ನಾಳೆ (ಮೇ. 31 ) : ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಸ್. ಸೇವಾ ನಿವೃತ್ತಿ

0

ಕುಕ್ಕುಜಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಸ್. ಇವರು ಮೇ 31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಸಾಂತ್ಯಡ್ಕಜಾಲು ದಿ. ಹೊನ್ನಪ್ಪ ಮಾಸ್ತರ್ ಮತ್ತು ಶ್ರೀಮತಿ ನೇತ್ರಾವತಿ ದಂಪತಿಗಳ ಪುತ್ರಿಯಾಗಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ. ಶಾಲೆ ನೂಜಿಬಾಳ್ತಿಲ, ಪ್ರೌಢ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಕಡಬ ಮತ್ತು ಶಿಕ್ಷಕ ತರಬೇತಿಯನ್ನು ಸರ್ವೋದಯ ತರಬೇತಿ ಸಂಸ್ಥೆ ವಿರಾಜಪೇಟೆಯಲ್ಲಿ ಪೂರೈಸಿರುತ್ತಾರೆ.

1994 ಜುಲೈ 28 ರಂದು ಪುತ್ತೂರು ತಾಲೂಕಿನ ಇರ್ದೆ ( ಉಪ್ಪಳಿಗೆ) ಸ.ಹಿ.ಪ್ರಾ. ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿ 1997 ರಲ್ಲಿ ಕುಕ್ಕುಜಡ್ಕ ಸ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡರು. ಅಲ್ಲಿ ಸುಮಾರು 22 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ 2019 ರಲ್ಲಿ ಸ.ಹಿ.ಪ್ರಾ. ಶಾಲೆ ಪೈಲಾರಿಗೆ ಹೆಚ್ಚುವರಿ ಶಿಕ್ಷಕಿಯಾಗಿ ವರ್ಗಾವಣೆಗೊಂಡು 4 ತಿಂಗಳ ಕಾಲ ಸೇವೆ ಸಲ್ಲಿಸಿ, ಬಳಿಕ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರಕ್ಕೆ ವರ್ಗಾವಣೆಗೊಂಡಿರುತ್ತಾರೆ.
2022 ರಲ್ಲಿ ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ಹೊಂದಿ ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಗೆ ಸೇರ್ಪಡೆಗೊಂಡರು.

ತಮ್ಮ ಸೇವಾ ಅವಧಿಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ, ಮಕ್ಕಳ ಕಲಿಕೆಗೆ ಮತ್ತು ಸಹಪಠ್ಯ ಚಟುವಟಿಕೆಗಳಿಗೆ ಪ್ರಮುಖ ಆದ್ಯತೆಯನ್ನಾಗಿ ನೀಡಿ ಸೇವಾ ಅವಧಿಯನ್ನು ಯಶಸ್ವಿಯಾಗಿ ಪೂರೈಸಿ ಇದೀಗ ಮೇ. 31 ರಂದು ವೃತ್ತಿಯಿಂದ ನಿವೃತ್ತಿಯನ್ನು ಹೊಂದಲಿದ್ದಾರೆ.

ಇವರ ಪತಿ ಲೋಕನಾಥ ಮಾಸ್ತರ್ ಕಡಪಳ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಪ್ರಸ್ತುತ ಕೃಷಿಕರಾಗಿದ್ದಾರೆ. ಹಿರಿಯ ಪುತ್ರ ಪ್ರಜ್ವಲ್ ಕೆ.ಎಲ್., ಸೊಸೆ ಪೃಥ್ವಿ ಪಿ.ಎಚ್. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುತ್ತಾರೆ. ಕಿರಿಯ ಪುತ್ರ ಕೌಶಲ್ ಕೆ.ಎಲ್. ಇಂಜಿನೀಯರ್ ಪದವಿಧರರಾಗಿದ್ದು ಮಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.