ಕೂರ್ನಡ್ಕದ ತೇಜಕುಮಾರಿ ಯವರ ಬದುಕಿಗೆ ಆಸರೆಯಾದ ಪುತ್ತೂರಿನ ದೀಪಾಶ್ರೀ ಪುನಶ್ಚೇತನ ಕೇಂದ್ರ


ಆಲೆಟ್ಟಿ ಗ್ರಾಮದ ಕೂರ್ನಡ್ಕದಲ್ಲಿ
ಒಬ್ಬಂಟಿ ಮಹಿಳೆ ತನ್ನ ಸಾಕು ನಾಯಿಯೊಂದಿಗೆ ವಾಸವಾಗಿರುವ ಕುರಿತು ಕಳೆದ 8 ತಿಂಗಳ ಹಿಂದೆ ಸುದ್ದಿ ಮಾಧ್ಯಮದಲ್ಲಿ ಬಿತ್ತರಗೊಂಡ ವರದಿಗೆ ಫಲಶ್ರುತಿಯಾಗಿ ಅಶಕ್ತ
ಬಡ ಮಹಿಳೆ ಶ್ರೀಮತಿ ತೇಜಕುಮಾರಿ ಯವರಿಗೆ ಚಿಕಿತ್ಸೆಹಾಗೂಸೂರೊಂದು ನಿರ್ಮಿಸಲಾಗಿದ್ದು
ಮಾ.10 ರಂದು ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಮಹಿಳೆಯ ಪರಿಸ್ಥಿತಿ ಯನ್ನು ಗಮನಿಸಿದ ಸ್ಥಳೀಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಯೋಜನೆಯ ವತಿಯಿಂದ ಮನೆ ನಿರ್ಮಿಸುವುದಾಗಿ ಭರವಸೆ ನೀಡಿದರು. ಅದರಂತೆ ಈಗಾಗಲೇ ಸುಮಾರು ರೂ.1,46 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ “ವಾತ್ಸಲ್ಯ” ಎಂಬ ಹೆಸರಿನ ಮನೆಯ ಗೃಹಪ್ರವೇಶ ಕಾರ್ಯಕ್ರಮವನ್ನು ಸಂಪ್ರದಾಯದಂತೆ ಹಮ್ಮಿಕೊಂಡಿದ್ದರು.








2024 ರ ಜುಲೈ ತಿಂಗಳಲ್ಲಿ ತೇಜಕುಮಾರಿ ಯವರ ಕುರಿತು ಸುದ್ದಿ ಮಾಧ್ಯಮದಲ್ಲಿ ವರದಿ ಪ್ರಕಟಗೊಂಡಿದ್ದನ್ನು ಗಮನಿಸಿದ ಪುತ್ತೂರಿನ ದೀಪಾಶ್ರೀ ಪುನಶ್ಚೇತನ ಕೇಂದ್ರದನಿರ್ವಹಣಾಧಿಕಾರಿ ಉಮೇಶ್ ನಾಯಕ್ ರವರು ಸುದ್ದಿ ವರದಿಗಾರರನ್ನು ಸಂಪರ್ಕಿಸಿ ವಿಶೇಷ ಮುತುವರ್ಜಿ ವಹಿಸಿ ಮಹಿಳೆ ವಾಸವಾಗಿದ್ದ ಮನೆಗೆ ಹೋಗಿ ಅವರನ್ನು ಮಹಿಳೆಯ ಬಂಧುಗಳ ಮತ್ತು ಇಲಾಖೆಯವರ ಸಮ್ಮುಖದಲ್ಲಿ ಆಶ್ರಮಕ್ಕೆ ಕರೆದುಕೊಂಡು ಹೋಗಿ ಮಾನಸಿಕಅಸ್ವಸ್ಥತೆಯಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿ ದ್ದರು.
ಇದೀಗ 8 ತಿಂಗಳ ಬಳಿಕ ಅವರ ಆರೋಗ್ಯದಲ್ಲಿ ಸುಧಾರಿಸಿಕೊಂಡಿದ್ದು ಅವರನ್ನು ಕೂರ್ನಡ್ಕ ದಲ್ಲಿರುವ ಮನೆಗೆ ಕರೆದುಕೊಂಡು ಬರಲಾಯಿತು.
ಮನೆ ನಿರ್ಮಾಣಕ್ಕೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ ರೂ. 1.15 ಲಕ್ಷ ನೀಡಲಾಗಿದ್ದು ಹೆಚ್ಚುವರಿ ವೆಚ್ಚವನ್ನು ಸ್ಥಳೀಯ ಸಂಘದ ಸದಸ್ಯರು ಭರಿಸಿದ್ದು ಸುಂದರವಾದ ಚಿಕ್ಕದಾದ ಮನೆಯೊಂದನ್ನು ನಿರ್ಮಿಸಿ ಕೊಟ್ಟಿದ್ದಾರೆ. ದೈನಂದಿನ ಜೀವನಕ್ಕೆ ಬೇಕಾದ ಅವಶ್ಯಕತೆ ಇರುವ ಅಡುಗೆ ಪಾತ್ರೆ ಇನ್ನಿತರ ಸಾಮಾಗ್ರಿಗಳನ್ನು ಕಲ್ಲಪಳ್ಳಿ ಯೋಜನೆಯ ಒಕ್ಕೂಟದ ಸದಸ್ಯರು ಒದಗಿಸಿರುತ್ತಾರೆ.
ಸುಮಾರು 3 ತಿಂಗಳಿಗೆ ಬೇಕಾಗುವಷ್ಟು
ಅವಶ್ಯಕತೆಯಿರುವ ಆಹಾರ ಪದಾರ್ಥಗಳನ್ನು ಮತ್ತು ಬಟ್ಟೆ ಬರೆಗಳನ್ನು ಪುತ್ತೂರು ದೀಪಾಶ್ರೀ ಪುನಶ್ಚೇತನ ಕೇಂದ್ರದ ವತಿಯಿಂದ ಕೊಡುಗೆಯಾಗಿ ನೀಡಿದ್ದಾರೆ.
ವಾತ್ಸಲ್ಯ ಮನೆಗೆ ವಯರಿಂಗ್, ವಿದ್ಯುತ್ ಸಂಪರ್ಕವನ್ನು ಅನ್ನಪೂರ್ಣ ಇಲೆಕ್ಟ್ರಿಕಲ್ಸ್ ಮಾಲಕ ಮಧುಕಿರಣ್ ರವರು ಉಚಿತವಾಗಿ ಕಲ್ಪಿಸಿಕೊಟ್ಟಿದ್ದಾರೆ. ಬಡ್ಡಡ್ಕ ಅಮರ ಕ್ರೀಡಾ ಮತ್ತು ಕಲಾ ಸಂಘದ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ನೀರಿನ ಟ್ಯಾಂಕ್ ಒದಗಿಸಿಕೊಟ್ಟು ಪೈಪು ಲೈನ್ ಅಳವಡಿಸಿ ಮನೆಗೆ ಬೇಕಾದ
ನೀರಿನ ವ್ಯವಸ್ಥೆ ಮಾಡಿಕೊಟ್ಟಿರುತ್ತಾರೆ.
ಅಲ್ಲದೆ ವಸ್ತು ರೂಪದಲ್ಲಿ ಮತ್ತು ನಗದು ನೀಡಿ ಹಲವು ಮಂದಿ ದಾನಿಗಳು ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಕೈ ಜೋಡಿಸಿರುತ್ತಾರೆ.
ಬೆಳಗ್ಗೆ ಅರ್ಚಕರಾದ ವೆಂಕಟ್ರಾಜ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನ ನೆರವೇರಿತು. ಬಳಿಕ ಹಾಲು ಉಕ್ಕಿಸಿ ಗೃಹ ಪ್ರವೇಶ ಕಾರ್ಯಕ್ರಮವನ್ನು ಸಂಪ್ರದಾಯದಂತೆ ನೆರವೇರಿಸಲಾಯಿತು.
ಆಗಮಿಸಿದ ಎಲ್ಲರಿಗೂ ಉಪಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ
ಬಡ್ಡಡ್ಕ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ
ವಿಮಲಾಕ್ಷಿ ವಹಿಸಿದ್ದರು.
ಪುತ್ತೂರು ಕ.ಸಾ.ಪ. ಅಧ್ಯಕ್ಷ ಉಮೇಶ್ ನಾಯಕ್ ದೀಪ ಪ್ರಜ್ವಲಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಎನ್.ಎ.ರಾಮಚಂದ್ರ, ಜನಜಾಗೃತಿ ತಾಲೂಕು ಅಧ್ಯಕ್ಷ ಲೋಕನಾಥ್ ಅಮೆಚೂರ್, ಸುಳ್ಯ ವಲಯದ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಜನಜಾಗೃತಿ ನಿಕಟ ಪೂರ್ವ ಅಧ್ಯಕ್ಷ ಮಹೇಶ್ ಕುಮಾರ್ ರೈ ಮೇನಾಲ, ಬೂಡು ರಾಧಾಕೃಷ್ಣ ರೈ, ಯೋಜನಾಧಿಕಾರಿ ಮಾಧವ ಗೌಡ, ಪದ್ಮನಾಭ ಜೈನ್,ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ದಿನೇಶ್ ಬಡ್ಡಡ್ಕ, ಅನ್ನಪೂರ್ಣ ಇಲೆಕ್ಟ್ರಿಕಲ್ಸ್ ಮಾಲಕಮಧುಕಿರಣ್ ಸುಳ್ಯ,ಅಮರ ಕ್ರೀಡಾ ಕಲಾ ಸಂಘದ ಗೌರವಾಧ್ಯಕ್ಷ ದೇವಿಪ್ರಸಾದ್ ಬಡ್ಡಡ್ಕ, ವಲಯಾಧ್ಯಕ್ಷ ಮನೋಹರ, ಶೀಲಾವತಿ ಕಲ್ಲಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೇಲ್ವಿಚಾರಕಿ ಜಯಶ್ರೀ
ಸ್ವಾಗತಿಸಿ, ವಂದಿಸಿದರು.
ಸೇವಾ ಪ್ರತಿನಿಧಿ
ಶಕುಂತಲಾ ವರದಿ ವಾಚಿಸಿದರು. ಜಯಪ್ರಕಾಶ್ ಪೆರುಮುಂಡ ಕಾರ್ಯಕ್ರಮ ನಿರೂಪಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು,ಸೇವಾ ಪ್ರತಿನಿಧಿಗಳು, ಒಕ್ಕೂಟದ ಸದಸ್ಯರು ಹಾಗೂ ಸ್ಥಳೀಯ ಬಂಧು ಮಿತ್ರರು ಭಾಗವಹಿಸಿದರು.










