ವಿರಾಜೆಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಶಾಸಕ ಪೊನ್ನಣ್ಣ ಭಾವಚಿತ್ರದ ಪ್ರತಿಕೃತಿಗೆ ಬೆಂಕಿ ಹಚ್ಚಿದ ಹಿನ್ನೆಲೆ

0

ನಾಳೆ ಕೊಡಗು ಸಂಪಾಜೆಯಲ್ಲಿ ಕಾಂಗ್ರೆಸ್ ವತಿಯಿಂದ ಮೌನ ಪ್ರತಿಭಟನೆ

ರಾಜ್ಯ ಸರ್ಕಾರದ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ವಿರಾಜಪೇಟೆ ಬಿಜೆಪಿ ವತಿಯಿಂದ ಜೂ.20ರಂದು ಸರ್ಕಾರದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಭಾವಚಿತ್ರದ ಪ್ರತಿಕೃತಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಕೊಡಗು ಸಂಪಾಜೆ , ಚೆಂಬು ಹಾಗೂ ಪೆರಾಜೆಯ ಕಾಂಗ್ರೆಸ್ ವತಿಯಿಂದ ಜೂ.22ರಂದು ಸಂಪಾಜೆಯ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ಮೌನ ಪ್ರತಿಭಟನೆ ನಡೆಯಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಇಂಧ‌ನ ಬೆಲೆ ಏರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಭಾವಚಿತ್ರದ ಪ್ರತಿಕೃತಿಗೆ ಬೆಂಕಿಹಚ್ಚಿ ಪ್ರತಿಭಟಿಸಿದ್ದರು.

ಇದರಿಂದ ಕಾಂಗ್ರೆಸ್ ಕೊಡಗು ಜಿಲ್ಲೆಯಾದ್ಯಂತ ಬಿಜೆಪಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ನಾಳೆ ಕೊಡಗಿನ ಅಲ್ಲಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ತಿಳಿದುಬಂದಿದೆ.