ಎಂ.ಪಿ. ಚುನಾವಣೆ ಘೋಷಣೆಗೆ ಇನ್ನೊಂದೇ ವಾರ

0

ದೇಶದ ಲೋಕಸಭೆಗೆ ಎಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಮೂರು ಹಂತಗಳಲ್ಲಿ ಚುನಾವಣೆ ನಡೆಯುವುದೋ ಅಥವಾ ಇಡೀ ದೇಶದಲ್ಲಿ ಒಂದೇ ದಿನ ಚುನಾವಣೆ ನಡೆಸುವಂತಹ ಸಾಹಸಕ್ಕೆ ಚುನಾವಣಾ ಆಯೋಗ ಕೈಹಾಕುವುದೋ ಗೊತ್ತಿಲ್ಲ. ಆದರೆ ಆ ರೀತಿಯ ಸಿದ್ಧತೆಯೊಂದು ನಡೆಸುತ್ತಿರುವ ಮಾಹಿತಿ ಇದೆ.

ಎಪ್ರಿಲ್ ತಿಂಗಳ ಕೊನೆಯೊಳಗೆ ಚುನಾವಣೆ ನಡೆಯುವುದರಿಂದ ಇದೇ ಮಾರ್ಚ್ ೧೦ ರೊಳಗೆ ದಿನಾಂಕ ಘೋಷಣೆಯಾಗುವುದಾಗಿ ಎಲ್ಲರೂ ಹೇಳುತ್ತಿದ್ದಾರೆ. ಈಗಾಗಲೇ ೧೯೫ ಸೀಟುಗಳಿಗೆ ಅಭ್ಯರ್ಥಿಗಳನ್ನು ಆಡಳಿತಾರೂಢ ಬಿಜೆಪಿ ಘೊಷಿಸಿರುವುದರಿಂದ ಅತಿ ಶೀಘ್ರದಲ್ಲಿ ಚುನಾವಣಾ ದಿನ ಘೋಷಣೆಯಾಗುವುದು ದಿಟ.


ಚುನಾವಣೆ ನಡೆಸಲು ಆಡಳಿತ ಯಂತ್ರಪೂರ್ಣ ಸಿದ್ಧಗೊಂಡಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ನಡೆಯುತ್ತಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ೨,೦೬೦೦೦ ಮಂದಿ ಮತದಾರರಿದ್ದು, ಮತದಾನ ಕೇಂದ್ರಗಳ ಸಂಖ್ಯೆ ೨೩೧ ರಿಂದ ೨೩೩ ಕ್ಕೆ ಏರಿದೆ. ಗಾಂಧಿನಗರದಲ್ಲಿ ೧೫೦೦ಕ್ಕಿಂತ ಹೆಚ್ಚು ಮತದಾರ ಸಂಖ್ಯೆ ಇದ್ದ ಬೂತನ್ನು ಎರಡು ಬೂತ್‌ಗಳನ್ನಾಗಿ ವಿಂಗಡಿಸಿದರೆ, ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಮತದಾನ ಕೇಂದ್ರ ವ್ಯಾಪ್ತಿಯಲ್ಲಿದ್ದ ಮುಂಡೋಳಿಮೂಲೆಯ ಜನರಿಗೆ ಮತದಾನಕ್ಕೆ ಹೋಗಲು ದೂರವಾಗುವ ಕಾರಣಕ್ಕಾಗಿ ಅವರನ್ನು ಮೇನಾಲದ ಜಾರತಡ್ಕ ಬೂತ್‌ಗೆ ಸೇರಿಸಿ ಇನ್ನೊಂದು ಬೂತ್ ರಚಿಸಲಾಗಿದೆ.

ಈ ಬಾರಿಯ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿತನ ಹೊಸಬರ ಪಾಲಾಗಬಹುದೇ ಅಥವಾ ಹೊಸಬ – ಹಳಬರ ಜಿದ್ದಿನ ಕಣವಾಗುವುದೇ ಎಂಬ ಕುತೂಹಲ ಮೂಡಿದೆ.


ಬಿಜೆಪಿಯಿಂದ ೧೫ ವರ್ಷಗಳಿಂದ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ರವರಿಗೇ ಮತ್ತೆ ಅವಕಾಶ ದೊರೆಯಬಹುದೆಂಬ ಅಭಿಪ್ರಾಯ ಹೆಚ್ಚಾಗಿ ಕೇಳಿ ಬರುತ್ತಿದ್ದರೂ, ಅಭ್ಯರ್ಥಿ ಬದಲಿಸಿ ಹೊಸಬರಿಗೆ ಕೊಡುವುದಿದ್ದರೆ ಬೃಜೇಶ್ ಚೌಟ, ಕೇಶವ ಬಂಗೇರ, ಅರುಣ್ ಶ್ಯಾಮ್ ಮತ್ತು ಕೃಷ್ಣಪ್ರಸಾದ್ ಮಡ್ತಿಲರ ಜತೆಗೆ ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿಯವರ ಹೆಸರು ಕೂಡಾ ಕೇಳಿ ಬರತೊಡಗಿದೆ.


ಕಾಂಗ್ರೆಸ್‌ನಿಂದ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಸ್ಪರ್ಧಿಸುವ ಸಾಧ್ಯತೆ ಹೆಚ್ಚೆಂದು ಹೇಳಲಾಗುತ್ತಿದ್ದು, ಅವರು ಉಡುಪಿ ಅಭ್ಯರ್ಥಿಯಾದರೆ ದ.ಕ. ಕ್ಷೇತ್ರಕ್ಕೆ ಬಿಲ್ಲವ ಅಥವಾ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಪರಿಶೀಲಿಸುತ್ತಿದೆ.


ಉಡುಪಿ ಕ್ಷೇತ್ರದಲ್ಲಿ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮಂಗಳೂರಿನಿಂದ ಸುಳ್ಯ ವರೆಗಿನ ಇಡೀ ದ.ಕ. ಜಿಲ್ಲೆಯ ವ್ಯಾಪ್ತಿ ಹೊಂದಿರುವ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಹುತೇಕ ಕಾರ್ಯಕರ್ತರ ಪರಿಚಯ ಮತ್ತು ಸಂಪರ್ಕವಿರುವ ಮಾಜಿ ಸಚಿವ ಬಿ.ರಮಾನಾಥ ರೈಯವರನ್ನು ಕಾಂಗ್ರೆಸ್ ಪರಿಗಣಿಸಬಹುದು. ಬಿಲ್ಲವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾದರೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಶ್ರೀಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ರವರ ಹೆಸರು ಬಲವಾಗಿ ಕೇಳಿ ಬರುತ್ತಿತ್ತು. ಈ ವಾರದ ಬೆಳವಣಿಗೆಯಾಗಿ ಎಂ.ಎಲ್.ಸಿ. ಹರೀಶ್ ಕುಮಾರ್, ಮತ್ತು ಮಾಜಿ ಕಾರ್ಫೋರೇಟರ್ ಹಾಗೂ ವಾಗ್ಮಿ ಪ್ರತಿಭಾ ಕುಳಾಯಿ ಯವರ ಹೆಸರು ಜೋರಾಗಿ ಕೇಳಿ ಬರುತ್ತಿದೆ.


ಈ ನಡುವೆ ಜಿಲ್ಲೆಯ ಒಕ್ಕಲಿಗ ಸಮುದಾಯದವರಿಗೆ ಈ ಬಾರಿ ಅವಕಾಶ ನೀಡಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿರುವುದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಒಕ್ಕಲಿಗ ಯುವ ಅಭ್ಯರ್ಥಿಗಳ ತಲಾಶ್‌ನಲ್ಲಿದೆ ಎಂದು ಹೇಳಲಾಗುತ್ತಿದೆ. ದ.ಕ. ಜಿಲ್ಲಾ ಒಕ್ಕಲಿಗ ಯುವ ಘಟಕದ ಉಪಾಧ್ಯಕ್ಷ ಹಾಗೂ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು ಇದರ ನಿರ್ದೇಶಕರಾಗಿರುವ ಕಿರಣ್ ಬುಡ್ಲೆಗುತ್ತು ಹೆಸರು ಮಾಧ್ಯಮಗಳಲ್ಲಿ ಬಿತ್ತರಗೊಳ್ಳ ತೊಡಗಿದೆ.


ಬಿಜೆಪಿಯ ಕೃಷ್ಣಪ್ರಸಾದ್ ಮಡ್ತಿಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿದ್ದ, ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲರ ಹೆಸರು ಸಂಘದ ವಲಯದಿಂದ ಬಿಜೆಪಿಯ ಬೈಠಕ್‌ನಲ್ಲಿ ಪ್ರಸ್ತಾಪಿಸಲ್ಪಟ್ಟಿದೆ ಎಂಬ ಮಾಹಿತಿ ಇದೆ.


ಐವರ್ನಾಡಿನ ದಿ| ಮಡ್ತಿಲ ಜನಾರ್ದನ ಗೌಡ – ವಾಗ್ದೇವಿ ದಂಪತಿಯ ಪುತ್ರರಾದ ಕೃಷ್ಣಪ್ರಸಾದ್, ಬಿ.ಎ. ಎಲ್.ಎಲ್.ಬಿ ಪದವೀಧರರು. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ೨೦೧೮ರಿಂದ ಕ್ಯಾಂಪ್ಕೊ ನಿರ್ದೇಶಕರಾಗಿದ್ದಾರೆ. ಸಹಕಾರ ಭಾರತಿಯ ಜಿಲ್ಲಾಧ್ಯಕ್ಷರಾಗಿದ್ದ ಅವರು ಈಗ ಸಹಕಾರ ಭಾರತಿಯ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಆರೆಸ್ಸೆಸ್ ತಾಲೂಕು ಸಹ ಸಂಪರ್ಕ ಪ್ರಮುಖ್ ಆಗಿ, ಸಂಪರ್ಕ ಪ್ರಮುಖ್ ಆಗಿ ದುಡಿದ ಅನುಭವವಿದೆ.


ಕಾಂಗ್ರೆಸ್‌ನ ಕಿರಣ್ ಬುಡ್ಲೆಗುತ್ತು ಸುಳ್ಯ ತಾಲೂಕು ಗುತ್ತಿಗಾರು ನಾಲ್ಕೂರಿನ ದಿ|ಎಂ.ಬಿ. ದೇವಿದಾಸ್ ಗೌಡ – ಪುಷ್ಪಾವತಿಯವರ ಪುತ್ರ ಎಂ.ಬಿ. ದೇವಿಕಿರಣ್ ಸಾಮಾಜಿಕ ರಂಗದಲ್ಲಿ ಕಿರಣ್ ಬುಡ್ಲೆಗುತ್ತು ಎಂದೇ ಪರಿಚಿತರು. ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಇವರು ಮಂಗಳೂರಿನಲ್ಲಿ ಸ್ವತಂತ್ರ ಉದ್ಯಮ ನಡೆಸುತ್ತಿದ್ದಾರೆ. ಸುಳ್ಯ ತಾಲೂಕು ಎನ್.ಎಸ್.ಯು.ಐ. ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಎನ್.ಎಸ್.ಯು.ಐ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಯುವ ಕಾಂಗ್ರೆಸ್ ಚುನಾಯಿತ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಕಿರಣ್, ಮಂಗಳೂರು ಒಕ್ಕಲಿಗರ ಯುವ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಒಕ್ಕಲಿಗ ಯುವ ಸಂಘದ ಉಪಾಧ್ಯಕ್ಷರಾಗಿ, ಮಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಸ್ಥಾಪಿಸಿದ – ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ನಿರ್ದೇಶಕ ಹಾಗೂ ಎಸ್ಸೆಲ್ ಹೈಟ್ಸ್ ಎಸೋಸಿಯೇಶನ್ (ರಿ) ದೇರೆಬೈಲು ಎಂಬ ಸೊಸೈಟಿಯ ಅಧ್ಯಕ್ಷರೂ ಆಗಿದ್ದಾರೆ.