ಉಸ್ತುವಾರಿ ಸಚಿವರ ಜನತಾದರ್ಶನ ಕಾರ್ಯಕ್ರಮ

0

ತನ್ನ ಆಗಮನಕ್ಕೂ ಮುಂಚೆಯೇ ಜನತಾದರ್ಶನ ಕಾರ್ಯಕ್ರಮ ಆರಂಭಿಸಿದ್ದಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಸಮಾಧಾನ ಸೂಚಿಸಿದ ಹಾಗೂ ಸರಿಯಾದ ಸಮಯಕ್ಕೆ ಜನರ ಸಮಸ್ಯೆ ಆಲಿಸಬೇಕೆಂದು ಆರಂಭಿಸಿರುವುದಾಗಿ ಉಸ್ತುವಾರಿ ಸಚಿವರು ಸಮರ್ಥನೆ ನೀಡಿದ ಘಟನೆ ನಡೆಯಿತು.

ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ರವರು ಸರಿಯಾಗಿ 11 ಗಂಟೆಯ ವೇಳೆ ಕೆವಿಜಿ ಪುರಭವನಕ್ಕೆ ಆಗಮಿಸಿದ ಬಳಿಕ ಕಾರ್ಯಕ್ರಮ ಆರಂಭಗೊಂಡಿತು. ಈ ವೇಳೆ ಶಾಸಕರು ಆಗಮಿಸಿರಲಿಲ್ಲ.

ಕಾರ್ಯಕ್ರಮಕ್ಕೆ ಪುತ್ತೂರು ಎ.ಸಿ. ಯವರು ಸ್ವಾಗತ ಮಾಡುತ್ತಿದ್ದ ವೇಳೆ ಕಾರ್ಯಕ್ರಮಕ್ಕೆ ಬಂದ ಭಾಗೀರಥಿ ಮುರುಳ್ಯರವರು ಎ.ಸಿ.ಯವರಲ್ಲೆ ಅಸಮಾಧಾನ ತೋಡಿಕೊಂಡರು. ನಾನು ಶಾಸಕಿ ಅಲ್ವಾ? ನಾನು ಬರುವವರೆಗೆ ಕಾಯಬಹುದಿತ್ತಲ್ವಾ? ಬಾಳಿಲದಲ್ಲಿ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದೀರಿ, ನಾನು ಅಲ್ಲಿ ಕಾಯುತ್ತಿದ್ದೆ. ಸರಿಯಾದ ಮಾಹಿತಿಯನ್ನೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತ ವೇದಿಕೆಯಲ್ಲಿ ಬಂದು ಕುಳಿತರು.

ಉದ್ಘಾಟನೆ ಬಳಿಕ ಶಾಸಕಿಯವರಿಗೆ ಮಾತನಾಡುವ ಅವಕಾಶ ನೀಡಲಾಯಿತು. ಈ ವೇಳೆ ತನ್ನ ಮಾತಿನಲ್ಲೂ ಅಸಮಾಧಾನ ತೋಡಿಕೊಂಡ ಶಾಸಕರು , ಬಾಳಿಲದಲ್ಲಿ ಒಮ್ಮೆ ಉದ್ಘಾಟನೆಗೊಂಡ ಹಾಸ್ಟೆಲ್‌ ಕಟ್ಟಡ ಮತ್ತೆ ಉದ್ಘಾಟನೆ ಇಟ್ಟುಕೊಂಡಿದ್ದೀರಿ. ಅಲ್ಲೇ ಕಾರ್ಯಕ್ರಮ ಅಂತ ನಾನು ಅಲ್ಲಿದ್ದೆ. ಸರಿಯಾದ ಮಾಹಿತಿಯನ್ನೂ ನೀಡಲಾಗಿಲ್ಲ. ತಾನು ಈ ಕ್ಷೇತ್ರದ ಶಾಸಕಿ. ಓರ್ವ ಮಹಿಳೆ. ಈ ಕಾರಣಕ್ಕಾದರೂ ಸ್ವಲ್ಪ ಹೊತ್ತು ಕಾಯಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಆ ಬಳಿಕ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು, ಶಾಸಕಿಯವರು ಗಮನಹರಿಸಬೇಕು. ಸರಿಯಾದ ಸಮಯಕ್ಕೆ ಜನತಾದರ್ಶನ ಆರಂಭಿಸಬೇಕೆಂದು ಬೆಳಗಿನ ಉಪಹಾರವನ್ನು ಮಂಗಳೂರಿನಲ್ಲಿ ಮಾಡದೆ ಇಲ್ಲಿಗೆ ಬಂದಿದ್ದೇವೆ. ದಾರಿಯಲ್ಲಿ ಒಂದೆರಡು ಕಡೆ ನಿಲ್ಲಿಸಿದಾಗಲೂ ಸಚಿವರು ಜನರನ್ನು ಕಾಯಿಸಬಾರದು . ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗಬೇಕೆಂದು ಹೇಳಿ ಬಂದಿದ್ದೇವೆ ಎಂದು ಹೇಳಿದರು.

ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ರವರೂ, ತನ್ನ ಭಾಷಣದ ಕೊನೆಗೆ ಈ ಬಗ್ಗೆ ಪ್ರಸ್ತಾಪಿಸಿ, ಶಾಸಕರಿಗೆ ಏನೋ ಗೊಂದಲವಾಗಿದೆ. ನಾವೇನು ಗೊಂದಲ ಮಾಡಿಲ್ಲ. ಜನರನ್ನು ಕಾಯಿಸಬಾರದು, ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭಿಸಬೇಕೆಂಬ ಕಾರಣಕ್ಕೆ ಬಂದು ಕಾರ್ಯಕ್ರಮ ಆರಂಭಿಸಿದ್ದೇವೆ. ಎಲ್ಲರ ಸಹಕಾರದಿಂದ ತಾಲೂಕಿನ ಅಭಿವೃದ್ಧಿ ಆಗಬೇಕಾಗಿದೆ. ಎಂದು ಹೇಳಿದರು.