ಪ್ರತೀ ತಿಂಗಳ 1 ರಿಂದ 10 ನೇ ತಾರೀಕಿನ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ

0

ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆಗೆ ಸಚಿವರ ಉತ್ತರ

ಎ.ಪಿ.ಎಲ್. ಬಿಪಿಎಲ್ ಪಡೆದುಕೊಂಡಿರುವ ಸಾರ್ವಜನಿಕರಿಗೆ ಪಡಿತರ ಚೀಟಿ ತಿದ್ದುಪಡಿ ಅಗತ್ಯವಿದ್ದಾಗ ನಿರಂತರವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಸರ್ಕಾರಕ್ಕೆ ಏನಾದರೂ ಸಮಸ್ಯೆ ಇದೆಯೇ ಎಂದು‌ ಶಾಸಕಿ ಭಾಗೀರಥಿ ಮುರುಳ್ಯರು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದು, ಈ ಪ್ರಶ್ನೆಗೆ ಆಹಾರ‌ ಸಚಿವರು ಉತ್ತರಿಸಿದ್ದಾರೆ.

ಆಹಾರ ದತ್ತಾಂಶವನ್ನು ನಿರ್ವಹಿಸುತ್ತಿರುವ ಸರ್ವರ್ ಗಳಿಂದ ಮತ್ತು ಆಹಾರ ಅಪ್ಲಿಕೇಶನ್ ನಿಂದ ಕೇಂದ್ರ ಸರ್ಕಾರಕ್ಕೆ ಪ್ರತಿ ತಿಂಗಳು ಪಡಿತರ ಚೀಟಿಗಳ ವಿವರ ಮತ್ತು ವಿತರಣಾ ಡೇಟಾವನ್ನು ಆನ್‌ಲೈನ್ ಮುಖಾಂತರ ಸಲ್ಲಿಸಲಾಗುತ್ತಿದೆ. ಇದರೊಂದಿಗೆ ಪ್ರತಿ ತಿಂಗಳು ಆನ್‌ಲೈನ್ ಮುಖಾಂತರ ಪಡಿತರ ಹಂಚಿಕೆಯನ್ನು ಜನರೇಟ್ ಮಾಡಲು ಸರ್ವರ್ ಬಳಕೆಯಾಗುತ್ತಿದೆ. ತದನಂತರ ಪ್ರತಿ ಮಾಹೆಯ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸರ್ವರ್ ಬಳಕೆಯಾಗುತ್ತಿದೆ. ಈ ಕಾರಣಗಳಿಂದಾಗಿ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಆದಾಗ್ಯೂ ಪ್ರತಿ ಮಾಹೆ 1 ರಿಂದ 10 ನೇ ತಾರೀಖಿನವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಪ್ರತೀ‌ಮಾಹೆಯ ದಿನಾಂಕ 17ರಿಂದ 25ರವರೆಗೆ
ಸರ್ವರ್ ಮತ್ತು ಆಹಾರ ಅಪ್ಲಿಕೇಶನ್ ಅನ್ನು DBT ಅನ್ನಭಾಗ್ಯ ಯೋಜನೆಗೆ ಉಪಯೋಗಿಸಿಕೊಳ್ಳಲಾಗುತ್ತಿದೆ.

ಇದರಿಂದ ತಿಂಗಳ 20 ರಿಂದ 30 ರವರೆಗೆ ಸರ್ವರ್ ಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿರುವುದರಿಂದ ಪಡಿತರ ಚೀಟಿ ತಿದ್ದುಪಡಿಗೆ
ನಿರಂತರವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವುದು ಕಷ್ಟ ಸಾಧ್ಯವಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಬೆಂಗಳೂರು, ಮೈಸೂರು, ಕಲಬುರಗಿ, ಪ್ರದೇಶಗಳಿಗೆ 3 ಸರ್ವರ್ ಗಳನ್ನು ಬಳಸಲಾಗುತ್ತಿದೆ. ಈಗಿನ ಸರ್ವರ್ ಗಳು ಹೆಚ್ಚಿನ ಒತ್ತಡ ಹೊರಲು ಸಾಧ್ಯವಾಗದ ಕಾರಣದಿಂದ ಉದ್ಭವಿಸಿದ ಈ ಸಮಸ್ಯೆಯನ್ನು ನಿವಾರಿಸಲು ಆಹಾರ ತಂತ್ರಾಂಶದ ಸರ್ವ‌ರ್ ಗಳನ್ನು ಎನ್. ಐ. ಸಿ.ಯಿಂದ ಕೆ.ಎಸ್.ಡಿ.ಸಿಗೆ ವರ್ಗಾಯಿಸಲಾಗುತ್ತಿದೆ. ಅದರಂತೆ ಈ ತಂತ್ರಾಂಶದ Migration ಕಾರ್ಯವು ಪ್ರಗತಿ ಯಲ್ಲಿರುತ್ತದೆ, ಎನ್. ಐ. ಸಿ ಯಿಂದ ಕೆಎಸ್ಡಿಸಿ‌ ಗೆ Migration F ಪೂರ್ಣಗೊಂಡ ನಂತರ ಪಡಿತರ ಚೀಟಿಯಲ್ಲಿನ ಹೆಸರು ಸೇರ್ಪಡೆ/ತಿದ್ದುಪಡಿ ಬಗ್ಗೆ ನಿರಂತರವಾಗಿ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ಉತ್ತರಿಸಿದರು.