ವಿದ್ಯಾರ್ಥಿಗಳಿಂದ ಆಕ್ರೋಶ, ಟಿ.ಸಿ.ಯೊಂದಿಗೆ ಮಾತಿನ ಚಕಮಕಿ

ಸುಳ್ಯ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದಿಂದ ಮಧ್ಯಾಹ್ನ ೨.೪೫ ಕ್ಕೆ ಗುತ್ತಿಗಾರು ಮಾರ್ಗವಾಗಿ ಸುಬ್ರಮಣ್ಯಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ನ್ನು ಏಕಾಏಕಿ ಬೇರೆಡೆಗೆ ಕಳುಹಿಸಿದ ಕಾರಣ ವಿದ್ಯಾರ್ಥಿಗಳು ಆಕ್ರೋಶಗೊಂಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಟಿ ಸಿ ಯವರೊಂದಿಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಏ. ೭ ರಂದು ನಡೆದಿದೆ.















ಪ್ರತಿದಿನ ಸುಬ್ರಹ್ಮಣ್ಯಕ್ಕೆ ಗುತ್ತಿಗಾರು ಮಾರ್ಗವಾಗಿ ಸುಳ್ಯದಿಂದ ಹೊರಡುವ ಬಸ್ಸು ಎಂದಿನಂತೆ ಇಂದು ಕೂಡ ಬಸ್ ನಿಲ್ದಾಣದಲ್ಲಿ ನಿಂತಿತ್ತು. ಆದರೆ ಸುಬ್ರಹ್ಮಣ್ಯ ಕಡೆ ಹೋಗುವ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಬಸ್ ಹತ್ತಲು ಹೋದಾಗ ಇದು ಮಂಡೆಕೋಲುಗೆ ಹೋಗುವುದು ಎಂದು ನಿರ್ವಾಹಕ ಹೇಳಿದ್ದು, ಈ ವೇಳೆ ವಿದ್ಯಾರ್ಥಿಗಳು ನಿರ್ವಾಹಕರ ಬಳಿ ಹಾಗೂ ಟಿ ಸಿ ರವರ ಬಳಿ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಬಸ್ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
ಈ ಬಗ್ಗೆ ಸುದ್ದಿಯೊಂದಿಗೆ ಸಮಸ್ಯೆಯನ್ನು ಹೇಳಿಕೊಂಡ ವಿದ್ಯಾರ್ಥಿಗಳು ಕಳೆದ ೨.೩ ತಿಂಗಳುಗಳಿಂದ ಸುಳ್ಯದಿಂದ ಪ್ರತಿ ದಿನ ೨. ೪೫ ಕ್ಕೆ ಹೊರಡುವ ಬಸ್ಸು ಕೆಲವು ದಿನ ಸುಬ್ರಹ್ಮಣ್ಯಕ್ಕೆ ಹೋಗುವುದು ಕೆಲವು ದಿನ ಗುತ್ತಿಗಾರು ತನಕ ಮಾತ್ರ ಹೋಗಿ ನಿಲ್ಲುವುದು ಹೀಗೆಲ್ಲಾ ಮಾಡುತ್ತಿದ್ದಾರೆ. ಈ ರೀತಿಯಾಗಿ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ತುಂಬಾ ಸಮಸ್ಯೆಯಾಗುತ್ತಿದ್ದು, ಇಂದು ಮಧ್ಯಾಹ್ನ ಬಸ್ಟ್ಯಾಂಡಿನಲ್ಲಿ ನಿಲ್ಲಿಸಿದ್ದ ಬಸ್ಸನ್ನು ಏಕಾಏಕಿ ಮಂಡೆಕೋಲು ಕಡೆಗೆ ಹಾಕಿದ್ದಾರೆ. ಈ ರೀತಿ ಮಾಡಿದರೆ ನಾವು ಏನು ಮಾಡಬೇಕು ? ಎಂದು ತಮ್ಮ ಅಹವಾಲನ್ನು ಹೇಳಿಕೊಂಡಿದ್ದಾರೆ.











