ಸಂಪಾಜೆ ಗ್ರಾಮ ಪಂಚಾಯತ್ ಮಹಿಳಾ ಗ್ರಾಮ ಸಭೆ

0

ಮಹಿಳಾ ಕಾನೂನು ಹಾಗೂ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಗಾರ

ದ.ಕ ಸಂಪಾಜೆ ಗ್ರಾಮ ಪಂಚಾಯತ್ “ಮಹಿಳಾ ಗ್ರಾಮಸಭೆ” ಯು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ಸಂಪಾಜೆ ಗ್ರಾಂ.ಪಂ ಸಭಾಂಗಣದಲ್ಲಿ ಮೇ.20 ರಂದು ಜರುಗಿತು.

ಬಳಿಕ ಸಭೆಯಲ್ಲಿ ವಿವಿಧ ಇಲಾಖೆಗಳಿಂದ ಸಾವರ್ಜನಿಕರಿಗೆ ಲಭಿಸುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

“ಮಹಿಳೆ ಮತ್ತು ಕಾನೂನು” ಸುಳ್ಯ ವಕೀಲರು ಲತಾಕುಮಾರಿ ಮಾತನಾಡಿ ” ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಆಗುವ ಶೋಷಣೆಯನ್ನು ತಪ್ಪಿಸಲು ಮತ್ತು ಭಯವನ್ನು ಹೋಗಲಾಡಿಸಲು ಕಾನೂನಿನ ಅರಿವು ಹೊಂದಿರಬೇಕು. ಹಲವು ದೌರ್ಜನ್ಯವನ್ನು ತಪ್ಪಿಸಲು ಇಂದಿನ ದಿನಗಳಲ್ಲಿ ಹೊಸ ಹೊಸ ಕಾನೂನನ್ನು ಜಾರಿಗೆ ತರಲಾಗಿರುವ ಬಗ್ಗೆ ಮಾಹಿತಿ ನೀಡಿದರು. ಸಂವಿಧಾನದ 14ನೇ ವಿಧಿಯಲ್ಲಿ ಬರುವ ಸಮಾನತೆಯ ಬಗ್ಗೆ ತಿಳಿಸಿದರು.

ಸುಳ್ಯ ತಾಲೂಕು ಪಂಚಾಯತ್ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಧಿಕಾರಿ ಮೇರಿ ಎಸ್. “ಒಂದು ಮಹಿಳೆ ಆದಾಯ ಗಳಿಸಬೇಕು ಮತ್ತು ಮಹಿಳೆಗೆ ಒಂದು ಉದ್ಯೋಗ ಇರಬೇಕು ಇದನ್ನು ಸಂಜೀವಿನಿ ಒಕ್ಕೂಟದ ಮೂಲಕ ಸದುಪಯೋಗಪಡಿಸಿಕೊಳ್ಳಬಹುದು. ಫುಡ್ ತಯಾರಿಕೆಗೆ ಫುಡ್ ಲೈಸೆನ್ಸ್ ಕಡ್ಡಾಯವಾಗಿರುತ್ತದೆ. ಲೇಬಲ್ ನ ಅವಶ್ಯಕತೆ ಇರುತ್ತದೆ. ಘನ ತ್ಯಾಜ್ಯ ನಿರ್ವಹಣೆಯನ್ನು ಸಂಜೀವಿನಿ ಒಕ್ಕೂಟದ ಮೂಲಕವೇ ಮಾಡಬೇಕು. ಸಂಜೀವಿನಿ ಮೂಲಕ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಅಥವಾ ಕಟ್ಟಡ ರಚನೆ ಬಗ್ಗೆ ಪ್ರಸ್ತಾಪ, ಅಕ್ಕ ಕೆಫೆಯನ್ನು ತೆರೆಯುವ ಬಗ್ಗೆ ಪ್ರಸ್ತಾವನೆ, ಗ್ರಾಮ ಪಂಚಾಯತ್ ಸಹಕಾರ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ರಾಷ್ಟೀಯ ಕೃಷಿ ವಿಕಾಸ ಯೋಜನೆ” ಗೇರು ಕೃಷಿ ಇದರ ಬಗ್ಗೆ ವಿಜ್ಞಾನಿ ( ಗೇರು ಸಂಶೋಧನಾ ಮಂಡಳಿ , ಪುತ್ತೂರು) ಡಾ. ಅಶ್ವತಿ ಮಾತನಾಡಿ ” ಸಂಪಾಜೆ ಗ್ರಾಮಕ್ಕೆ ಗೇರು ಸಂಶೋಧನಾ ಮಂಡಳಿಯಿಂದ ಒಂದು ಪ್ರಾಜೆಕ್ಟ್ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಿದ್ದು ಯಶಸ್ವಿಯಾಗಿದೆ. ಇದರಿಂದ ಕೃಷಿಕರಿಗೆ ಗೇರು ಗಿಡಗಳು, ಯಂತ್ರೋಪಕರಣಗಳು, ಹಾಗೂ ಅವಶ್ಯಕತೆ ಇದ್ದಲ್ಲಿ ಎಫ್ ಪಿ . ಓ ಮುಂತಾದ ಸೌಲಭ್ಯಗಳನ್ನು ಕೊಡಲು ಸಾಧ್ಯವಿದೆ. ಇದಕ್ಕೆ ಗ್ರಾಮ ಪಂಚಾಯತ್, ಸ್ವ ಸಹಾಯ ಸಂಘದ ಸದಸ್ಯರುಗಳು ಮತ್ತು ಗ್ರಾಮದ ಜನರ ಸಹಕಾರ ಬಹಳ ಮುಖ್ಯ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಜೊತೆಗೆ ನಮ್ಮ ಸಂಸ್ಥೆಯು ಸಂಪರ್ಕದಲ್ಲಿ ಇದ್ದುಕೊಂಡು ಉತ್ತಮ ರೀತಿಯ ಫಲಿತಾಂಶವನ್ನು ನೀಡಲು ಸಹಕಾರಿಯಾಗಿದೆ” ಎಂದರು

ಆಲೆಟ್ಟಿ ಗ್ರಾಮದ ಪ್ರಗತಿಪರ ಕೃಷಿಕರಾದ ಅಶೋಕ್ ಪ್ರಭು ತಾಳೆ ಕೃಷಿಯ ಬಗ್ಗೆ ಮಾಹಿತಿ ನೀಡಿ “ತಾಳೆ ಕೃಷಿಯನ್ನು ಮಾಡಬಹುದಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಂಬಲ ಬೆಲೆ ಇರುವುದರಿಂದ ಹೆಚ್ಚಿನ ಲಾಭವನ್ನು ಕೃಷಿಕರು ಪಡೆದುಕೊಳ್ಳಬಹುದು. ನಾನು ಈಗಾಗಲೇ ಹತ್ತು ಎಕರೆ ಜಮೀನಿನಲ್ಲಿ ತಾಳೆ ಕೃಷಿಯನ್ನು ಮಾಡುತ್ತಿದ್ದೇನೆ. ಆಸಕ್ತಿ ಇರುವವರು, ಆಸಕ್ತಿ ಇಲ್ಲದವರು ಯಾರು ಬೇಕಾದರೂ ಬಂದು ನೋಡಬಹುದು ಮತ್ತು ನೋಡಿ ಆದಮೇಲೆ ಆಸಕ್ತಿ ಉಂಟಾದಲ್ಲಿ ತಾಳೆ ಕೃಷಿಯನ್ನು” ಮಾಡಬಹುದು ಎಂದರು.

ಅರಂತೋಡು ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ICDS ದೀಪಿಕಾ ಪಿ ಮೇಲ್ವಿಚಾರಕಿ ” ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ, ಕಾನೂನು, ರಕ್ಷಣೆ ” ಹಾಗೂ ಕಲ್ಲುಗುಂಡಿ ಅಂಗನವಾಡಿ ಕೇಂದ್ರದಲ್ಲಿ ಎಲ್ ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳು ನಡೆಸುವ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಮಿಷನ್ ಸಂಯೋಜಕರು ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಯ ” ಪ್ರಧಾನ ಮಂತ್ರಿ ಮಾತೃವಂದನ ಯೋಜನೆ, ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯಗಳಾದಾಗ ನಡೆಸಬಹುದಾದ ಆಪ್ತ ಸಮಾಲೋಚನೆ, ವೈದ್ಯಕೀಯ ಸೌಲಭ್ಯ, ಉದ್ಯೋಗಸ್ಥ ಮಹಿಳೆಯರಿಗೆ ಸಣ್ಣ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದೆ ಇರುವ ಸಂದರ್ಭದಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ” ನೀಡಿದರು.
ತಾಲೂಕು ಪಂಚಾಯತ್ ಕ್ಲಸ್ಟರ್ ಸೂಪರ್ ವೈಸರ್ ಎನ್ ಆರ್ ಎಲ್ ಎಂ ಡೆಲ್ಲಾರಿಯೋ ಅವಿನಾಶ್ ” ಸ್ವಸಹಾಯ ಸಂಘಗಳ ಬಗ್ಗೆ ಮಾಹಿತಿ, ಸಾಲ ಸೌಲಭ್ಯ, ಮನೆಯಲ್ಲಿ ತಯಾರಿಸಿರುವ ಉತ್ಪನ್ನಗಳಿಗೆ ಉತ್ತಮ ರೀತಿಯಲ್ಲಿ ಮಾರುಕಟ್ಟೆ ಒದಗಿಸುವ ರೀತಿಯ” ಬಗ್ಗೆ ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ಆಪ್ತ ಸಮಾಲೋಚಕಿ ಸುಜಾತ ” ಕೆನರಾ ಬ್ಯಾಂಕ್ ಬ್ಯಾಂಕ್ ನಿಂದ ಸಿಗಬಹುದಾದ ಸಾಲ ಹಾಗೂ ಪ್ರಧಾನ ಮಂತ್ರಿ , ಜೀವನ್ ಜ್ಯೋತಿ, ಸುರಕ್ಷಾ ಯೋಜನೆ , ಹಾಗೂ 50000 ಮೊತ್ತ ಸಾಲ ಪಡೆದಲ್ಲಿ ಶೇ.7% ಬಡ್ಡಿ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಪಾಜೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅಧ್ಯಕ್ಷರು ಶಿಲ್ಪಾ ಸನತ್ ತಾಳೆ ಬೆಳೆ ಕೃಷಿ 3F ಆಯಿಲ್ ಕಂಪನಿಯ ಕ್ಲಸ್ಟರ್ ಸೂಪರ್ ವೈಸರ್ ರವಿಶಂಕರ್, ಶ್ರೀಮತಿ ಪುಷ್ಪಲತಾ ಕೆ ಆರ್ PHC ಅರಂತೋಡು, ಶ್ರೀಮತಿ ಚಿತ್ರ ಐ CHO ಗೂನಡ್ಕ, ಹರ್ಷಿತ ಗೂನಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಲೆಸ್ಸಿ ಮೊನಾಲಿಸಾ, ಜಗದೀಶ್ ರೈ, ರಜನಿ ಶರತ್, ಸುಶೀಲಾ ಪಿ, ಮಾಜಿ ಅಧ್ಯಕ್ಷರಾದ ಯಮನ ಬಿ ಎಸ್, ಸುಂದರಿ ಮುಂಡಡ್ಕ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು, ಗ್ರಾಮಸ್ಥರು ಮತ್ತು ಮಹಿಳೆಯರು ಉಪಸ್ಥಿತರಿದ್ದು ಮಾಹಿತಿಯನ್ನು ಪಡೆದುಕೊಂಡರು.

ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಓಲ್ಗಾ ಡಿ’ಸೋಜಾ ಸ್ವಾಗತಿಸಿ, ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಕಾರ್ಯಕ್ರಮ ನಿರೂಪಿಸಿ , ಗ್ರಾಮ ಪಂಚಾಯತ್ ಸದಸ್ಯರಾದ ರಜನಿ ಶರತ್ ವಂದಿಸಿದರು. ಕೊನೆಗೆ ರಾಷ್ಟ್ರ ಗೀತೆಯೊಂದಿಗೆ ಗ್ರಾಮ ಸಭೆ ಮುಕ್ತಾಯಗೊಂಡಿತು.