ರಂಗಮನೆಯಲ್ಲಿ ಸಂಭ್ರಮಿಸಿದ ‘ಮಕ್ಕಳ ನಾಟಕೋತ್ಸವ’

0

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಅಭಿನಯ ಪ್ರಧಾನ ಚಿಣ್ಣರಮೇಳದಲ್ಲಿ ಸಿದ್ಧವಾದ ಏಳು ನಾಟಕಗಳು ರಂಗಮನೆಯ ವೇದಿಕೆಯಲ್ಲಿ ಪ್ರದರ್ಶನಗೊಂಡಿತು. 6 ರಿಂದ 15 ವರ್ಷದ ಸುಮಾರು 170 ಮಕ್ಕಳು ಏಳು ನಾಟಕಗಳ ಮೂಲಕ ಪ್ರಥಮ ಬಾರಿಗೆ ರಂಗವನ್ನೇರಿ ತಮ್ಮ ಅಭಿನಯ ಸಾಮರ್ಥ್ಯವನ್ನು ಮೆರೆದು ಪ್ರೇಕ್ಷಕರ ಮನಗೆದ್ದರು.
ರಂಗನಿರ್ದೇಶಕ ಡಾ| ಜೀವನ್ ರಾಂ ಸುಳ್ಯರವರ  ಸಾರಥ್ಯದಲ್ಲಿ ನಡೆದ 33 ನೇ ವರ್ಷದ ಮಕ್ಕಳ ಶಿಬಿರ ಚಿಣ್ಣರಮೇಳದಲ್ಲಿ ಮಕ್ಕಳು ನವರಸ ಅಭಿನಯ, ಮಾತುಗಾರಿಕೆ, ಹಾಡು ಜನಪದ ಕುಣಿತ, ರಂಗವ್ಯಾಯಾಮ,  ಕತಾಭಿನಯ ಇತ್ಯಾದಿಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆದು ನಾಟಕಾಭ್ಯಾಸ ನಡೆಸಿದ್ದರು.

ಭಗೀರಥ ಕುಮಟ ನಿರ್ದೇಶನದ ಮಾಯಾ ರೊಟ್ಟಿ,
ಓಂಕಾರಸ್ವಾಮಿ ಮೈಸೂರು ನಿರ್ದೇಶನದ ಭಾರತದ ಹಕ್ಕಿ, ಗೀತಾಕುಮಾರಿ ನಿರ್ದೇಶನದ ಪರಿವರ್ತನ, ಮಮತಾ ಕಲ್ಮಕಾರು ನಿರ್ದೇಶನ ಗೋವಿನ ಹಾಡು, ಸುಶ್ಮಿತಾ ಮೋಹನ್ ನಿರ್ದೇಶನದಲ್ಲಿ ಕಪಟ ಮಾರ್ಜಾಲ, ಮಾ| ಮನುಜ ನೇಹಿಗ ನಿರ್ದೇಶನದಲ್ಲಿ ಕತ್ತಲೆ ನಗರ , ಚೈತ್ರಾ ಖುಷಿ ಚೆನ್ನಪಟ್ಟಣ ಹಾಗೂ ವಿ.ಕ್ರಿ.ವಿಕಾಸ್ ಮೈಸೂರು ನಿರ್ದೇಶನದ ಚಾಣಾಕ್ಷ ನರಿ ನಾಟಕಗಳು ಪ್ರದರ್ಶನಗೊಂಡವು.
ಶಿಬಿರ ಸಂಪನ್ಮೂಲ ವ್ಯಕ್ತಿ ವಿದುಷಿ ಸುಮನಾ ಪ್ರಸಾದ್ ಎಲ್ಲಾ ನಾಟಕಗಳಿಗೂ ಸಂಗೀತದಲ್ಲಿ ಸಹಕರಿಸಿದರು.
ಅಭಿನಯ, ಜನಪದ ಹಾಡುಗಳು, ಮಕ್ಕಳ ಗುಣ ನಡತೆಗಳು ವ್ಯಜ್ತಿತ್ವ ವಿಸನ ಇತ್ಯಾದಿ ವಿಷಯದಲ್ಲಿ ಸತ್ಯನಾರಾಯಣ ಕೊಡೇರಿ, ಮೈಮ್ ರಾಮದಾಸ್, ಮಮತಾ ಕೆ.ಸಿ.ಆರ್.ಪಿ., ವಸಂತಲಕ್ಷ್ಮೀ ಪುತ್ತೂರು ಇವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಚಿಣ್ಣರಮೇಳ ಸಮಾರೋಪ

ರಾಜ್ಯಮಟ್ಟದ ಮಕ್ಕಳ ಶಿಬಿರ ಚಿಣ್ಣರಮೇಳದ ಸಮಾರೋಪದಲ್ಲಿ ಉಪಸ್ಥಿತರಿದ್ದ ನ್ಯಾಯವಾದಿ ಕೆ.ಕಷ್ಣಮೂರ್ತಿ ಮಾತನಾಡಿ
ಇಂತಹ ಶಿಬಿರದಲ್ಲಿ ತೊಡಗಿಸಿಕೊಂಡ ಮಕ್ಕಳು ಜೀವನದಲ್ಲಿ ಎಂದೂ ಸೋಲಲಾರರು. ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ರಂಗಮನೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ರಂಗಮನೆಯ ಪದಾಧಿಕಾರಿಗಳಾದ ಡಾ.ವಿದ್ಯಾ ಶಾರದ, ಶಿಬಿರದ ಸಂಚಾಲಕರಾದ ಶ್ರೀಹರಿ ಪೈಂದೋಡಿ, ಪ್ರಸನ್ನ ಐವರ್ನಾಡು, ರವೀಶ್ ಪಡ್ಡಂಬೈಲು ಉಪಸ್ಥಿತರಿದ್ದರು.
ರಂಗಮನೆ ಅಧ್ಯಕ್ಷ ಜೀವನ್ ರಾಂ ಸುಳ್ಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

  • ಇದು ಬದುಕಿನ ಪಾಠ ಕಲಿಸುವ ಶಿಬಿರ ಅಂತ ನನಗನಿಸಿತು.
    ಮಕ್ಕಳು ಊಟ ಮಾಡುವಾಗ ಒಂದೇ ಒಂದು ಅನ್ನದ ಅಗುಳನ್ನು ಚೆಲ್ಲದಂತೆ, ಒಂದು ಹನಿ ನೀರನ್ನೂ ವ್ಯರ್ಥ ಮಾಡದಂತೆ ನೋಡಿಕೊಳ್ಳುವ ಜೀವನ್ ಎಲ್ಲರಿಗೂ ಮಾದರಿಯಾಗ್ತಾರೆ.
    ———— ಶ್ರೀಮತಿ ಲತಾ ಮಧುಸೂಧನ್
  • ನನ್ನ ಮಗಳು ಐದನೇ ವರ್ಷ ರಂಗಮನೆಯ ಶಿಬಿರದಲ್ಲಿ ಭಾಗವಹಿಸ್ತಿದ್ದಾಳೆ. ಮಗ ಎರಡನೇ ವರ್ಷ. ಇಲ್ಲಿ ಕಲಿತ ಎಲ್ಲಾ ವಿಷಯಗಳು ಅವರ ಕಲಿಕೆಗೆ ಪೂರಕವಾಗಿದೆ.
    ಇಲ್ಲಿನ ಕಲಿಕಾ ಕ್ರಮ , ಶಿಸ್ತು ಬೇರೆಲ್ಲೂ ನಾನು ಕಂಡಿಲ್ಲ.
    —— ಶ್ರೀಮತಿ ಅನಿತಾ ಕೆ.ಬನಾರಿ.
  • ಅಭಿನಯ ಕಲಿಕೆಗಾಗಿಯೇ ನಾನು ಬೆಂಗಳೂರಿಂದ ಬಂದಿದ್ದೇನೆ. ಪುಣ್ಯಕೋಟಿಯ ಪಾತ್ರ ಮಾಡಿ ತುಂಬ ಖುಷಿ ಪಟ್ಟಿದ್ದೇನೆ. ರಂಗಮನೆ ನನಗೀಗ ಮನೆ ಇದ್ದಂತೆ!
    ——- ಅನಾಯ ಪ್ರಿಯ, ಬೆಂಗಳೂರು
  • ಅಭಿನಯ ಅಂದ್ರೆ ನಂಗಿಷ್ಟ. ತುಂಬ ಕ್ಯಾಂಪ್ ಗೆ ಹೋಗಿದ್ದೇನೆ. ಆದ್ರೆ ರಂಗಮನೆಯಲ್ಲಿ ಸಿಕ್ಕ ಅನುಭವ ಬೇರೆಲ್ಲೂ ಸಿಕ್ಕಿಲ್ಲ. ಸುಳ್ಯ ಚಂದದ ಊರು.
    ಮುಂದಿನ ವರ್ಷವೂ ಬರ್ತೇನೆ.
    ——–ದಿಶಾ ಪರ್ಕಳ ಉಡುಪಿ.
  • ಪ್ರತಿದಿನ ಗಮ್ಮತ್ತ್ ಆಗ್ತಿತ್ತು. ಪಾಯಸದೂಟ, ಚಂದ ಇತ್ತು.
    ಶಿಬಿರ ಇನ್ನೂ ಸ್ವಲ್ಪ ದಿನ ಇರಬೇಕಿತ್ತು.
    —— ವಿಶಿಕ್ ಹೆಚ್.ಶೆಟ್ಟಿ ಅಜ್ಜಾವರ
  • ಪ್ರತಿದಿನ ಶಿಬಿರದ ಮಕ್ಕಳಲ್ಲಿ ಆಗುತ್ತಿದ್ದ ಬೆಳವಣಿಗೆಯನ್ನು ನೇರವಾಗಿ ಗಮನಿಸುತ್ತಾ ಬಂದವನು ನಾನು. ನನ್ನ ಮಗನೂ ಇದ್ದಾನೆ. ಲವಲವಿಕೆಯಿಂದ ಮಕ್ಕಳು ಹಾಡುತ್ತಾ ಕುಣಿಯುತ್ತಾ
    ಕಲಿಯುವ ರೀತಿಯೇ ಅದ್ಭುತ.
    _ ಡಾ.ದೇವಿಪ್ರಸಾದ್ ನೂಜಿ.