ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸುಳ್ಯದ ನೂತನ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ

0

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರು ಸಂಸತ್ ಸದಸ್ಯರಾದ ಬಳಿಕ ಸುಳ್ಯದ ನೂತನ ಬಿಜೆಪಿ ಕಾರ್ಯಾಲಯಕ್ಕೆ ಜೂ.30ರಂದು ಭೇಟಿ ನೀಡಿದರು.

ಸಂಸದರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಸುಳ್ಯಕ್ಕೆ ಭೇಟಿ ನೀಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್. ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಎ.ವಿ. ತೀರ್ಥರಾಮ ಸೇರಿದಂತೆ ಪಕ್ಷದ ಪ್ರಮುಖರು ಸೇರಿ ಸ್ವಾಗತಿಸಿದರು.

ಬಳಿಕ ಮಾತನಾಡಿದ ಸಂಸದರು ಸುಳ್ಯ ವಿಧಾನಸಭಾ ಕ್ಷೇತ್ರ ದ.ಕ. ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರ. ಅಂತಹ ಕಾರ್ಯಕರ್ತರ ಪಡೆ ಇಲ್ಲಿದ್ದು, ಮತದಾರರನ್ನು ನಿರಂತರವಾಗಿ ಸಂಪರ್ಕದಲ್ಲಿಟ್ಟುಕೊಂಡಿದ್ದಾರೆ ಎಂದರು.


ಸುಳ್ಯ ಭಾಗದಲ್ಲಿ ಅಡಿಕೆ ಎಲೆ ಚುಕ್ಕಿ ರೋಗ, ಅಡಿಕೆ ಹಳದಿ ಎಲೆ ರೋಗ ಬಹಳಷ್ಟಿದ್ದು, ಈ ಬಗ್ಗೆ ಕೇಂದ್ರ ಕೃಷಿ ಸಚಿವರ ಜೊತೆ ಮಾತನಾಡಿ ಪರಿಹಾರಕ್ಕೆ ಪ್ರಯತ್ನ ಮಾಡುವುದಾಗಿ ತಿಳಿಸಿದರಲ್ಲದೆ, ಜನರ ಬೇಡಿಕೆಯ ಕಾಂಞಂಗಾಡ್ – ಕಾಣಿಯೂರು ರೈಲು ಮಾರ್ಗದ ಕುರಿತು ರೈಲ್ವೆಖಾತೆ ರಾಜ್ಯ ಸಚಿವರಾದ ಸೋಮಣ್ಣರೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಜೊತೆಗೆ ಸುಳ್ಯದ ವಿದ್ಯುತ್ ಸಮಸ್ಯೆ, ಗ್ರಾಮೀಣ ಭಾಗದ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಸಂವಾದ , ಜನರ ಸಂವಾದ ಆಧಾರಿತ ಕಾರ್ಯಕ್ರಮ ಹಮ್ಮಿಕೊಂಡು, ಕಾರ್ಯಕರ್ತರ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡುವುದಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟರು ತಿಳಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣಾ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರರಿಗೆ ಹಾಗೂ ಮತದಾರರಿಗೆ ಪಕ್ಷದ ವತಿಯಿಂದ ಕೃತಜ್ಞತಾ ಸಭೆ ನಡೆಸಲಿದ್ದು, ಸುಳ್ಯ ತಾಲೂಕು ಕೇಂದ್ರದಲ್ಲಿ ಮಾಡಬೇಕೋ ಅಥವಾ ಮಹಾಶಕ್ತಿಕೇಂದ್ರಗಳಲ್ಲಿ ಮಾಡಬೇಕೋ ಎಂಬುದನ್ನು ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಮಾಜಿ ಸಚಿವ ಎಸ್. ಅಂಗಾರರು ಮಾತನಾಡಿ ಕಾರ್ಯಕರ್ತರ ನಿರಂತರ ಸಂಪರ್ಕ ಇಟ್ಟುಕೊಂಡಾಗ ಸಂಘಟನೆ ಬಲಗೊಳ್ಳಲು ಸಾಧ್ಯ. ಸುಳ್ಯದಲ್ಲಿ ಅಂತಹ ಕಾರ್ಯಕರ್ತರ ಪಡೆಯಿದ್ದ ಕಾರಣ ಅತ್ಯಧಿಕ ಮತಗಳಿಂದ ನಾವು ಲೋಕಸಭಾ ಚುನಾವಣೆಯಲ್ಲಿ ಬ್ರಿಜೇಶ್ ಚೌಟರಿಗೆ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದರಲ್ಲದೇ, ಬಿಜೆಪಿ ಪಕ್ಷದಲ್ಲಿ ವ್ಯಕ್ತಿ ನಿಮಿತ್ತ‌ ಮಾತ್ರ. ಗೆಲುವು ಪಕ್ಷದ್ದು ಎಂದು ಹೇಳಿದರು.

ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ. ತೀರ್ಥರಾಮರು ಮಾತನಾಡಿ ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಾಗಿರದೆ ಸಂಘಟನೆ ಆಧಾರಿತ ಪಕ್ಷವಾಗಿದೆ. ಸಂಸದರು ದೊಡ್ಡ ದೊಡ್ಡ ಕೆಲಸಗಳನ್ನು ಮಾತ್ರ ಮಾಡಲು ಸಾಧ್ಯ. ಮುಖ್ಯವಾಗಿ ಕಾಣಿಯೂರು – ಕಾಂಞಂಗಾಡ್ ರೈಲು ಮಾರ್ಗದ ಕೆಲಸಕ್ಕೆ ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.


ಈ ವೇಳೆ ನೂತನವಾಗಿ ಸಂಸದರಾಗಿ ಆಯ್ಕೆಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಈ ವೇಳೆ ಸಂಸದರು ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸಂಸ್ಮರಣಾ ದಿನದ ಪ್ರಯುಕ್ತ ಬಿಜೆಪಿ ಕಛೇರಿಯ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ವೆಂಕಟ್ ದಂಬೆಕೋಡಿ, ಸಂತೋಷ್ ಕುತ್ತಮೊಟ್ಟೆ, ವಿನಯಕುಮಾರ್ ಮುಳುಗಾಡು, ಸಂತೋಷ್ ಜಾಕೆ, ಚನಿಯ ಕಲ್ತಡ್ಕ, ಸುರೇಶ್ ಕಣೆಮರಡ್ಕ, ಶಿವಾನಂದ ಕುಕ್ಕುಂಬಳ, ಎ.ಟಿ. ಕುಸುಮಾಧರ, ಆರ್.ಕೆ. ಭಟ್ ಕುರುಂಬುಡೇಲು, ಸುಬೋದ್ ಶೆಟ್ಟಿ ಮೇನಾಲ, ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಿ.ಕೆ. ಆಲೆಟ್ಟಿ ಮಹಾಶಕ್ತಿಕೇಂದ್ರದ ಅಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ, ಅಜ್ಜಾವರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಹೇಮಂತ್ ಮಠ, ಮಾಜಿ ತಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ಮಾಜಿ ಜಿ.ಪಂ. ಸದಸ್ಯೆ ಶ್ರೀಮತಿ ಆಶಾ ತಿಮ್ಮಪ್ಪ ಸೇರಿದಂತೆ ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರು, ಮಹಿಳಾ ಮೋರ್ಚಾದ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು.