ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವ-ಧಾರ್ಮಿಕ ಸಭಾ ಕಾರ್ಯಕ್ರಮ

0

‘ಪ್ರಶ್ನೆ’ಗಳು ದೈವದ ಮೇಲೆ ಅಪನಂಬಿಕೆ ಮೂಡಿಸುವಂತೆ ಇರಬಾರದು : ತಮ್ಮಣ್ಣ ಶೆಟ್ಟಿ

ಧಾರ್ಮಿಕ ಆಚಾರ ವಿಚಾರಗಳನ್ನು ಯುವ ಪೀಳಿಗೆಗೆ ತಿಳಿಸಲು ಧಾರ್ಮಿಕ ಸಭೆಗಳು ಅಗತ್ಯ : ಶಾಸಕಿ ಭಾಗೀರಥಿ ಮುರುಳ್ಯ

ಯಾವುದೇ ಕೆಲಸ ಕಾರ್ಯಗಳಲ್ಲಿ, ಶುಭ ಕಾರ್ಯಗಳನ್ನು ಮಾಡುವಾಗ, ಕಷ್ಟದ ದಿನಗಳು ಬಂದಾಗ ಹಿರಿಯರು ದೈವದ ಮೇಲೆ ನಂಬಿಕೆಯಿಟ್ಟು ಪ್ರಾರ್ಥಿಸುತ್ತಿದ್ದರು. ಹರಕೆ ಹೇಳಿ ತೀರಿಸುತ್ತಿದ್ದರು. ದೈವವನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ ಇತ್ತೀಚೆಗೆ ದೈವಗಳು ಹರಕೆಗೆ ಮಾತ್ರ ಸೀಮಿತವಾಗಿದೆ. ಕಷ್ಟದಲ್ಲಿದ್ದಾಗ ದೈವಕ್ಕೆ ಹರಕೆ ಸಲ್ಲಿಸಿ, ಒಂದು ವೇಳೆ ಈಡೇರದೇ ಇದ್ದರೆ ದೈವವನ್ನೇ ಪ್ರಶ್ನಿಸುವ ಹಂತಕ್ಕೆ ಮುಟ್ಟಿದ್ದೇವೆ. ದೈವಕ್ಕೆ ನಗನಾಣ್ಯಗಳನ್ನು ಅರ್ಪಿಸಿ ಪ್ರಶ್ನಾ ಚಿಂತನೆಯ ಮೂಲಕ ಅರ್ಪಣೆ ಆಗಿದೆಯಾ? ಇಲ್ಲವ? ಎಂದು ತೀರ್ಮಾನಕ್ಕೆ ಬರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರಶ್ನೆಯೇ ದೈವದ ಮೇಲೆ ಅಪನಂಬಿಕೆ ಮೂಡಿಸುವಂತೆ ಆಗಿದೆ. ದೈವರಾಧನೆ ಎಂಬುದು ಹಿಂದೆ ಮತ್ತು ಇಂದು ಸಾಮಾಜಿಕ ನ್ಯಾಯ ನೀಡುತ್ತಿದೆ. ದೈವದ ಬಗ್ಗೆ ನಂಬಿಕೆ ಉಳಿಯಬೇಕಾದರೆ ಮಕ್ಕಳಿಗೆ ದೈವಗಳು ಬಂದ ಬಗೆಯನ್ನು ವಿವರಿಸಬೇಕಾಗಿದೆ. ಅನೇಕ ಕಡೆಗಳಲ್ಲಿ ದೈವಗಳಿಗೆ ಇರುವ ಗದ್ದೆಗಳಿಗೆ ಮಣ್ಣು ತುಂಬಿಸಿ ಸೈಟ್ ಮಾಡಿ ಮಾರಾಟ ಮಾಡುವ ಮಟ್ಟಕ್ಕೆ ಕೆಲವರು ತಲುಪಿದ್ದಾರೆ. ದೈವರಾಧನೆಯನ್ನು ತಿರುಚಬೇಡಿ. ಪ್ರಕೃತಿಗೆ ಹೊಂದಾಣಿಕೆಯಾಗುವಂತೆ, ಮೂಲವನ್ನು ಉಳಿಸಿಕೊಂಡು ದೈವರಾಧನೆಯಲ್ಲಿ ತೊಡಗಿಕೊಳ್ಳುವ ಅನಿವಾರ್ಯತೆ ಇದೆ ಎಂದುತುಳುನಾಡ ದೈವರಾಧನೆ ಮತ್ತು ಸಾಂಸ್ಕೃತಿಕ ವಿಮರ್ಶಕ ತಮ್ಮಣ್ಣ ಶೆಟ್ಟಿ ಹೇಳಿದರು. ಅವರು ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷದೈವ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಶ್ರೀಮತಿ ಮಾಚಮ್ಮ‌ ಮತ್ತು ಶ್ರೀ ಸೋಮಪ್ಪ ಗೌಡ ಮುಂಡೋಡಿ ಸ್ಮರಣಾರ್ಥ ಅವರ ಮಕ್ಕಳು ಕೊಡಮಾಡಿದ ನೂತನ ರಂಗಮಂದಿರವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ ಉದ್ಘಾಟಿಸಿ ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ವಿದ್ಯಾಭ್ಯಾಸ ಇಲ್ಲದೇ ಇದ್ದರೂ ದೈವ ದೇವರನ್ನು ಅತ್ಯಂತ ನಿಷ್ಠೆಯಿಂದ ಆಚರಿಸಿಕೊಂಡು ಬರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದೈವ ದೇವರ ಮೇಲೆ ನಂಬಿಕೆ ಕಡಿಮೆಯಾಗುತ್ತ ಬಂದಿದೆ. ಧಾರ್ಮಿಕ ವಿಚಾರಗಳನ್ನು ಉಳಿಸಲು ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ನಮ್ಮ ನಮ್ಮ ಮನೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ತಿಳಿಸುವ ಅಗತ್ಯವಿದೆ. ಧಾರ್ಮಿಕ ಆಚಾರ ವಿಚಾರಗಳನ್ನು ನಾವು ಅಳವಡಿಸಿಕೊಳ್ಳಲು ಧಾರ್ಮಿಕ ಉಪನ್ಯಾಸದ ಅಗತ್ಯವಿದೆ ಎಂದು ಅವರು ಹೇಳಿದರು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ ಅಧ್ಯಕ್ಷತೆ ವಹಿಸಿದ್ದರು.

ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿ ‌ಪುರಸ್ಕೃತ, ಲೇಖಕ ಪಿ.ಅನಂತರಾಜ ಗೌಡ ಮುಖ್ಯ ಅತಿಥಿಯಾಗಿದ್ದರು. ವೇದಿಕೆಯಲ್ಲಿ ಜಾತ್ರೋತ್ಸವ ಸಮಿತಿಯ ಪ್ರೀತಂ‌ ಮುಂಡೋಡಿ, ವೇಣುಕುಮಾರ್ ಚಿತ್ತಡ್ಕ, ಲೋಕಪ್ಪ ಶೀರಡ್ಕ, ಮಹಾದೇವಿ ಕಿಶೋರ್ ಪೈಕ – ಬೊಮ್ಮದೇರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಂಗಮಂದಿರ ಕೊಡುಗೆ ನೀಡಿದವರನ್ನು, ಶಾಸಕರನ್ನು ಸನ್ಮಾನಿಸಲಾಯಿತು.