ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಭೆ

0

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯು ಮೇ. ೨೬ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟೇಶ ಪ್ರಭು ಅಧ್ಯಕ್ಷತೆ ವಹಿಸಿ, ಸುಳ್ಯ ಬೋರ್ಡ್ ಹೈಸ್ಕೂಲ್ ಸ್ಥಾಪನೆಯಾದ ವಿಚಾರ ಹಾಗೂ ಬಳಿಕ ವಿದ್ಯಾರ್ಥಿ ಸಂಘ ಸ್ಥಾಪನೆಯಾಗಿ ಬೆಳೆದುಬಂದ ರೀತಿ ಹಾಗೂ ವಿದ್ಯಾಸಂಸ್ಥೆಗೆ ನೀಡಿದ ಸಹಕಾರದ ಕುರಿತು ಮಾತನಾಡಿದರು.


ನಿವೃತ್ತ ಪ್ರಾಂಶುಪಾಲ ಡಿ.ಎಸ್. ಕುಶಾಲಪ್ಪ ಗೌಡರು ವಿದ್ಯಾಸಂಸ್ಥೆಯ ಬೆಳವಣಿಗೆಯ ಕುರಿತು ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಕೇರ್ಪಳ, ಪ್ರೌಢಶಾಲಾ ವಿಭಾಗದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ ವೇದಿಕೆಯಲ್ಲಿ ಇದ್ದರು.


ಸ್ವಾಗತ ಭಾಷಣ ಮಾಡಿದ ಸಂಸ್ಥೆಯ ಪ್ರಾಂಶುಪಾಲ ಮೋಹನ್ ಬೊಮ್ಮೆಟ್ಟಿಯವರು ಅತೀ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ತಾಲೂಕಿನ ದೊಡ್ಡ ಸಂಸ್ಥೆ ನಮ್ಮದು ಎಂಬ ಹೆಮ್ಮೆ ಇದೆ. ಖಾಸಗಿ ಸಂಸ್ಥೆಗಳ ಸ್ಪರ್ಧೆಯ ನಡುವೆಯೂ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಫಲಿತಾಂಶವು ಇದೆ. ಹೈಸ್ಕೂಲ್ ಮತ್ತು ಕಾಲೇಜು ವಿಭಾಗ ಸೇರಿ ೧೩೫೦ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೆ ಎಂದು ಹೇಳಿದರು.


ಮಾಸ್ಟರ್ ಪ್ಲ್ಯಾನ್


ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯರು, ಸಂಸ್ಥೆ ೧೯೫೦ರಲ್ಲಿ ಆರಂಭಗೊಂಡಿದ್ದು, ಸಂಸ್ಥೆಯಲ್ಲಿ ಆಗಬೇಕಾದ ಅವಶ್ಯ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಸರಕಾರದಿಂದ ವಿವೇಕ ಕೊಠಡಿ ಮಂಜೂರು, ದಾನಿಗಳು ಕೊಠಡಿ ನಿರ್ಮಾಣಕ್ಕೆ ಮುಂದೆ ಬಂದಿರುವ ವಿವರ ಸಭೆಯಲ್ಲಿ ನೀಡಿದರಲ್ಲದೆ, ಶಾಲೆಯ ಎಪೈತ್ತೈದರ ಹರಯದ ಈ ಸಂದರ್ಭದಲ್ಲಿ ಮುಂದಿನ ಇಪ್ಪತ್ತೈದು ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಸ್ಟರ್ ಯೋಜನೆ ತಯಾರಾಗಬೇಕಾಗಿದೆ ಎಂದು ಹೇಳಿದರು.


ನೂತನ ಸಮಿತಿಗೆ ನಿರ್ದೇಶಕರ ಆಯ್ಕೆ


ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ರಚನೆಗೆ ನಿರ್ದೇಶಕರ ಆಯ್ಕೆ ಮಾಡಲಾಯಿತು. ಸುಮಾರು ೧೭ ಮಂದಿ ನಿರ್ದೇಶಕರ ಆಯ್ಕೆ ಮಾಡಲಾಗಿದ್ದು, ಮುಂದಿನ ಸಭೆಯಲ್ಲಿ ಇನ್ನಷ್ಟು ಮಂದಿಯನ್ನು ಸೇರಿಸಿಕೊಂಡು ಪದಾಧಿಕಾರಿಗಳ ಆಯ್ಕೆ ಮಾಡುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಕಾಲೇಜು ಪ್ರಾಂಶುಪಾಲ ಮೋಹನ್ ಬೊಮ್ಮೆಟ್ಟಿ ಸ್ವಾಗತಿಸಿದರು. ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಿ.ಎಸ್.ಗಿರೀಶ್ ವಂದಿಸಿದರು. ಶಿಕ್ಷಕಿ ಶ್ರೀಮತಿ ಚಂದ್ರಮತಿ ಹಾಗೂ ಶ್ರೀಮತಿ ಮಮತಾ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬೆಳಗ್ಗೆ ಚಾ ಮತ್ತು ಚಟ್ಟಂಬಡೆ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರಿಗೂ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ಸಂಸ್ಥೆಯ ವತಿಯಿಂದ ನೀಡಲಾಯಿತು. ಶಿಕ್ಷಕರಾದ ನಟರಾಜ್, ಇಸುಬು ಹಳೆಗೇಟು, ದಿವಾಕರ ಪೆರಾಜೆ ಕಾರ್ಯಕ್ರಮ ಸಂಘಟಿಸಿದರು.