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೃಷಿಕ ಉದಯ ಅಮ್ಮಣ್ಣಾಯ ನಿರ್ಮಾಣದ ಚಿತ್ರ ಕ್ಲಾಂತ

0

ಬೆಂಗಳೂರಿನಲ್ಲಿ ಸುಮಾರು 20 ವರ್ಷಗಳಷ್ಟು ಸಮಯ ಉದ್ಯಮಿಯಾಗಿ ಬಳಿಕ ಕೃಷಿ ಚಟುವಟಿಕೆಗಳಿಗಾಗಿ ಹುಟ್ಟೂರಿಗೆ ಆಗಮಿಸಿದ ಇದೀಗ ಚಿತ್ರ ನಿರ್ಮಾಣದತ್ತ ಮುಖ ಮಾಡಿರುವ ಉದಯ ಅಮ್ಮಣ್ಣಾಯರ ಚೊಚ್ಚಲ ಚಲನಚಿತ್ರ ಕ್ಲಾಂತ ಜ. 19ರಂದು ಬಿಡುಗಡೆಗೊಂಡು ರಾಜ್ಯದಾದ್ಯಂತ ಸುಮಾರು 45 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪುತ್ತೂರಿನ ಜಿ.ಎಲ್. ಆಚಾರ್ಯ ಮಾಲ್ ನ ಭಾರತ್ ಸಿನಿಮಾ ಮಂದಿರದಲ್ಲಿ ಮತ್ತು ಮಂಗಳೂರಿನ ಪಿ.ವಿ.ಆರ್. ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಬಳ್ಪ ಗ್ರಾಮದ ಕೇನ್ಯದವರಾದ ಉದಯ ಅಮ್ಮಣ್ಣಾಯರು ನಿರ್ಮಾಣ ಮಾಡಿದ ಚಿತ್ರದಲ್ಲಿ ದಗಲ್ ಬಾಜಿಲು ಚಿತ್ರದ ನಾಯಕ ವಿಘ್ನೇಶ್ ನಾಯಕ ನಟನಾಗಿ, ಸಂಗೀತ ಭಟ್, ಶೋಭರಾಜ್, ವೀಣಾ ಸುಂದರ್, ಸಂಗೀತ, ದೀಪಿಕಾ, ಪ್ರವೀಣ್ ಜೈನ್, ಸ್ವಪ್ನಾ ಶೆಟ್ಟಿಗಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುತ್ತಾರೆ. ಚಿತ್ರಕ್ಕೆ ವೈಭವ ಪ್ರಶಾಂತ್ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ತುಳುನಾಡಿನ ಭೂತಾರಾಧನೆ, ನಂಬಿಕೆಯ ಆಧಾರದದಲ್ಲಿ ಚಿತ್ರ ನಿರ್ಮಾಣಗೊಂಡಿದ್ದು, ತುಳುನಾಡಿನ ಜನರ ಭಾವನೆಗಳನ್ನು ಬಿಂಬಿಸಿದೆ.

ಸುಮಾರು 40 ದಿವಸ ಕಾಡಿನಲ್ಲೇ ಚಿತ್ರೀಕರಣಗೊಂಡ ಚಿತ್ರ ಇದಾಗಿದ್ದು, ಕೃಷಿಕರು ಚಿತ್ರೋದ್ಯಮದ ಕಡೆಗೆ ಮನ ಮಾಡಿರುವುದನ್ನು ಕೃಷಿಕರೂ, ಚಿತ್ರ ಪ್ರೇಮಿಗಳೂ ಬೆಂಬಲಿಸುವರೆಂಬ ನಂಬಿಕೆಯಿಂದ ಚಿತ್ರ ನಿರ್ಮಾಣ ಮಾಡಿರುವುದಾಗಿ ಉದಯ ಅಮ್ಮಣ್ಣಾಯರು ಅಭಿಪ್ರಾಯ ಪಟ್ಟಿದ್ದಾರೆ.