ಅಕ್ಕಿ ರುಬ್ಬುತ್ತಿದ್ದ ಸಂದರ್ಭ ಗ್ರೈಂಡರ್ ನಲ್ಲಿ ಬೆಂಕಿ

0

ಗ್ರೈಂಡರ್ ಸಂಪೂರ್ಣ ಭಸ್ಮ : ತಪ್ಪಿದ ಅನಾಹುತ

ಸುಳ್ಯದ ಹಳೆಗೇಟು ಬಳಿ ನಡೆದ ಘಟನೆ

ಹಳೆಗೇಟು ರಂಗಮನೆ ಸಮೀಪ ಮನೆಯೊಂದರಲ್ಲಿ ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬುತ್ತಿದ್ದ ಸಂದರ್ಭ ಗ್ರೈಂಡರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಗ್ರೈಂಡರ್ ಸಂಪೂರ್ಣ ಭಸ್ಮಗೊಂಡ ಘಟನೆ ಇಂದು ಸಂಜೆ ವರದಿಯಾಗಿದೆ.

ಹಳೆಗೇಟು ಗುಂಡಿಯಡ್ಕ ಜಿ ಸಾಧಿಕ್ ಎಂಬುವರ ಮನೆಯಲ್ಲಿ ಮನೆಯವರು ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬಲು ಹಾಕಿ ಮತ್ತೊಂದು ಕೋಣೆಯಲ್ಲಿ ಮನೆ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ವಯರ್ ಸುಟ್ಟುಹೋದ ವಾಸನೆ ಬಂದಿದ್ದು, ಈ ಸಂದರ್ಭ ಮನೆಯವರು ಅಡಿಗೆ ಕೋಣೆಗೆ ಹೋಗಿ ನೋಡಿದಾಗ ಗ್ರೈಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.


ನೋಡು ನೋಡುತ್ತಿದ್ದಂತೆ ಏಕಾಏಕಿ ಬೆಂಕಿ ಬೃಹತಾಕಾರದಲ್ಲಿ ಬೆಳೆದು ಅಡಿಗೆ ಕೋಣೆಯಲ್ಲಿ ಸಂಪೂರ್ಣ ವ್ಯಾಪಿಸಿಕೊಂಡಿತು.


ಆತಂಕಗೊಂಡ ಮನೆಯವರು ಕೂಡಲೆ ಹೋಗಿ ಮೈನ್ ಸ್ವಿಚ್ ಓಫ್ ಮಾಡಿದ್ದು ಹೊತ್ತಿ ಉರಿಯುತ್ತಿದ್ದ ಗ್ರೈಂಡರ್ ನ ಪಕ್ಕದಲ್ಲಿದ್ದ ಗ್ಯಾಸ್ ಸಿಲಿಂಡರನ್ನು ಮನೆಯ ಹೊರಗೆ ತಂದರು.


ಇದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನೆಯಿಂದ ಗ್ರೈಂಡರ್ ಸುಟ್ಟು ಭಸ್ಮವಾಗಿದ್ದು,ಈ ಗ್ರೈಂಡರನ್ನು ಕಳೆದ ಐದು ತಿಂಗಳ ಹಿಂದೆಯಷ್ಟೇ ಖರೀದಿಸಲಾಗಿತ್ತು ಎಂದು ಮನೆಯವರು ಹೇಳಿದ್ದಾರೆ.