ಸೋಣಂಗೇರಿ : ಮರದ ಕಂಬ, ಗ್ರೀನ್ ನೆಟ್ ಬಳಸಿ ಸ್ಥಳೀಯರಿಂದ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣ

0

ಜಾಲ್ಸೂರು ಗ್ರಾ.ಪಂ. ವ್ಯಾಪ್ತಿಯ ಸೋಣಂಗೇರಿಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಬಸ್ ನಿಲ್ದಾಣ ನಿರ್ಮಿಸಲು ಸ್ಥಳೀಯ ಆಡಳಿತ ವಿಫಲವಾದ ಹಿನ್ನಲೆಯಲ್ಲಿ ಸ್ಥಳೀಯ ಯುವಕರು ಸೇರಿಕೊಂಡು ಸ್ವತಃ ಖರ್ಚಿನಲ್ಲಿ ತಾತ್ಕಾಲಿಕವಾಗಿ ಮರದ ಕಂಬ, ಗ್ರೀನ್ ನೆಟ್ ಬಳಸಿ ತಂಗುದಾಣ ನಿರ್ಮಿಸಿದ್ದಾರೆ.

ಹೊಸ ರಸ್ತೆಯ ಕೆಲಸದ ವೇಳೆ ಇಲ್ಲಿದ್ದ ಹಳೆದ ಬಸ್ ನಿಲ್ದಾಣವನ್ನು ತೆಗೆಯಲಾಗಿತ್ತು, ಆದರೆ ರಸ್ತೆ ಕೆಲಸ ಮುಗಿದು 1 ವರ್ಷ ಕಳೆದರೂ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಹೂರ್ತ ಕೂಡಿ ಬಂದಿರಲಿಲ್ಲ.
ಬಸ್ ತಂಗುದಾಣ ನಿರ್ಮಾಣ ಮಾಡಲು ಜಾಗದ ಸಮಸ್ಯೆ ಇದೆ ಅನ್ನುವುದು ಸ್ಥಳೀಯ ಪಂಚಾಯತ್‌ನವರ ಮಾತಾಗಿತ್ತು.

ಪತ್ರಿಕೆಯಲ್ಲಿ ಸಾಕಷ್ಟು ಸಲ ವರದಿ ಬಂದರು ಎಚ್ಚೆತ್ತುಕೊಳ್ಳದ ಪಂಚಾಯತ್ ಇಂದಿನವರೆಗೂ ಒಂದು ತಾತ್ಕಾಲಿಕ ತಂಗುದಾಣ ನಿರ್ಮಿಸಲಿಲ್ಲ.

ಹಾಗಾಗಿ ಇಲ್ಲಿ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಮಳೆ, ಗಾಳಿ ,ಬಿಸಿಲಲ್ಲಿ ನಿಲ್ಲಬೇಕಿತ್ತು. ಇದರಿಂದ ಅಸಮಾಧಾನಗೊಂಡ ಸ್ಥಳೀಯರು ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿದ್ದಾರೆ.

ಪ್ರಯಾಣಿಕರು ಕೂರಲು ಅನುಕೂಲಕ್ಕಾಗಿ ಮರ ತಟ್ಟೆಯನ್ನು ಹಾಕಲಾಗಿದೆ.

ಸ್ಥಳೀಯ ಗ್ರಾ.ಪಂ., ಜನಪ್ರತಿನಿಧಿಗಳು ತಟಸ್ಥ ಧೋರಣೆಯನ್ನು ತೋರದೆ ತಕ್ಷಣ ಇರುವ ಸಮಸ್ಯೆಯನ್ನು ಬಗೆಹರಿಸಿ ಇಲ್ಲಿ ಖಾಯಂ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬುವುದು ಸ್ಥಳೀಯರ ಒತ್ತಾಯ.

ತಂಗುದಾಣ ನಿರ್ಮಾಣ ಕೆಲಸದಲ್ಲಿ ಸ್ಥಳೀಯರಾದ ಬಾಲಕೃಷ್ಣ ಸೋಣಂಗೇರಿ, ಅಣ್ಣಿ, ಶಾಂತಾರಾಮ ಪೂಜಾರಿ, ಸುರೇಶ್ ಕುಲಾಲ್, ರಂಜಿತ್ ಸೋಣಂಗೇರಿ , ಶೇಷಪ್ಪ ಪೂಜಾರಿ, ಸುರೇಶ್ ರೈ, ಯೋಗೀಶ್ ಎಸ್.ಕೆ., ಸತ್ಯಶಾಂತಿ ತ್ಯಾಗ ಮೂರ್ತಿ ಕುಕ್ಕಂದೂರು, ದೀಪಕ್ ಎಸ್.ಕೆ., ಕುಸುಮಾಧರ ಕಾಡುತೋಟ ಉಪಸ್ಥಿತರಿದ್ದರು.