ಕಾಮಗಾರಿ ಆರಂಭಗೊಂಡು 15 ವರ್ಷವಾದರೂ ಆಗದ ಸುಳ್ಯದ ಅಂಬೇಡ್ಕರ್ ಭವನ – ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಭಾರೀ ಚರ್ಚೆ

0

ಜು.9ರ ಜಿಲ್ಲಾಧಿಕಾರಿ ಜನತಾದರ್ಶನ ಸಭೆಯಲ್ಲಿ ಕಪ್ಪು ಪಟ್ಟಿ ಧರಿಸುವ ಎಚ್ಚರಿಕೆ ನೀಡಿದ ದಲಿತ ನಾಯಕರು

ಕಾಮಗಾರಿ ಆರಂಭಗೊಂಡು 15 ವರ್ಷವಾದರೂ ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಳ್ಳದ ಕುರಿತು ಎಸ್ಸಿ -ಎಸ್ಟಿ ಸಭೆಯಲ್ಲಿ ಭಾರೀ ಚರ್ಚೆ ನಡೆದು, ಜು.9 ರ ಜಿಲ್ಲಾಧಿಕಾರಿ ಜನತಾದರ್ಶನ ಸಭೆಗೂ ಮೊದಲು ಸ್ಪಷ್ಟ ಚಿತ್ರಣ ನೀಡದಿದ್ದರೆ, ಜನತಾದರ್ಶನ ಸಭೆಗೆ ಕಪ್ಪು ಪಟ್ಟಿ ಧರಿಸಿ ಭಾಗವಹಿಸುವುದಾಗಿ ದಲಿತ ನಾಯಕರು ಎಚ್ಚರಿಕೆ ನೀಡಿದ ಘಟನೆ ವರದಿಯಾಗಿದೆ.

ಸುಳ್ಯ ತಹಶೀಲ್ದಾರ್ ಮಂಜುನಾಥ್ ಜಿ. ಯವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯು ನಡೆಯಿತು.

ಸಭೆಯಲ್ಲಿ ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಕುರಿತು ಚರ್ಚೆ. ನಂದರಾಜ ಸಂಕೇಶರು “15 ವರ್ಷಗಳ ‌ಹಿಂದೆ ಸುಳ್ಯದ ಅಂಬೇಡ್ಕರ್ ‌ಭವನ ಕಾಮಗಾರಿ ಆರಂಭಗೊಂಡಿದ್ದರೂ ಇಂದಿಗೂ ಪೂರ್ತಿ ಆಗಿಲ್ಲ. ಇದು ಬೇಸರದ ವಿಷಯ. ತಾಲೂಕು ಪಂಚಾಯತ್ ಕಟ್ಟಡ 1 ವರ್ಷದಲ್ಲಿ ಪೂರ್ತಿ ಆಗುತ್ತದೆ. ಅಂಬೇಡ್ಕರ್ ಭವನದ ಕುರಿತು ಯಾಕೆ‌ ನಿರ್ಲಕ್ಷ್ಯ” ಎಂದು‌ ಹೇಳಿದರು. ಧ್ವನಿಗೂಡಿಸಿ‌ ಮಾತನಾಡಿದ ಆನಂದಬೆಳ್ಳಾರೆ ಯವರು “ಯಾಕೆ ಹೀಗೆ ಮಾಡುತ್ತೀರಿ. ಪ್ರತೀ ಸಭೆಯಲ್ಲಿಯೂ ನಾವು ಅಂಬೇಡ್ಕರ್ ಭವನ ಪೂರ್ತಿಗೊಳಿಸಲು ಒತ್ತಾಯಿಸಿದರೂ ಆಗುತ್ತಿಲ್ಲ. ಆದ್ದರಿಂದ ಜು.9ರಂದು ಜಿಲ್ಲಾಧಿಕಾರಿ ಗಳ ಜನತಾದರ್ಶನ ಒಳಗೆ ಈ ಕುರಿತು ಸ್ಪಷ್ಟ ಚಿತ್ರಣ ನಮಗೆ ನೀಡದಿದ್ದರೆ, ನಾವು ಕಪ್ಪು ಪಟ್ಟಿ ಧರಿಸಿ ಭಾಗವಹಿಸುತ್ತೇವೆ” ಎಂದು ಎಚ್ಚರಿಸಿದರು. “ನಿರ್ಮಿತಿ ಕೇಂದ್ರದಲ್ಲಿದ್ದ ವರ್ಕ್ ಪಿಡಬ್ಲ್ಯೂಡಿಗೆ ಯಾಕೆ ನೀಡಿದ್ದು‌ ಕಮಿಷನ್ ಹೆಚ್ಚು ಸಿಗಲೆಂದಾ?” ಎಂದು ನಂದರಾಜ ಸಂಕೇಶರು‌ ಹೇಳಿದರು. “ಡಿಸಿ ಸಭೆಯಲ್ಲಿ ಈ ಕುರಿತು ಚರ್ಚೆ ಆಗಿದೆ” ಎಂದು ಸಮಾಜಕಲ್ಯಾಣಧಿಕಾರಿಗಳು ಹೇಳಿದರು. “ಅಂಬೇಡ್ಕರ್ ಭವನ ಕಾಮಗಾರಿ ಆಗಬೇಕು. ಈ ಕುರಿತು ಎಂ.ಎಲ್.ಎ. ಯವರಿದ್ದು, ಅಧಿಕಾರಿಗಳು ಇದ್ದು ಒಮ್ಮೆ ಸಭೆ ನಡೆಸುತ್ತೇವೆ” ಎಂದು ಇ.ಒ. ಹೇಳಿದಾಗ, “ಒಮ್ಮೆ ಸಮಾಜಕಲ್ಯಾಣ ಸಚಿವರಿಗೆ‌ ಈ ಕುರಿತು ನಿಯೋಗ ಹೋಗಿ ಸಮಸ್ಯೆ ತಿಳಿಸುವ ಕೆಲಸ‌ಮಾಡಿ” ಎಂದು ಆನಂದ ಬೆಳ್ಳಾರೆ, ನಂದರಾಜರು ಹೇಳಿದರು. ಈ ವಿಷಯದಲ್ಲಿ ಕೆಲ ಹೊತ್ತು ಚರ್ಚೆ ನಡೆಯಿತು.