ಸುಳ್ಯ ವರ್ತಕರ ಸಂಘದ ವತಿಯಿಂದ ತಿಂಡಿ ತಿನಿಸುಗಳ ಉದ್ಯಮಿಗಳಿಗೆ ಆಹಾರ ಸಂರಕ್ಷಣಾಧಿಕಾರಿ ಗಿರೀಶ್ ರವರಿಂದ ಮಾಹಿತಿ ಕಾರ್ಯಗಾರ ಮತ್ತು ಲೈಸೆನ್ಸ್ ಪಡೆಯುವರೇ ಮಾಹಿತಿ

0

ಸುಳ್ಯ ವರ್ತಕರ ಸಂಘದ ವತಿಯಿಂದ ಹೋಟೆಲ್ ಉದ್ಯಮಿಗಳು ಹಾಗೂ ತಿಂಡಿ ತಿನಿಸುಗಳ ವ್ಯಾಪಾರಸ್ಥರಿಗೆ ಜಾಗೃತಿ ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಕಾರ್ಯಕ್ರಮ 3ರಂದು ಸುಳ್ಯ ವರ್ತಕರ ಸಂಘದ ಕಚೇರಿಯಲ್ಲಿ, ಮಾಸಿಕ ಸಭೆಯ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಕುರಿತು ಮಾಹಿತಿಯನ್ನು ಆಹಾರ ಸಂರಕ್ಷಣಾ ಇಲಾಖಾಧಿಕಾರಿ ಶ್ರೀ ಗಿರೀಶ್ ಚಿಕ್ಕಮಂಗಳೂರು ಕಾರ್ಯಗಾರದಲ್ಲಿ ಭಾಗವಹಿಸಿದ್ದ ಉದ್ಯಮಿಗಳಿಗೆ ಸವಿಸ್ತಾರವಾಗಿ ವಿವರಿಸಿದರು. ವ್ಯಾಪಾರ ಸಂಸ್ಥೆಗಳಲ್ಲಿ ಮಾರಾಟ ಮಾಡುವ ವಸ್ತುಗಳ ತಯಾರಿಕೆ ಯಾವ ರೀತಿ ಆಗಿರಬೇಕು, ಆ ಪರಿಸರದ ಸ್ವಚ್ಛತೆಯನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು,ಆಹಾರ ಸಾಮಗ್ರಿಗಳ ತಯಾರಿಕೆಗೆ ಬಳಸುವ ವಸ್ತುಗಳ ಗುಣಮಟ್ಟ ಯಾವ ರೀತಿ ಇರಬೇಕು, ಆಹಾರ ಸಾಮಗ್ರಿಗಳನ್ನು ತಯಾರಿಸುವ ವ್ಯಕ್ತಿಗಳ ಆರೋಗ್ಯದ ಬಗ್ಗೆಯೂ ಗಮನ ಹರಿಸಿಕೊಳ್ಳುವುದು, ವಸ್ತುಗಳನ್ನು ಶೇಖರಿಸಿ ಇಡುವ ವಿಧಾನಗಳು,ಅಲ್ಲದೆ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಸಮಯಗಳಲ್ಲಿ ಮಾರಾಟ ಮಾಡಬಹುದಾದ ದಿನಾಂಕಗಳ ಬಗ್ಗೆ ಜಾಗೃತಿ ವಹಿಸಿಕೊಳ್ಳುವುದು ಮುಂತಾದ ವಿಷಯಗಳ ಕುರಿತು ಮಾಹಿತಿಗಳನ್ನು ನೀಡಿದರು.


ಅಲ್ಲದೆ ಕೆಲವು ಸಂದರ್ಭಗಳಲ್ಲಿ ಮಾರಾಟಗಾರರು ತಮ್ಮ ಲಾಭಕ್ಕೋಸ್ಕರ ಈ ಎಲ್ಲಾ ನಿಬಂಧನೆಗಳನ್ನು ಗಾಳಿಗೆ ತೂರಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಕೇವಲ ತಮ್ಮದೇ ಲಾಭದ ಬಗ್ಗೆ ಚಿಂತಿಸಿ ಗುಣಮಟ್ಟವಿಲ್ಲದ ಆಹಾರಗಳನ್ನು ಮಾರಾಟ ಮಾಡಿ ಇದರಿಂದ ಸಾರ್ವಜನಿಕರಿಗೆ ನಾನಾ ರೀತಿಯ ಅನಾಹುತಗಳಿಗೆ ಕಾರಣವಾಗುತ್ತಿರುವ ಬಗ್ಗೆ, ಮತ್ತು ಅಂಥವರ ವಿರುದ್ಧ ಇಲಾಖೆಗಳು ಯಾವ ರೀತಿಯ ಕ್ರಮ ಕೈಗೊಳ್ಳುವುದು ಎಂಬ ವಿಷಯದ ಕುರಿತು ಜಾಗೃತಿಯನ್ನು ಮೂಡಿಸಿದರು.

ಆಹಾರ ಉತ್ಪಾದನಾ ಕೇಂದ್ರಗಳಿಗೆ ಅನುಮತಿ ಪಡೆಯಲು ಯಾವುದೆಲ್ಲ ದಾಖಲೆ ಪತ್ರಗಳನ್ನು ಹೊಂದಿರಬೇಕು ಮತ್ತು ಆನ್ಲೈನ್ ಮೂಲಕ ಅರ್ಜಿಗಳನ್ನು ಯಾವ ರೀತಿ ಸಲ್ಲಿಸುವುದು ಮುಂತಾದ ವಿಷಯಗಳ ಕುರಿತು ಪ್ರಯೋಜನಕಾರಿ ಮಾಹಿತಿಯನ್ನು ನೀಡಿದರು. ಇವರು ಪ್ರತಿ ಮಂಗಳವಾರದಂದು ಸುಳ್ಯ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಉಪಸ್ಥಿತರಿದ್ದು ಸಾರ್ವಜನಿಕರು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಕಾರ್ಯದರ್ಶಿ ಗಿರೀಶ್ ಡಿ ಎಸ್ , ಉಪಾಧ್ಯಕ್ಷರುಗಳಾದ ಸಿಎ ಗಣೇಶ್ ಭಟ್,ರಾಮಚಂದ್ರ ಪಿ ಪ್ರಭಾಕರ ನಾಯರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.


ಸುಮಾರು ಮೂವತ್ತಕ್ಕೂ ಹೆಚ್ಚು ವ್ಯಾಪಾರ ಉದ್ಯಮಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಪಿ ಬಿ ಸುಧಾಕರ ರೈ ಇವರ ಅಧ್ಯಕ್ಷತೆ ವಹಿಸಿ, ಡಿ ಎಸ್ ಗಿರೀಶ್ ರವರು ಸ್ವಾಗತಿಸಿ, ಪ್ರಭಾಕರನ್
ನಾಯರ್ ವಂದಿಸಿದರು.