ಮೇ 18 ರಂದು ಶ್ರೀ ಕೇಶವಕೃಪಾದ ವೇದ-ಯೋಗ-ಕಲಾ ಶಿಬಿರದ ಸಮಾರೋಪ : ವೆಂಕಟೇಶ್ ಶಾಸ್ತ್ರಿ, ಡಾ. ಆರ್.ಕೆ.ನಾಯರ್, ಕಾಂಚನ ಈಶ್ವರ ಭಟ್‌ರಿಗೆ ಕೇಶವಸ್ಮೃತಿ ಪ್ರಶಸ್ತಿ ಪ್ರದಾನ

0

ಸುಳ್ಯದ ಶ್ರೀ ಕೇಶವಕೃಪಾದ ವೇದ-ಯೋಗ-ಕಲಾ ಶಿಬಿರದ ಸಮಾರೋಪ ಸಮಾರಂಭ ಮೇ. ೧೮ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಕೇಶವಕೃಪಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ್ ಭಟ್ ತಿಳಿಸಿದ್ದಾರೆ.
ಮೇ. ೧೩ರಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರವು ತನ್ನದೇ ಆದ ವಿಶಿಷ್ಟ ಕಾರ್ಯಕ್ರಮಗಳಿಂದ ರಾಜ್ಯ ಹಾಗೂ ಅಂತರ್‌ರಾಜ್ಯಗಳಲ್ಲಿ ಜನಮೆಚ್ಚುಗೆ ಗಳಿಸಿದ ವೇದ-ಯೋಗ-ಕಲಾ ಶಿಬಿರವಾಗಿ ಇದೀಗ ಇಪ್ಪತ್ತೈದನೇ ವರ್ಷದಲ್ಲಿ ಸಂಪನ್ನಗೊಂಡಿರುತ್ತದೆ.

ಸಣ್ಣ ಮಕ್ಕಳ ದೊಡ್ಡ ರಜೆ ಆರಂಭವಾದೊಡನೆ ಹಲವಾರು ಶಿಬಿರಗಳು ಆರಂಭಗೊಳ್ಳುತ್ತದೆ. ನಾಟಕ ಶಿಬಿರ, ರಂಗ ತರಬೇತಿ ಶಿಬಿರ, ಚಿಣ್ಣರ ಶಿಬಿರ. ನಾಯಕತ್ವ ಶಿಬಿರ ಸೇರಿದಂತೆ ಇನ್ನಿತರ ಶಿಬಿರಗಳು ಅಲ್ಲಲ್ಲಿ ನಡೆದರೂ ಭಾರತದ ಸಾಂಸ್ಕೃತಿಕ ಮೌಲ್ಯಗಳಿಗೆ ಪ್ರಧಾನ ಭೂಮಿಕೆಗಳಾದ ವೇದ ಶಿಬಿರಗಳು ಮಾತ್ರ ಎಲ್ಲೋ ಕೆಲವು ಕಡೆ ನಡೆಯುತ್ತದೆಯಷ್ಟೆ.

ಅಂತಹ ವೇದ ಶಿಬಿರಗಳಲ್ಲಿ ಒಂದಾದ ಸುಳ್ಳದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರವು ಕಳೆದ ೨೫ ವರ್ಷಗಳಿಂದ ಸಂಪೂರ್ಣ ಉಚಿತವಾಗಿ ವೇದ-ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಸನ, ವಸನ, ವಸತಿ, ಪಠ್ಯ ಪುಸ್ತಕಗಳೂ, ವ್ಯಾಸಪೀಠ ಇತ್ಯಾದಿಗಳನ್ನು ನೀಡಿ ಸಂಪೂರ್ಣ ಉಚಿತವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.

ವಿಶಿಷ್ಟವಾದ ವೇದ ಯೋಗ ಕಲಾ ಶಿಬಿರ
ಇಲ್ಲಿನ ವೇದ ಶಿಬಿರದ ವಿಶೇಷತೆಯೇನೆಂದರೆ ಇಲ್ಲಿ ಬರೇ ವೇದ ಪಾಠ ಮಾತ್ರವಲ್ಲದೆ ವೇದಾಂತರ್ಗತವಾದ ಜೀವನ ದರ್ಶನವನ್ನು ಜನಮಾನಸಕ್ಕೆ ಸಮರ್ಥವಾಗಿ ತಲುಪಿಸಲು ಮಾಧ್ಯಮವಾದ ಯೋಗಾಭ್ಯಾಸ, ಭಜನೆ, ಸಂಕೀರ್ತನೆಗಳು, ಹಾಡು-ಕುಣಿತ ಮುಂತಾದವುಗಳೂ ಅಲ್ಲದೆ ಇಂದಿನ ಮಕ್ಕಳಲ್ಲಿ ರಾಷ್ಟ್ರಪ್ರೇಮದ ಭಕ್ತಿ ತರಂಗವನ್ನು ಮೂಡಿಸುವ ಹಲವಾರು ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಜಾದೂ, ಮಿಮಿಕ್ರಿ, ವೇದಗಣಿತ, ಮಾತುಗಾರಿಕೆ, ಜಾನಪದ ನೃತ್ಯಗಳು, ಹಾವುಗಳ ಮಾಹಿತಿ, ಯಕ್ಷಗಾನ ರಂಗಕಲೆ, ರಂಗಪಾಠಗಳು. ರಂಗಗೀತೆ, ಚಿತ್ರಕಲೆ ಹೀಗೆ ಹಲವಾರು ವಿ?ಯಗಳಲ್ಲಿ ರಾಜ್ಯದ ಸುಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಣ ನೀಡಲಾಗುತ್ತದೆ. ಅಲ್ಲದೇ ಕಳೆದ ನಾಲ್ಕಾರು ವರ್ಷಗಳಿಂದ ಮತ್ತೂ ಒಂದು ಹೆಜ್ಜೆ ಮುಂದಡಿಯಿಟ್ಟು ಇದೇ ಶಿಬಿರದಲ್ಲಿ ಮೂರು ವರ್ಷಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಅಗ್ನಿಮುಖ ಪ್ರಯೋಗ ಹಾಗೂ ದುರ್ಗಾಸಪ್ತಶತೀ ಪಾಠಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಋಗ್ವೇದ ಹಾಗೂ ಯಜುರ್ವೇದ ವಿಭಾಗಗಳಲ್ಲಿ ಒಟ್ಟು ೬ ತರಗತಿಗಳು ನಡೆದಿದ್ದು, ರಾಜ್ಯದ ಪ್ರಸಿದ್ಧ ವೇದ ವಿದ್ವಾಂಸರು, ಕಲಾ ತಜ್ಞರು, ಯೋಗ ಶಿಕ್ಷಕರು, ಅಧ್ಯಾಪಕರಾಗಿ ಭಾಗವಹಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಶ್ರೀ ಕೇಶವಕೃಪಾ ವೇದ ಶಿಬಿರಕ್ಕೆ ವರ್ಷದಿಂದ ವರ್ಷಕ್ಕೆ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅವಕಾಶಕ್ಕಾಗಿ ಹೆಸರು ನೋಂದಾಯಿಸುತ್ತಿದ್ದು, ಈ ವರ್ಷ ೧೧೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಅವಕಾಶಕ್ಕಾಗಿ ನಿವೇದಿಸಿಕೊಂಡಿದ್ದು, ಇವರೆಲ್ಲರಿಗೂ ಪ್ರವೇಶ ಪರೀಕ್ಷೆ (Iಟಿಣeಡಿvieತಿ) ನಡೆಸಿ ಈ ವರ್ಷದಲ್ಲಿ ೮೦ ಜನ ಹೊಸ ವಿದ್ಯಾರ್ಥಿಗಳಿಗೆ ಹಾಗೂ ಹಿಂದಿನ ವರ್ಷಗಳ ೧೨೦ ಜನ ವಿದ್ಯಾರ್ಥಿಗಳು ಸೇರಿ ಒಟ್ಟು ೨೦೦ ವಿದ್ಯಾರ್ಥಿಗಳಗಷ್ಟೇ ಅವಕಾಶ ಕಲ್ಪಿಸಲಾಗಿದೆ.


ಸಮಾಪನಾ ಸಮಾರಂಭ:
ಮೇ. ೧೮ರಂದು ಭಾನುವಾರವಾರ ಸಾಯಂಕಾಲ ಗಂಟೆ ೩.೦೦ ಕ್ಕೆ ಸಮಾಪನಾ ಸಮಾರಂಭ ನಡೆಯಲಿದ್ದು, ಸಮಾರಂಭದಲ್ಲಿ ಸಮಾಪನಾ ಸಮಾರಂಭ ಹಾಗೂ ಕೇಶವಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಮಾರಂಭದಲ್ಲಿ ಆರ್ಶೀವಚನವನ್ನು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಮಾಡಲಿದ್ದು, ಬೆಂಗಳೂರಿನ ಖ್ಯಾತ ಆರ್ಯುವೇದದ ವೈದ್ಯರಾದ ಡಾ. ಗಿರಿಧರ ಕಜೆಯವರು ಅಧ್ಯಕ್ಷತೆಯನ್ನು ವಹಿಸಲಿದ್ದು ಗಣ್ಯರನ್ನು ಕೇಶವಸ್ಮೃತಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ. ಸನ್ಮಾನಿತರ ಬಗ್ಗೆ ಅಭಿನಂದನ ಭಾಷಣವನ್ನು ಬೆಳಾಲು ಧ.ಮಂ.ಕಾಲೇಜಿನ ನಿವೃತ್ತ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ಮಾಡಲಿದ್ದಾರೆ. ಸುಳ್ಯ ಶಿವಕೃಪಾ ಕಲಾಮಂದಿರದ ಮಾಲಕ ಶ್ರೀ ಹರೀಶ್ ಕುಮಾರ್ ಕೆ. ಇವರು ಮುಖ್ಯ ಅಭ್ಯಾಗತರಾಗಿ ಶುಭಾಶಂಸನೆ ಮಾಡಲಿದ್ದಾರೆ. ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದು ಶುಭ ಹಾರೈಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್, ಗುರುಗಳಾದ ವೇ| ಮೂ| ಸುದರ್ಶನ್ ಭಟ್ ಉಜಿರೆ, ಹಿರಿಯ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಬಲರಾಮ ಭಟ್ ಶಿವನಿವಾಸ, ಶಿಬಿರದ ಪ್ರಬಂಧಕಿ ಕು| ಯಶಸ್ವಿ ಮುಂಡಕಜೆ ಉಪಸ್ಥಿತರಿದ್ದರು.