ಸುಳ್ಯದಲ್ಲಿ ನಾಡಪ್ರಭು ಕೆಂಪೇಗೌಡ ಜನ್ಮ ದಿನಾಚರಣೆ

0


ಕೆಂಪೇಗೌಡರ ಆದರ್ಶ ಪಾಲಿಸೋಣ : ಕು.ಭಾಗೀರಥಿ ಮುರುಳ್ಯ


ಕೆಂಪೇಗೌಡರು ದೂರದೃಷ್ಠಿ ಇರಿಸಿಕೊಂಡು ಬೆಂಗಳೂರನ್ನು ಸಕಲ ಸೌಲಭ್ಯಗಳಿರುವ ಊರನ್ನಾಗಿ ಕಟ್ಟಿದ್ದರಿಂದ ಅದು ರಾಜ್ಯದ ರಾಜಧಾನಿಯಾಗುವಂತಾಯಿತು. ನಾವು ಕೂಡಾ ನಮ್ಮ ಊರನ್ನು ಅದೇ ರೀತಿ ರೂಪಿಸಿ ಕೆಂಪೇಗೌಡರಂತಾಗಲು ಪ್ರಯತ್ನಿಸಬೇಕು ಎಂದು ಶಾಸಕಿ ಕು. ಭಾಗೀರಥಿ ಮುರುಳ್ಯ ಹೇಳಿದರು.


ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಗೌಡರ ಯುವ ಸೇವಾ ಸಂಘದ ಸಹಯೋಗದೊಂದಿಗೆ ಇಂದು ಸುಳ್ಯದ ಶಾರದಾ ಪ.ಪೂ.ಕಾಲೇಜಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ೫೧೫ನೇ ಜನ್ಮದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಮುಖ್ಯ ಅತಿಥಿಗಳಾಗಿದ್ದರು. ನೆಹರೂ ಸ್ಮಾರಕ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ಸಂಜೀವ ಕುದ್ಪಾಜೆ ಕೆಂಪೇಗೌಡರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.


ಪ್ರಭಾರ ಬಿ.ಇ.ಒ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಶ್ರೀಮತಿ ಆಶಾ ನಾಯಕ್ ಸ್ವಾಗತಿಸಿದರು. ನಾಡಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಜಿ.ಮಂಜುನಾಥ್ ಪ್ರಾಸ್ತಾವಿಕ ಭಾಷಣಗೈದರು. ಸುಳ್ಯ ತಾ.ಪಂ. ಇ.ಒ. ರಾಜಣ್ಣ ಉಪಸ್ಥಿತರಿದ್ದರು. ಶಾರದಾ ಪ.ಪೂ. ಕಾಲೇಜ್ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ವಂದಿಸಿದರು.
ಉಪನ್ಯಾಸಕ ಕೆ.ದಾಮೋದರ್ ಕಾರ್ಯಕ್ರಮ ನಿರೂಪಿಸಿದರು. ಕೆಂಪೇಗೌಡ ಜನ್ಮದಿನಾಚರಣೆ ಪ್ರಯುಕ್ತ ಪ್ರಗತಿಪರ ಕೃಷಿಕರಾದ ಲಿಂಗಪ್ಪ ಗೌಡ ಪಡ್ಪು, ಮತ್ತು ಶ್ರೀಮತಿ ಲತಾ ಜೋಗಿಮೂಲೆಯವರನ್ನು ಸನ್ಮಾನಿಸಲಾಯಿತು. ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ವಿದ್ಯಾರ್ಥಿಗಳು ಕೆಂಪೇ ಗೌಡರ ಕುರಿತು ಕಿರುನಾಟಕ ಆಡಿದರು. ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.


ನ.ಪಂ.ಆವರಣದಿಂದ ಮೆರವಣಿಗೆ:


ಕೆಂಪೇಗೌಡ ಜನ್ಮದಿನಾಚರಣೆ ಪ್ರಯುಕ್ತ ಸುಳ್ಯ ನ.ಪಂ. ಆವರಣದಿಂದ ಸಭಾ ಕಾರ್ಯಕ್ರಮ ನಡೆಯುವ ಶಾರದಾ ಪದವಿಪೂರ್ವ ಕಾಲೇಜಿನವರೆಗೆ ಮೆರವಣಿಗೆ ನಡೆಯಿತು.

ತಹಶೀಲ್ದಾರ್ ಜಿ.ಮಂಜುನಾಥ್, ತಾ.ಪಂ. ಇ.ಒ. ರಾಜಣ್ಣ, ನ.ಪಂ. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್., ನ.ಪಂ. ಸದಸ್ಯರುಗಳಾದ ಎಂ. ವೆಂಕಪ್ಪ ಗೌಡ, ಸರೋಜಿನಿ ಪೆಲ್ತಡ್ಕ, ಡೇವಿಡ್ ದೀರಾ ಕ್ರಾಸ್ತಾ, ರಾಜು ಪಂಡಿತ್, ಗೌಡರ ಯುವ ಸೇವಾ ಸಂಘದ ಮುಖಂಡರುಗಳಾದ ಚಂದ್ರಾ ಕೋಲ್ಚಾರ್, ದಿನೇಶ್ ಮಡಪ್ಪಾಡಿ, ಪಿ.ಎಸ್. ಗಂಗಾಧರ್, ಕೆ.ಟಿ. ವಿಶ್ವನಾಥ, ರಾಕೇಶ್ ಕುಂಟಿಕಾನ, ಸುಪ್ರೀತ್ ಮೋಂಟಡ್ಕ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ತಾ.ಪಂ. ಮೆನೇಜರ್ ಹರೀಶ್ ರಾವ್, ವಿವಿಧ ಇಲಾಖಾಧಿಕಾರಿಗಳು, ನ.ಪಂ. ಸಿಬ್ಬಂದಿಗಳು, ತಾಲೂಕು ಕಚೇರಿ ಸಿಬ್ಬಂದಿಗಳು, ತಾ.ಪಂ. ಸಿಬ್ಬಂದಿಗಳು ಇದ್ದರು.