ಕೋವಿ ಡಿಪಾಸಿಟ್ ಇಡಿಸುವಾಗ ಚುನಾವಣಾ ಆಯೋಗದ ನಿಯಮದಂತೆ ಮಾಡಿ : ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

0

ಚುನಾವಣಾ ಸಮಯದಲ್ಲಿ ರೈತರು ಪರವಾನಗಿ ಹೊಂದಿದ ಕೋವಿಗಳನ್ನು ಡೆಪಾಸಿಟ್ ಇಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ಮಾಡುತ್ತಿರುವುದರ ವಿರುದ್ಧ ಹೈಕೋರ್ಟ್ ನಿರ್ದೇಶನ ನೀಡಿದೆ.
ಚುನಾವಣಾ ಆಯೋಗದ ನಿಯಮದ ಪ್ರಕಾರ ಚುನಾವಣೆಗಳ ಸಂದರ್ಭ ಕ್ರಿಮಿನಲ್ ಹಿನ್ನೆಲೆ ಹೊಂದಿರುವ, ಬೈಲ್ ಮೇಲೆ ಇರುವಂತಹ ಅಥವಾ ಅಪರಾಧ ಮನೋಭಾವ ಹೊಂದಿರುವವರ ಕೋವಿಗಳನ್ನು ಡೆಪಾಸಿಟ್ ಇರಿಸುವುದರ ಮೂಲಕ ಶಾಂತಿಯುತ ಮತದಾನ ಪ್ರಕ್ರಿಯೆ ನಡೆಸಬೇಕು ಎಂದು ಇರುವಂತಾದ್ದು. ಆದರೆ ಜಿಲ್ಲಾಧಿಕಾರಿಗಳು ಎಲ್ಲ ರೈತರು ಕೂಡ ಕೋವಿಗಳನ್ನು ಡೆಪಾಸಿಟ್ ಮಾಡಬೇಕೆಂದು ಆದೇಶ ಮಾಡುತ್ತಾರೆ. ರೈತರು ಈ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ವಿನಾಯಿತಿ ಪಡೆಯಬೇಕಾಗುತ್ತದೆ. ಹೈಕೋರ್ಟ್ ಗೆ ಹೋಗಲು ಶಕ್ತಿ ಇಲ್ಲದವರು ಕೋವಿ ಡೆಪಾಸಿಟ್ ಇರಿಸಿ, ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಲಾಗದೆ ನಷ್ಟ ಅನುಭವಿಸಬೇಕಾಗುತ್ತದೆ. ಆತ್ಮ ರಕ್ಷಣೆಗಾಗಿ ಪಿಸ್ತೂಲ್ ಪಡೆದವರು ಜೀವ ಭಯ ಅನುಭವಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಈ ಬಾರಿ ರೈತರು ಹೈಕೋರ್ಟಲ್ಲಿ ಶಾಶ್ವತ ಪರಿಹಾರ ದೊರೆಯುವುದೇ ಎಂದು ಕಾಯುತ್ತಿದ್ದರು.
ಇಂದು ಅಪರಾಹ್ನ ಹೈಕೋರ್ಟಿನ ಜಸ್ಟಿಸ್ ಸಚಿನ್ ಶಂಕರ್ ಮುಗ್ದುಂ ನೇತೃತ್ವದ ಏಕಸದಸ್ಯ ಪೀಠ ಅಂತಿಮ ತೀರ್ಪು ನೀಡಿದ್ದು, ರೈತರ ಕೋವಿ ಡೆಪಾಸಿಟ್ ಇರಿಸುವಾಗ ಚುನಾವಣಾ ಆಯೋಗದ ನಿಯಮವಿರುವ ರೀತಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿರುವುದಾಗಿ ತಿಳಿದುಬಂದಿದೆ.