ಅರೆಭಾಷೆ ಬೀಡಲ್ಲಿ ಒತ್ತೆಕೋಲದ ಪರ್ವ

0

ಸುಳ್ಯ, ಕಾಸರಗೋಡು, ಕೊಡಗು ಗಡಿಭಾಗದಲ್ಲಿ ಸದ್ಯ ವಿಷ್ಣುಮೂರ್ತಿ ಕೋಲದ ಪರ್ವ. ಅದರಲ್ಲೂ ಹೆಚ್ಚಾಗಿ ಅರೆಭಾಷೆ ಬೀಡಲ್ಲಿ ಈ ಸಮಯದಲ್ಲಿ ಒತ್ತೆಕೋಲ ಅಥವಾ ಬೈಲಕೋಲದ ಸರದಿ. ದೈವರಾಧನೆಯಲ್ಲಿ ಕಂಡುಬರುವ ವಿಶಿಷ್ಟ ಆಚರಣೆಯಲ್ಲಿ ವಿಷ್ಣುಮೂರ್ತಿ ಕೋಲವು ಒಂದು. ಮೂಲತಃ ಕೇರಳದಲ್ಲಿ ಈ ದೈವರಾಧನೆಯನ್ನು ಹೆಚ್ಚಾಗಿ ಕಾಣಬಹುದು. ಆದರೆ ಬರುಬರುತ್ತಾ ನಂಬಿಕೆಯ ಆಧಾರದ ಮೇಲೆ ಈ ದೈವರಾಧನೆ ಗಡಿನಾಡಿಗೂ ಹಬ್ಬಿದೆ. ಸುಳ್ಯ ತಾಲೂಕಿನಲ್ಲಿ ವಿಷ್ಣುಮೂರ್ತಿಯ ಆರಾಧಕರು ಹೆಚ್ಚಿನವರಿದ್ದಾರೆ.

ನರಸಿಂಹಾವತಾರ

ವಿಷ್ಣು ಮೂರ್ತಿಯು ನರಸಿಂಹನ ಅವತಾರ. ಭಕ್ತಪ್ರಹಲ್ಲಾದನನ್ನು ಉಳಿಸಿ, ಹಿರಣ್ಯಕಶಿಪುವನ್ನು ಕೊಲ್ಲಲು ತಾಳಿದ ನರಸಿಂಹಾವತಾರದ ರೌದ್ರ ಅವತಾರವೇ ಆರಾಧಿಸುವ ವಿಷ್ಣುಮೂರ್ತಿ.

ಒತ್ತೆಕೋಲ ಮತ್ತು ಬೈಲಕೋಲ

ಕೇರಳದಲ್ಲಿ ‘ವಿಷ್ಣುಮೂರ್ತಿ ತೆಯ್ಯಂ’ ಎಂದು ಕರೆದರೆ ಸುಳ್ಯಭಾಗದಲ್ಲಿ ‘ವಿಷ್ಣುಮೂರ್ತಿ ಕೋಲ’ ಎಂದು ಕರೆಯುತ್ತಾರೆ. ಅದರಲ್ಲಿ ‘ಒತ್ತೆಕೋಲ’ ಮತ್ತು ‘ಬೈಲಕೋಲ’ ಎಂಬ ಎರಡು ವಿಧದ ಆಚರಣೆ ಇದೆ. ಒತ್ತೆಕೋಲ ಎಂದರೆ ಒಂದೇ ಕೋಲ ಎಂದರ್ಥ.

ವರ್ಷಾವಧಿ ಜಾತ್ರೆಯನ್ನು ನಡೆಸಿದಂತೆ ವಿರ್ಷುಮೂರ್ತಿ ಕೋಲವನ್ನು ನೀಡುತ್ತಾರೆ. ಬೇಸಿಗೆ ಕಾಲದಲ್ಲಿ ಒತ್ತೆಕೋಲ ಅಥವಾ ಬೈಲಕೋಲವನ್ನು ಕಾಣಬಹುದಾಗಿದೆ. ಮೆಲೇರಿ ಕಿಚ್ಚು ಹೊತ್ತಿಸಲು ಇರುವ ಕಾರಣದಿಂದ ಮಳೆಗಾಲದಲ್ಲಿ ವಿಷ್ಣುಮೂರ್ತಿ ಆಚರಣೆ ವಿರಳ.

ಕೊಟ್ಟಪುರಂನಲ್ಲಿರುವ ವೈಕುಂಡೇಶ್ವರನಿಗೂ ಇದೆಯಾ ಸಂಬಂಧ?

ವಿಷ್ಣುಮೂರ್ತಿಗೂ ಮಲಬಾರಿಗೂ ಇತಿಹಾಸದ ನಂಟಿದೆ. ಕಥೆಯೊಂದರ ಪ್ರಕಾರ ಕಾಸರಗೋಡಿನ ನೀಲೇಶ್ವರದ ‘ಕೊಟ್ಟಪ್ಪುರಂ’ ಎಂಬ ಪ್ರಾಚೀನ ತರವಾಡಿಗೆ ವಿಷ್ಣುಮೂರ್ತಿ ದೈವದ ಮೂಲ ಇತಿಹಾವಿದೆ. ಕುರುವಟ್ಟ್ ಕುರುಪ್ ಎಂಬಾತ ಈ ತರವಾಡಿನ ಮುಖ್ಯಸ್ಥನಾಗಿದ್ದನು. ಆತನ ಮನೆಯಲ್ಲಿ ತಿಯ್ಯ ಸಮುದಾಯದ ಕಣ್ಣನ್ನ (ಪಳಂತಯಿ ಕಣ್ಣನ್) ಎಂಬ ಯುವಕನು ಸೇವಕನಾಗಿ ಇದ್ದನು. ವಿಷ್ಣು ಭಕ್ತನಾಗಿದ್ದ ಕಣ್ಣನ್ ಒಂದು ದಿನ ಕುರುಪ್ ಮಗಳೊಂದಿಗೆ ಆಟವಾಡುತ್ತಿದ್ದ ಸಮಯದಲ್ಲಿ ಆಕೆಯ ತಲೆಗೆ ಕಣ್ಣನ್ನಿಂದಾಗಿ ಮಾವಿನ ಕಾಯಿ ಬಿದ್ದು ಗಾಯವಾಗುತ್ತದೆ. ಈ ವಿಚಾರ ಕುರುಪ್ಗೆ ತಿಳಿದು ಕಣ್ಣನ್ ಜೀವ ತೆಯೆಯಲು ತನ್ನ ಸೇವಕರಿಗೆ ಹೇಳುತ್ತಾನೆ.

ಮಾವಿನ ಹಣ್ಣು ಕದ್ದ ಕಣ್ಣನ್

ಇದೊಂದು ಕಥೆಯಾದರೆ ಮತ್ತೊಂದು ಕಥೆಯಲ್ಲಿ ಆತ ಕುರುಪ್ ಮಾವಿನ ತೋಟದಲ್ಲಿ ಹಣ್ಣು ಕದ್ದು ಸಿಕ್ಕಿ ಬೀಳತ್ತಾನೆ. ಕೊನೆಗೆ ಈ ವಿಚಾರ ಗೊತ್ತಾಗಿ ಕಣ್ಣನ್ ನೀಲೇಶ್ವರ ಬಿಟ್ಟು ಹೋಗಿ ಮಂಗಳೂರಿನ ಜೆಪ್ಪುಗೆ ಬಂದನು. ಅಲ್ಲಿ ಆತ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಲಗುತ್ತಾನೆ. ಮತ್ತೊಂದು ಕಥೆಯಲ್ಲಿ ದೇವಿ ಭಕ್ತೆಯಾದ ಮುದುಕಿಯ ಮನೆಯಲ್ಲಿ ವಾಸವಿರುತ್ತಾನೆ ಎಂದು ಹೇಳಲಾಗುತ್ತಿದೆ.

ಹೀಗೆ ಕಣ್ಣನ್ ವರ್ಷಗಳ ಬಳಿಕ ನೀಲೇಶ್ವರಕ್ಕೆ ವಾಪಾಸ್ ಆಗುತ್ತಾನೆ. ನೀಲೇಶ್ವರದ ಸಂತೆಯ ಸಮೀಪವಿರುವ ‘ಕಡಳಿ ಕೊಳಂ’ನಲ್ಲಿ ಸ್ನಾನ ಮಾಡುತ್ತಿರುತ್ತಾನೆ. ಈ ವಿಚಾರ ತಿಳಿದ ಕುರುಪ್ ಆತನನ್ನು ಕೊಲೆ ಮಾಡಿಸುತ್ತಾನೆ. ಕಣ್ಣನ್ ವಿಷ್ಣುವಿನ ಭಕ್ತನಾದ್ದರಿಂದ ಆತನನ್ನು ಕೊಂದ ಕುರುಪ್ಗೆ ಮತ್ತು ಕುಟುಂಬಕ್ಕೆ ನಾನಾ ಸಂಕಷ್ಟ ಬರುತ್ತದೆ. ಕೊನೆಗೆ ಜ್ಯೋತಿಷಿ ಬಳಿ ಹೋದಾಗ ನರಸಿಂಹ ಉಗ್ರರೂಪ ತಾಳಿದ್ದಾನೆ ಎಂಬ ವಿಚಾರ ಗೊತ್ತಾಗುತ್ತದೆ. ಕೊನೆಗೆ ಇದಕ್ಕೆ ಪರಿಹಾರವಾಗಿ ಜ್ಯೋತಿಷಿ ಹೇಳಿದಂತೆ ನರಸಿಂಹ ದೇವರಿಗಾಗಿ ಗುಡಿಕಟ್ಟಿಸಲು ಮತ್ತು ಕೆಂಡ ಸೇವೆ ಮುಂದಾಗುತ್ತಾನೆ. ಅದೇ ಗುಡಿ ನೀಲೇಶ್ವರದ ಕೊಟ್ಟಪುರಂನಲ್ಲಿರುವ ವೈಕುಂಡೇಶ್ವರ ದೇವಾಲಯ ಎಂಬ ಮಾತಿದೆ.

ಸದ್ಯ ಸುಳ್ಯ, ಕಾಸರಗೋಡು ಗಡಿಭಾಗದಲ್ಲಿ ವಿಷ್ಣುಮೂರ್ತಿಯ ದೈವದ ಕೋಲಗಳು ಅಲ್ಲಲ್ಲಿ ನಡೆಯುತ್ತಿವೆ. ಇಂಥಾ ಸುವರ್ಣ ಕಾಲದ ಸಮಯದಲ್ಲಿ ಕುಟುಂಬಗಳು ಒಗ್ಗಟ್ಟಾಗುತ್ತದೆ, ದೇಶ- ವಿದೇಶದಲ್ಲಿರುವ ಮಕ್ಕಳು ಮನೆ ಸೇರುತ್ತಾರೆ. ದೈವದ ಕಾರ್ಯದಲ್ಲಿ ಭಾಗಿಯಾಗುತ್ತಾರೆ.

✍🏻 ಹರ್ಷಿತ್ ಅಚ್ರಪ್ಪಾಡಿ