ನಗರ ಪಂಚಾಯತ್ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಗುರುತಿಸಿ : ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅನುದಾನ ಬಳಕೆ ಮಾಡಿ – ಆಡಳಿತಾಧಿಕಾರಿ ಸೂಚನೆ

0

ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಜೂ.19 ರಂದು‌ ನಡೆಯಿತು. ತಾಲೂಕು ಪಂಚಾಯತ್ ಆಡಳಿತಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಉದಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.


ತಹಶೀಲ್ದಾರ್ ಮಂಜುನಾಥ್, ಇ.ಒ. ರಾಮಣ್ಣ, ಪರೀಕ್ಷಾರ್ಥ ಐಎಫ್ ಎಸ್ ಅಧಿಕಾರಿ ಅಕ್ಷಯ್ ಅಶೋಕ್ ಪ್ರಕಾಶ್ ಕಾರಂತ್ ಹಾಗೂ ಇಲಾಖಾಧಿಕಾರಿಗಳು ಸಭೆಯಲ್ಲಿದ್ದರು.

ಸುಳ್ಯ‌ ನಗರದ ತ್ಯಾಜ್ಯ ವಿಲೇವಾರಿಗೆ ನಗರ ಹಾಗೂ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಜಾಗ ಗುರುತಿಸುವ ಕುರಿತು ಕಳೆದ ಸಭೆಯ ಪಾಲನಾ ವರದಿ ವಿಚಾರ ಸಭೆಯಲ್ಲಿ ಪ್ರಸ್ತಾಪವಾದಾಗ, ವಿವರ ನೀಡಿದ ಮುಖ್ಯಾಧಿಕಾರಿಗಳು ದುಗಲಡ್ಕದಲ್ಲಿ ಜಾಗ ಗುರುತಿಸಲಾಗಿದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಆರ್ ಎಫ್.ಒ. ಮಂಜುನಾಥ ರು “ದುಗಲಡ್ಕದಲ್ಲಿ ಇರುವ ಜಾಗ ಡೀಮ್ಡ್ ಫಾರೆಸ್ಟ್ 60 ಎಕರೆ ಇದೆ. ಅದು ಬಿಟ್ಟು ಇನ್ನೂ ಕೆ.ಎಫ್.ಡಿ.ಸಿ. ಜಾಗವೂ ಇದೆ.‌ಅದರಲ್ಲಿ ಹಿಂದೆ ಗುರುತಿಸಲಾಗಿತ್ತು” ಎಂದು ಹೇಳಿದರು. “ಡೀಮ್ಡ್ ಫಾರೆಸ್ಟ್ ಹೊರತಾಗಿಯೂ ಜಾಗ ಇದೆ. ಇವತ್ತೇ ಪ್ರಪೋಸಲ್ ಕಳುಹಿಸುವುದಾಗಿ ಮುಖ್ಯಾಧಿಕಾರಿ ಸುಧಾಕರ್ ಹೇಳಿದರು.


ಈ ಕುರಿತು ಸಮಾಲೋಚನೆ ನಡೆದಾಗ ” ತ್ಯಾಜ್ಯ ವಿಲೇವಾರಿಗೆ ಜಾಗವನ್ನು ಆದಷ್ಟು ಶೀಘ್ರವಾಗಿ ಗುರುತಿಸಿ. ಕೇಂದ್ರ ಸರಕಾರದದಿಂದ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಅನುದಾನ ತರಿಸಿಕೊಂಡು ತ್ಯಾಜ್ಯ ನಿರ್ವಹಣಾ ಘಟಕ ಮಾಡೋಣ ಎಂದು ಆಡಳಿತಾಧಿಕಾರಿಗಳು ಹೇಳಿದರು. “ಅಜ್ಜಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ 1 ಎಕ್ರೆ ಜಾಗ ಇದೆಯಲ್ವಾ ಏನಾಗಿದೆ?” ಎಂದು ಆಡಳಿತಾಧಿಕಾರಿ ಉದಯ ಶೆಟ್ಟಿ ಕೇಳಿದಾಗ, “ಜಾಗದ ಆರ್ ಟಿ ಸಿ ನ.ಪಂ. ಹೆಸರಿಗೆ ಇದೆ. ಆದರೆ ಅಲ್ಲಿ ಗ್ರಾ.ಪಂ. ನವರು ಕೂಡಾ ತ್ಯಾಜ್ಯ ಘಟಕ ಬೇಕು ಎಂದು ಹೇಳುತಿದ್ದಾರೆ” ಎಂದು ಮುಖ್ಯಾಧಿಕಾರಿ ಹೇಳಿದರು. “ಅಲ್ಲಿ ನಿರ್ವಹಣಾ ಘಟಕ ಮಾಡಿದರೆ ಅವರಿಗೂ ಉಪಯೋಗವೇ ಆಗುತ್ತದೆ.‌ ಅವರು ಬಳಸಿಕೊಳ್ಳಬಹುದು. ಇದನ್ನು ಅಲ್ಲಿಯ ಪಂಚಾಯತ್ ನವರಿಗೆ ತಿಳಿಸಿ‌” ಎಂದು ಆಡಳಿತಾಧಿಕಾರಿ ಸಲಹೆ‌ ನೀಡಿದರಲ್ಲದೆ, ಸುಳ್ಯ‌ ಬೆಳೆಯುವ ಏರಿಯಾ.‌ ಇಲ್ಲಿ ವ್ಯವಸ್ಥಿತ ತ್ಯಾಜ್ಯ ಘಟಕ ಇಲ್ಲವೆಂದರೆ ಶೋಭೆ ತರುವಂತದ್ದಲ್ಲಾ ಆದ್ದರಿಂದ ಈ ಕುರಿತು ಮೊದಲ ಆದ್ಯತೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಾಧಿಕಾರಿ ಗಳಿಗೆ ಸೂಚನೆ ನೀಡಿದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ : ಪ್ರಾಕೃತಿಕ ವಿಕೋಪ ಕುರಿತು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ತಾ.ಪಂ. ಇ.ಒ. ರಾಜಣ್ಣ ಮಾಹಿತಿ ನೀಡಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.