ಐನೆಕಿದು ಮನೆಗೆ ಬಂದದ್ದು ಕೂಜಿಮಲೆಗೆ ಬಂದ ನಕ್ಸಲರ ತಂಡ !?

0

ಮನೆಗೆ ಬಂದು ಊಟ ಮತ್ತು ಅಕ್ಕಿ ಕೊಂಡೊಯ್ದ ನಾಲ್ವರು ಶಂಕಿತ ನಕ್ಸಲೀಯರು

ಐನೆಕಿದು ಗ್ರಾಮದ ಕೋಟೆ ತೋಟದ ಮೂಲೆ ಎಂಬಲ್ಲಿನ ಮನೆಗೆ ನಿನ್ನೆ ರಾತ್ರಿ ಭೇಟಿ ನೀಡಿದ್ದು, ಕಳೆದ ವಾರವಷ್ಟೇ ಕೂಜಿಮಲೆ ಅಂಗಡಿಗೆ ಭೇಟಿ ದಿನಸಿ ಕೊಂಡೊಯ್ದ ನಾಲ್ವರ ತಂಡವೇ ಎನ್ನುವುದು ಬಹುತೇಕ ಖಚಿತಪಟ್ಟಿದ್ದು, ನಕ್ಸಲರು ಈ ಪ್ರದೇಶ ತೊರೆದು ಹೋಗಿಲ್ಲ ಎನ್ನುವುದು ದೃಢಪಟ್ಟಿದೆ. ಈ ಮಧ್ಯೆ ಈ ಪರಿಸರದಲ್ಲೂ ಕೂಂಬಿಂಗ್ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗಿದೆ.

ಐನೆಕಿದು ಗ್ರಾಮದ ತೋಟದ ಮೂಲೆ ಎಂಬಲ್ಲಿರುವ ಅಶೋಕ್ ಕೂಜುಗೋಡು ಎಂಬವರ ಮನೆಗೆ ನಿನ್ನೆ ಸಂಜೆ ಆರು ಗಂಟೆಯ ವೇಳೆಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರಿರುವ ಈ ನಾಲ್ವರ ತಂಡ ಬಂದಿದೆ. ಆಗ ಮಳೆ ಹನಿ ಸುರಿಯುತ್ತಿತ್ತು.

ಮಾಮೂಲಿ ಡ್ರೆಸ್‌ನಲ್ಲಿದ್ದ ಈ ನಾಲ್ವರೂ ಕೈಯಲ್ಲಿ ಬಂದೂಕು ಹಿಡಿದುಕೊಂಡಿದ್ದರು. ಅದನ್ನು ಪಕ್ಕಕ್ಕಿಟ್ಟು ಮನೆಯ ಹೊರಗಡೆ ನಿಂತು ” ತಾವು ಯಾರು ಗೊತ್ತಿದೆಯಾ?” ಎಂದು ಪ್ರಶ್ನಿಸಿದ್ದು, ಅನುಮಾನಗೊಂಡ ಮನೆಯವರು ನಕ್ಸಲರಾ ಎಂದು ಕೇಳಿದ್ದಾರೆ. ಅದಕ್ಕೆ ಸ್ಪಷ್ಟವಾಗಿ ಏನೂ ಹೇಳದ ಅವರು ತಮಗೆ ಊಟ ಕಟ್ಟಿಕೊಡುವಂತೆ ಮತ್ತು ಅಕ್ಕಿ ನೀಡುವಂತೆ ಹೇಳಿದ್ದಾರೆ. ಮನೆಯವರು ಅದೇ ರೀತಿ ಮಾಡಿದ್ದಾರೆ. ಒಂದಷ್ಟು ಹೊತ್ತು ಅಲ್ಲಿ ಮಾತನಾಡಿದ ಅವರು ಒಂದು ಗಂಟೆಯ ಬಳಿಕ ಅಲ್ಲಿಂದ ತೆರಳಿರುವುದಾಗಿ ತಿಳಿದುಬಂದಿದೆ. ಕೂಜಿಮಲೆಗೆ ನಕ್ಸಲರು ಬಂದಿರುವ ವಿಚಾರ ಪತ್ರಿಕೆಗಳಲ್ಲಿ ಬಂದಿದೆ ಎಂದು ಮನೆಯವರು ಹೇಳಿದಾಗ ಆ ಪತ್ರಿಕೆ ಇದ್ದರೆ ಕೊಡಿ ಎಂದು ಹೇಳಿದರೆನ್ನಲಾಗಿದೆ.

ನಿನ್ನೆ ಮತ್ತೆ ಶಂಕಿತ ನಕ್ಸಲರು ಬಂದ ಮಾಹಿತಿಯ ಹಿನ್ನೆಲೆಯಲ್ಲಿ ಇಂದು ನಕ್ಸಲ್ ನಿಗ್ರಹ ಪಡೆಯ ಡಿವೈಎಸ್‌ಪಿ ರಾಘವೇಂದ್ರ ಮತ್ತಿತರ ಅಧಿಕಾರಿಗಳು, ಸರ್ಕಲ್ ಇನ್‌ಸ್ಪೆಕ್ಟರ್ ನವೀನ್‌ಚಂದ್ರ ಜೋಗಿ, ಸುಬ್ರಹ್ಮಣ್ಯ ಎಸ್‌ಐ ಕಾರ್ತಿಕ್, ಗುಪ್ತಚರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಬ್ರಹ್ಮ ಗಿರಿ ಮತ್ತು ಪುಷ್ಪಗಿರಿ ಅರಣ್ಯ ಶ್ರೇಣಿಯ ವಿವಿಧ ಕಡೆಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವ ಎಎನ್‌ಎಫ್ ಪಡೆಯವರು ಇದೀಗ ಈ ಪ್ರದೇಶದಲ್ಲೂ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಾರ್ಚ್ 16 ರಂದು ಕೂಜಿಮಲೆಗೆ ನಾಲ್ವರು ನಕ್ಸಲರು ಬಂದಿರುವುದು ಖಚಿತಪಟ್ಟಿದ್ದು, ಈ ಹಿನ್ನಲೆಯಲ್ಲಿ ವಿವಿಧ ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ ಘಟನೆ ನಡೆದ ಪ್ರದೇಶ ಕಾಡಿನ ಮೂಲಕ ಕೂಜಿಮಲೆಯಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಕೂಜಿಮಲೆಗೆ ಬಂದ ತಂಡವೇ ಇಲ್ಲಿಗೂ ಬಂದಿದೆ ಎಂಬುದು ಬಹುತೇಕವಾಗಿ ದೃಢಪಟ್ಟಿದೆ. ಕೂಜಿಮಲೆಗೆ ಬಂದ ತಂಡದಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಇದ್ದಾನೆ ಎನ್ನುವುದನ್ನು ಪೊಲೀಸರು ಮತ್ತು ಎಎನ್‌ಎಫ್ ನವರು ಬಲವಾಗಿ ಸಂಶಯಿಸಿದ್ದಾರೆ. ನಿನ್ನೆ ಬಂದ ತಂಡದಲ್ಲಿದ್ದವರೊಬ್ಬ ಕೂಡಾ ವಿಕ್ರಂ ಗೌಡ ನಂತೆ ಹೋಲುತ್ತಿರುವುದಾಗಿ ಇಲಾಖೆಯವರಿಗೆ ಮಾಹಿತಿ ಲಭಿಸಿದೆ.