ಮುಕ್ಕೂರು : ಆಧಾರ್ ನೋಂದಣಿ ‌ಮತ್ತು‌ ತಿದ್ದುಪಡಿ ಶಿಬಿರ

0

ನೇಸರ ಯುವಕ ಮಂಡಲದ ವತಿಯಿಂದ 50 ನೇ ಸಮಾಜಮುಖಿ ಕಾರ್ಯಕ್ರಮ

ಮುಕ್ಕೂರು- ಕುಂಡಡ್ಕ ನೇಸರ ಯುವಕ ಮಂಡಲ‌(ರಿ) ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೊ.ಬೆಳ್ಳಾರೆ ವಲಯ‌ ಪೆರುವಾಜೆ ಒಕ್ಕೂಟ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ ಆಧಾರ್ ತಿದ್ದುಪಡಿ ಮತ್ತು ನೋಂದಣಿ ಶಿಬಿರ ಹಾಗೂ ಅಪಘಾತ ವಿಮಾ ನೋಂದಣಿ ಶಿಬಿರ ಮುಕ್ಕೂರಿನಲ್ಲಿ ನಡೆಯಿತು.

ನೇಸರ ಯುವಕ ಮಂಡಲದ ವತಿಯಿಂದ 50 ನೇ ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ಅಧಾರ್ ನೋಂದಣಿ ಶಿಬಿರ ಉದ್ಘಾಟಿಸಿದ ಪ್ರಗತಿಪರ ಕೃಷಿಕ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಆಧಾರ್ ಅತ್ಯಗತ್ಯ ದಾಖಲೆಪತ್ರಗಳಲ್ಲಿ ಒಂದು. ಸರಕಾರದ ಸವಲತ್ತುಗಳು ಜನರಿಗೆ ದೊರಕಲು ದಾಖಲೆಗಳು ಸಮರ್ಪಕವಾಗಿ ಇರಬೇಕು. ಈ ನಿಟ್ಟಿನಲ್ಲಿ ಆದಾರ್ ನೋಂದಣಿ ಶಿಬಿರ ಜನರಿಗೆ ಪ್ರಯೋಜನಕಾರಿಯಾಗಿದೆ ಎಂದರು.


ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಆಧಾರ್ ಕಾರ್ಡ್ ಸಮರ್ಪಕವಾಗಿ ಇರದಿದ್ದರೆ ಸರಕಾರಿ ಸವಲತ್ತು ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ‌ಈ ನಿಟ್ಟಿನಲ್ಲಿ ಅಂಚೆ ಇಲಾಖೆ ಸಂಘ ಸಂಸ್ಥೆಗಳ ಸಹಯೋಗ ಪಡೆದು ಗ್ರಾಮಾಂತರ ಪ್ರದೇಶದಲ್ಲಿ ಶಿಬಿರ ಆಯೋಜನೆಗೆ ಯುವಕ ಮಂಡಲ ಒತ್ತು ನೀಡಿರುವುದು ಶ್ಲಾಘನೀಯ ಎಂದರು.
ನೇಸರ ಯುವಕ ಮಂಡಲ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ನೇಸರ ಯುವಕ ಮಂಡಲದ ಸಮಾಜಮುಖಿ ಕಾರ್ಯಚಟುವಟಿಕೆಗಳ ಅಂಗವಾಗಿ ಕೈಗೊಂಡಿರುವ 50 ನೇ ಕಾರ್ಯಕ್ರಮ ಇದಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ಆಧಾರ್, ಆಯುಷ್ಮಾನ್ ನೋಂದಣಿ ಸೇರಿದಂತೆ ಹತ್ತಾರು ಚಟುವಟಿಕೆಗಳು ನಡೆದಿದೆ. ನಾವು ಪ್ರಶಸ್ತಿಗೋಸ್ಕರ ಕಾರ್ಯಕ್ರಮ ಆಯೋಜನೆ ಮಾಡುವುದಿಲ್ಲ. ತಳಮಟ್ಟದ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮ‌ಕೆಲಸ ಎಂದರು.

ಬಾಳಿಲ ಶಾಖಾ ಅಂಚೆ ಪಾಲಕ ಪ್ರಜ್ವಲ್ ಸಿ.ವಿ ಅವರು ಅಂಚೆ ಇಲಾಖೆಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯೆ ಗುಲಾಬಿ ಬೊಮ್ಮೆಮ್ಮಾರು, ಪ್ರಗತಿಪರ ಕೃಷಿಕ ಸಂಜೀವ ಗೌಡ ಬೈಲಂಗಡಿ, ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಪೆರುವಾಜೆ ಡಾ.ಶಿವರಾಮ ಕಾರಂತ ಸ.ಪ್ರ.ದ.ಕಾಲೇಜು ಹಿ.ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ಪೆರುವಾಜೆ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೊ.ಬೆಳ್ಳಾರೆ ವಲಯ‌ ಪೆರುವಾಜೆ ಒಕ್ಕೂಟದ ಸೇವಾ ನಿರತೆ ಪ್ರಿಯಾ ಸ್ವಾಗತಿಸಿ, ಏನೆಕಲ್ಲು ಶಾಖಾ ಅಂಚೆ ಕಚೇರಿ ಪಾಲಕಿ ದೀಕ್ಷಾ ನೀರ್ಕಜೆ ನಿರೂಪಿಸಿದರು.

50 ಗುರಿ : 63 ಮಂದಿ ಭಾಗಿ
ಒಟ್ಟು 50 ಆಧಾರ್ ಗುರಿ‌ ನಿಗದಿಪಡಿಸಲಾಗಿದ್ದರೂ ಒಟ್ಟು 63 ಮಂದಿ ಶಿಬಿರದ ಪ್ರಯೋಜನ ಪಡೆದರು. ಅಂಚೆ ಅಪಘಾತ ವಿಮಾ ಸೌಲಭ್ಯವನ್ನು ಪಡೆದುಕೊಂಡರು. ಸುಬ್ರಹ್ಮಣ್ಯ ಅಂಚೆ ಕಚೇರಿ ಸಿಬಂದಿ ಮೋಹಿತ್, ಮುಕ್ಕೂರು ಶಾಖಾ ಕಚೇರಿ ಅಂಚೆ ಪಾಲಕಿ ಶಿಲ್ಪ, ಏನೆಕಲ್ಲು ಶಾಖಾ ಕಚೇರಿ ಅಂಚೆ ಪಾಲಕಿ ದೀಕ್ಷಾ ನೀರ್ಕಜೆ ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದರು. ನೇಸರ ಯುವಕ ಮಂಡಲದ ಮಹೇಶ್, ರವಿ ಕುಂಡಡ್ಕ, ಪ್ರವೀಣ್, ರವೀಂದ್ರ, ಶೀನ, ರಾಮಚಂದ್ರ ಮೊದಲಾದವರು ವಿವಿಧ ವಿಭಾಗದಲ್ಲಿ ಸಹಕರಿಸಿದರು.