ಅಜ್ಜಾವರ ಮೇನಾಲ ಉರೂಸ್ ಸೌಹಾರ್ದ ಸಮ್ಮೇಳನ

0

ಮೇನಾಲ ಉರೂಸ್ ಸಮಾರಂಭದಲ್ಲಿ ಸೌಹಾರ್ದತೆ ಎದ್ದು ಕಾಣುತ್ತಿದೆ : ಎಂ.ಬಿ.ಸದಾಶಿವ

ಪ್ರೀತಿ, ವಿಶ್ವಾಸ, ಸೌಹಾರ್ದತೆ ಮಾನವ ಬದುಕಿಗೆ ಜೀವಾಳ. ಈ ಸೌಹಾರ್ದತೆಯ ನೆಲೆಗಟ್ಟಿನಲ್ಲಿ ನಮ್ಮ ಸಮಾಜ, ದೇಶ ನೆಲೆ‌ ನಿಂತಿದೆ. ಆದುದರಿಂದ ಸೌಹಾರ್ದತೆಯ ಬದುಕನ್ನು ಮುನ್ನಡೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎಂ.ಬಿ.ಸದಾಶಿವ ಹೇಳಿದ್ದಾರೆ. ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡ ಸೌಹಾರ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಅಜ್ಜಾವರ ಮೇನಾಲ ಸೌಹಾರ್ದತೆ ಸಾರುವ ಪುಣ್ಯ ಸ್ಥಳ. ತಲ-ತಲಾಂತರಗಳಿಂದ ಇಲ್ಲಿ ನೆಲೆ ನಿಂತಿರುವ ಸೌಹಾರ್ದತೆ ಸಮಾಜಕ್ಕೆ ಮಾದರಿ ಎಂದು ಅವರು ಹೇಳಿದರು.


ಕರ್ನಾಟಕ ರಾಜ್ಯ ಎಸ್.ಕೆ.ಎಸ್.ಎಸ್.ಎಫ್ ಟ್ರೆಂಡ್ ಚೆಯರ್‌ಮೆನ್ ಕೆ.ಎಂ.ಇಕ್ಬಾಲ್ ಬಾಳಿಲ ಮಾತನಾಡಿ’ ನಮ್ಮ ಪ್ರತಿಯೊಂದು ಚರಿತ್ರೆಯಲ್ಲಿಯೂ ಸೌಹಾರ್ದತೆಯ ಸಂದೇಶ ಇದೆ. ಆದುದರಿಂದ ‌ಮನುಷ್ಯನಾದವನು ಸೌಹಾರ್ದತೆಯಿಂದ ಬಾಳಿ ಬದುಕಬೇಕು ಎಂದರು. ಪ್ರತಿಯೊಂದು ಧರ್ಮವೂ ಮಾನವೀಯತೆಯನ್ನು ಪ್ರತಿಪಾದಿಸುತ್ತದೆ ಎಂದು ಅಭಿಪ್ರಾಯಪಟ್ಟರು.


ಮೇನಾಲ ದರ್ಗಾ ಶರೀಫ್‌‌ ಸ್ಥಳ ಮೊಕ್ತೇಸರರಾದ ಎಂ.ಗುಡ್ಡಪ್ಪ ರೈ ಅಧ್ಯಕ್ಷತೆ ವಹಿಸಿದ್ದರು. ಅಜ್ಜಾವರ ಮೇನಾಲ ಎಂಜೆಎಂ ಖತೀಬರಾದ ಅಬ್ದುಲ್ ಖಾದರ್ ಮುನವ್ವರಿ ದುಃವಾ ನೆರವೇರಿಸಿದರು. ಹನೀಫ್ ಮೌಲವಿ, ಸುಳ್ಯ ತಾಲೂಕು ಮದ್ರಸಾ‌ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್‌ ಮಹಮ್ಮದ್ ಸಂಪಾಜೆ, ಅಜ್ಜಾವರ ಮೇನಾಲ ಜಮಾ ಅತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಎ, ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ, ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ, ಖಜಾಂಜಿ ಶರೀಫ್‌ ರಿಲಾಕ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಫಿ ದಾರಿಮಿ‌ ಅಜ್ಜಾವರ ಸ್ವಾಗತಿಸಿ, ಮುಹಮ್ಮದ್ ರಫೀಕ್ ಅಜ್ಜಾವರ ವಂದಿಸಿದರು.