ಪುತ್ತೂರು ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ `ಬೆಟ್ಟದ ಜಾತ್ರೆ’

0

ಪುರಾತನ ಕಾರಣಿಕ ಕ್ಷೇತ್ರವಾಗಿರುವ ಪುತ್ತೂರು ರೈಲು ನಿಲ್ದಾಣದ ಬಳಿಯಿರುವ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ `ಬೆಟ್ಟದ ಜಾತ್ರೆ’ಯು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ.25 ರಂದು ಸಂಭ್ರಮಿಸಿತು.

ಬೆಳಿಗ್ಗೆ ಗಣಪತಿ ಹೋಮ, ಮಹಾಪೂಜೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ನಂತರ ಪಾಷಾಣ ಮೂರ್ತಿ ದೈವಕ್ಕೆ ತಂಬಿಲ, ನಾಗದೇವರು ಹಾಗೂ ಗುಳಿಗ ದೈವಗಳಿಗೆ ತಂಬಿಲ ಸೇವೆ ನೆರವೇರಿತು. ಇದೇ ಸಂದರ್ಭದಲ್ಲಿ ಮೂಡಾಯೂರು ಚಂದ್ರಶೇಖರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಹಾಲಕ್ಷ್ಮೀ ದೇವಿಗೆ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಿತು.


ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಗಾನಸಿರಿ ಕಲಾಕೇಂದ್ರದ ಡಾ| ಕಿರಣ್ ಕುಮಾರ್ ಸಾರಥ್ಯದಲ್ಲಿ ಸ್ವರಲಯ ಮಾಧುರ್ಯ-ಭಕ್ತಿಭಾವ ಜಾನಪದ ಗೀತೆಗಳು ನಡೆದ ಬಳಿಕ ಸಿಡಿಮದ್ದು ಪ್ರದರ್ಶನ, ರಾತ್ರಿ ಮಹಾಪೂಜೆ, ದೇವಿ ದರ್ಶನ ಮತ್ತು ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆದ ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಮೇಳದವರಿಂದ `ಬಂಟನ ಬಲಿಸುತ್ತು’ ಎಂಬ ಯಕ್ಷಗಾನ ಬಯಲಾಟ ನೆರವೇರಿತು. ಉತ್ಸವದಲ್ಲಿ ಸುಮಾರು 2500 ಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪುತ್ತೂರು ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಕಾರ್ಯದರ್ಶಿ ವಿರೂಪಾಕ್ಷ ಭಟ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಸಹಿತ ಹಲವು ಮಂದಿ ಗಣ್ಯರು ಸೇರಿದಂತೆ ಸಾವಿರಾರು ಮಂದಿ ಉತ್ಸವದಲ್ಲಿ ಭಾಗವಹಿಸಿದ್ದರು.

ನೇಮೋತ್ಸವ
ಕ್ಷೇತ್ರದಲ್ಲಿ ಏ.27 ರಂದು ರಾತ್ರಿ ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.

ಮೇ 4 ರಂದು ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತಪ್ಪ ಸಪಲ್ಯ ತಿಳಿಸಿದ್ದಾರೆ.